ವಿಜಯಪುರದ ಜೈ ಕರ್ನಾಟಕ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ದಾನೇಶ ಅವಟಿ, ಗೀತಾ ಕಟ್ಟಿ, ತೇಜಸ್ವಿನಿ ವಗ್ಯಾನವರ ಮತ್ತಿತರರಿದ್ದಾರೆ.
- ನ್ಯಾಯವಾದಿ ದಾನೇಶ ಅವಟಿ ಅಭಿಮತ
- ಕಾನೂನು ಅರಿವು ಕಾರ್ಯಕ್ರಮ
ವಿಜಯಪುರ : ಪ್ರತಿಯೊಬ್ಬ ಮಹಿಳೆಯರು ಶೋಷಣೆಗೆ ಒಳಗಾಗದೇ, ತಮಗಿರುವ ಸಂವಿಧಾನಬದ್ಧ ಹಕ್ಕುಗಳನ್ನು ಅರಿತುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ನ್ಯಾಯವಾದಿ ದಾನೇಶ ಅವಟಿ ಹೇಳಿದರು.
ನಗರದ ಸಿಂದಗಿ ನಾಕಾ ಬಳಿಯ ಜೈ ಕರ್ನಾಟಕ ಕಾಲನಿಯಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ವತಿಯಿಂದ ನಗರ ಸ್ಲಂ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದವರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ, ಮಹಿಳೆಯರಿಗೆ ಇರುವ ಕಾನೂನುಗಳು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯುವ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮ ಸಂಯೋಜಕಿ ಗೀತಾ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ದಿನವೂ ಒಂದಲ್ಲ ಒಂದು ರೀತಿ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಅನೇಕರ ಶಿಕ್ಷಣ, ಸಂಘಟನೆ, ಕಾನೂನಿನ ಅರಿವು, ಸರ್ಕಾರದ ಯೋಜನೆಗಳ ಮಾಹಿತಿ ಕೊರತೆಯಿಂದ ತೊಂದರೆ ಪಡುತ್ತಾರೆ, ಹೀಗಾಗಿ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾರ್ವಜನಿಕರಲ್ಲಿ ಹೊಸತನ ಮೂಡಿಸಿದೆ ಎಂದರು.
ಆರತಿ, ಭಾರತಿ, ರಿಯಾನಾ, ರೇಷ್ಮಾ, ಹೀನಾ ಮತ್ತಿತರರಿದ್ದರು. ತೇಜಸ್ವಿನಿ ವಗ್ಯಾನವರ ಸಂವಿಧಾನ ಪೀಠಿಕೆ ಬೋಧಿಸಿದರು. ಲಕ್ಷ್ಮೀ ಸವಣೂರ ನಿರೂಪಿಸಿದರು. ಶಬಾನಾ ಕುಣಬಿ ವಂದಿಸಿದರು.