ದೊಡ್ಡಬಳ್ಳಾಪುರ ತಾಲೂಕು ಕಚೇರಿ. 
ರಾಜ್ಯ

ಅರ್ಹರಕೈ ಸೇರದ ಸಾಗುವಳಿ ಚೀಟಿ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್
ವೆಂಕಟರಾಜು ಎಸ್​, ದೊಡ್ಡಬಳ್ಳಾಪುರ
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಭೂಮಿ ಉಳುಮೆ ಮಾಡಿಕೊಂಡು ಜೀವನ ರೂಪಿಸಿಕೊಂಡಿರುವ ರೈತರಿಗಾಗಿ ಸಾಗುವಳಿ ಚೀಟಿ ನೀಡಿ ಆಸರೆಯಾಗಬೇಕಾದ ಸರ್ಕಾರ ಈವರೆಗೂ ಹಕ್ಕುಪತ್ರ ನೀಡುವ ಗೋಜಿಗೆ ಮುಂದಾಗಿಲ್ಲ.
ಸುಮಾರು 30 ವರ್ಷಗಳಿಂದ ಕೃಷಿ ಮಾಡಿಕೊಂಡಿರುವ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ನಮೂನೆ&53ರಲ್ಲಿ ಅರ್ಜಿ ಸಲ್ಲಿಸಿದ ರೈತರು ತಾಲೂಕು ಕಚೇರಿ, ಕಂದಾಯ ಇಲಾಖೆಗೆ ಅಲೆದು ಅಲೆದು ಚಪ್ಪಲಿಗಳು ಸವೆದದ್ದು ಬಿಟ್ಟರೆ, ಒಂದೇ ಒಂದು ಪೂರಕ ಕೆಲಸವಾಗಿಲ್ಲ. ಮುಖ್ಯವಾಗಿ ಸರ್ಕಾರ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ರೈತರಿಗೆ ಹಕ್ಕುಪತ್ರ ನೀಡುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಭೂ ಮಂಜೂರಾತಿ ಸಮಿತಿ ರಚಿಸಿದೆ. ಆದರೆ, ತಾಲೂಕಿನಲ್ಲಿ ಭೂ ಮಂಜೂರಾತಿ ಸಮಿತಿ ಕಳೆದ ಮೂರು ವರ್ಷಗಳಿಂದ ಬೆರಳೆಣಿಕೆಯಷ್ಟು ಸಭೆ ನಡೆಸಿರುವುದನ್ನು ಬಿಟ್ಟರೆ, ಮುಂದುವರಿದ ಭಾಗವಾಗಿ ಲ ಕಂಡಿಲ್ಲ.
ಮೂವರು ತಹಸೀಲ್ದಾರ್​ಗಳು ಬದಲಾದರೂ ಒಬ್ಬ ಅರ್ಹ ರೈತನಿಗೆ ಸಾಗುವಳಿ ಚೀಟಿ ವಿತರಣೆ ಮಾಡಿಲ್ಲ ಎಂಬುದೇ ದೊಡ್ಡ ಆರೋಪ. ಹಲವು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿರುವ ರೈತರು, ತಹಸೀಲ್ದಾರ್​ ಕಚೇರಿ ಹಾಗೂ ತಾಲೂಕು ಆಡಳಿತ ಸುತ್ತಿದ್ದಾರಷ್ಟೆ. ಇದೆಲ್ಲದರ ನಡುವೆ ತಾಲೂಕಿನಲ್ಲಿ ಹೆಚ್ಚುತ್ತಿರುವ ಭೂಸ್ವಾಧಿನದ ಪೆಡಂಭೂತ ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಭೂದಾಖಲೆ ಇಲ್ಲದೆ ಪರದಾಟ : ರೈತ ಕುಟುಂಬಗಳು ಹಲವು ತಲೆಮಾರುಗಳಿಂದ ಸರ್ಕಾರದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿವೆ. ಜಮೀನಿನ ದಾಖಲೆ ಇಲ್ಲದ ಕಾರಣ ಬ್ಯಾಂಕ್​ ಸಾಲ, ಬೆಳೆ ವಿಮೆ ಸೇರಿ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಳೆ, ಬೆಳೆ ಹಾನಿ, ಆರ್ಥಿಕ ಸಂಕಷ್ಟಗಳನಡುವೆಯೂ ಹಕ್ಕುಪತ್ರ ಸಿಗದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ. ಯಾವಾಗ ಬೇಕಾದರೂ ಜಮೀನು ಖಾಲಿ ಮಾಡುವಂತೆ ನೋಟಿಸ್​ ಕೊಡುತ್ತಾರೋ ಎಂಬ ಭಯದಲ್ಲಿ ರೈತರು ಬದುಕು ಸಾಗಿಸುತ್ತಿದ್ದಾರೆ. ಮತ್ತೊಂದೆಡೆ, ಕೆಲ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಾಗೂ ರಾಜಸ್ವ ಇಲಾಖೆಗಳ ನಡುವಿನ ಗೊಂದಲವೂ ಸಮಸ್ಯೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಏಪ್ರಿಲ್​ನಲ್ಲಿ ಭರವಸೆ, ಮೇ ಆದರೂ ಕ್ರಮವಿಲ್ಲ : 2026ರ ಏಪ್ರಿಲ್​ 13ರಂದು ದೊಡ್ಡಬಳ್ಳಾಪುರ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಧೀರಜ್​ ಮುನಿರಾಜು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಂದಾಯ ಅದಾಲತ್​ನಲ್ಲಿ ತಿಂಗಳಾಂತ್ಯಕ್ಕೆ ಬಗರ್​ಹುಕುಂ ಸಮಿತಿ ಸಭೆ ನಡೆಸಿ ರೈತರಿಗೆ ಭೂ ಮಂಜೂರು ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು. ಕನಿಷ್ಠ 100 ಮಂದಿಗೆ ಸಾಗುವಳಿ ಚೀಟಿ ವಿತರಣೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಏಪ್ರಿಲ್​ ಕಳೆದು ಮೇ ಮುಗಿಯುತ್ತಿದ್ದರೂಸಮಿತಿ ಸಭೆ ನಡೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಷ್ಟು ವಿಳಂಬ ಮಾಡದೆ ತಕ್ಷಣ ಸಮಿತಿ ಸಭೆ ನಡೆಸಿ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸಾಗುವಳಿ ಚೀಟಿ ವಿತರಣೆ ಕುರಿತು ಶಾಸಕರೊಂದಿಗೆ ಚರ್ಚೆ ಮಾಡಲಾಗಿದೆ. ಜೂನ್​ ಮೊದಲ ವಾರದಲ್ಲಿ ಬಗರ್​ಹುಕುಂ ಸಮಿತಿ ಸಭೆ ಮಾಡಲಾಗುವುದು. ಸುಮಾರು 60 ರಿಂದ 100 ಮಂದಿ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಣೆಗೆ ಕ್ರಮ ವಹಿಸಲಾಗಿದೆ.

— > ಮಲ್ಲಪ್ಪ ಕೆ ಯರಗೋಳ, ತಹಸೀಲ್ದಾರ್​.