ಉಮೇಶ ಮೇಟಿ  
ರಾಜ್ಯ

ಉಮೇಶ ಮೇಟಿಗೆ ಭರವಸೆ ಈಡೇರಿಸುವ ಸವಾಲ್ !

ಅಶೋಕ ಶೆಟ್ಟರ, ಬಾಗಲಕೋಟೆ: ನಮ್ಮದು ನುಡಿದಂತೆ ನಡೆವ ಸರ್ಕಾರ. ನಾವು ನೀಡಿದ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ ಎಂದು ಗಟ್ಟಿಯಾಗಿ ಹೇಳಿ ಬಾಗಲಕೋಟೆ ಉಪ ಸಮರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಪಡೆದಿದೆ.
ಇದೀಗ ಉಪ ಚುನಾವಣೆ ಮಹೂರ್ತದ ಪೂರ್ವ ಹಾಗೂ ಪ್ರಚಾರದ ವೇಳೆ ಕ್ಷೇತ್ರದ ಮತದಾರರಿಗೆ ನೀಡಿರುವ ಭರವಸೆಗಳು ಹತ್ತು ಹಲವು. ಅವುಗಳಲ್ಲೆವನ್ನು ಈಡೇರಿಸುವ ಸವಾಲ್ ಉಮೇಶ ಮೇಟಿ ಎದುರಿಗಿದೆ.
ಉಮೇಶ ಮೇಟಿ ಅವರಿಗೆ ಭರವಸೆ ಅನುಷ್ಠಾನಕ್ಕೆ ತರಲು ಇರುವ ಅವಧಿ ಎರಡು ವರ್ಷಗಳು ಮಾತ್ರ. ಇಷ್ಟು ಕಡಿಮೆ ಅವಧಿಯಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವ ಹೊಣೆ ಅವರ ಮೇಲಿದೆ.
ಮುಖ್ಯಮಂತ್ರಿ ಆದಿಯಾಗಿ ಕಾಂಗ್ರೆಸ್ ಮುಖಂಡರು ನೀಡಿರುವ ಭರವಸೆ ಪಟ್ಟಿ ಹನಮಂತನ ಬಾಲದಂತೆ ಬೆಳೆದಿದೆ. ಸರ್ಕಾರ ತಮ್ಮದೇ ಇರುವುದರಿಂದ ಅಭಿವೃದ್ಧಿ ಕೆಲಸ ಉಮೇಶ ಮೇಟಿ ಶಾಸಕರಾದರೆ ಮಾತ್ರ ಸಾಧ್ಯ. ಬಿಜೆಪಿ ಗೆದ್ದರೂ ಅಭಿವೃದ್ಧಿ ಆಗಲ್ಲ ಎಂದು ಹೇಳಿದ್ದರು.
ಮೆಡಿಕಲ್ ಕಾಲೇಜ್ ಕಟ್ಟಡ ಪೂರ್ಣಗೊಳಿಸಬೇಕು:
ಒಂದು ದಶಕದ ಹಿಂದೆಯೇ ಸಿದ್ಧರಾಮಯ್ಯ ಅವರು ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿದ್ದರು. ಆದರೆ, ಅನುಷ್ಠಾನಕ್ಕೆ ಬಂದಿರಲಿಲ್ಲ. ಕಳೆದ ಸಲ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಅಭಯ ನೀಡಿದ್ದರು. ವರ್ಷ ಮುಕ್ತಾಯವಾಗುತ್ತ ಬಂದಿದ್ದರೂ ಕಾಮಗಾರಿಗೆ ಚಾಲನೆ ನೀಡಿರಲಿಲ್ಲ.
ಮೊನ್ನ ಉಪ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುವ ಹಿಂದಿನ ದಿನವಷ್ಟೆ ಸಿಎಂ ಸಿದ್ಧರಾಮಯ್ಯ ಅವರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ಇದು ಚುನಾವಣೆ ಗಿಮಿಕ್ ಎಂದು ಬಿಜೆಪಿ ಟೀಕಿಸಿತ್ತು. ಇದು ನಮ್ಮ ಬದ್ಧತೆ ಮತ್ತು ಟೆಂಡರ್ ಸಹ ಆಗಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿತ್ತು. ಇದೀಗ ಕಟ್ಟಡ ಕಾಮಗಾರಿ ಮುಗಿಸಿ, 2028 ರ ಚುನಾವಣೆ ವೇಳೆಗೆ ಕಾಲೇಜು ಆರಂಭಿಸುವ ಹೊಣೆ ಉಮೇಶ ಮೇಟಿ ಅವರ ಎದುರಿಗಿದೆ.
ಯುಕೆಪಿಗೆ ಪರಿಹಾರ ನೀಡಬೇಕು:
ರಾಜ್ಯದ ಅತಿ ದೊಡ್ಡ ನೀರಾವರಿ ಯೋಜನೆ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮುಳುಗಡೆ ಆಗುವ ಜಮೀನಿಗೆ ಪರಿಹಾರ ವಿತರಿಸುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸೂಕ್ತ ಬೆಲೆ ಘೋಷಿಸಿ ಈಗಾಗಲೇ ಪರಿಹಾರದ ಚೆಕ್ಕನ್ನು ಸಾಂಕೇತಿಕವಾಗಿ ಚುನಾವಣೆ ಮುಹೂರ್ತದ ಹಿಂದಿನ ದಿನ ವಿತರಿಸಿದ್ದಾರೆ. ಪ್ರತಿ ವರ್ಷ ಯೋಜನೆಗೆ 18 ಸಾವಿರ ಕೋಟಿ ರೂಪಾಯಿ ಒದಗಿಸುವುದಾಗಿ ಹೇಳಿದ ಸರ್ಕಾರ ಬಜೆಟ್ ನಲ್ಲಿ 3000 ಕೋಟಿ ರೂಪಾಯಿಗಳು ಮಾತ್ರ ಇಟ್ಟಿದೆ ಈ ಬಗ್ಗೆ ವಿಪಕ್ಷಗಳು ಟಿಕೆ ಮಾಡಲು ಆರಂಭಿಸಿದ್ದು ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು ಪರಿಹಾರ ವಿತರಣೆಗೆ ಅಗತ್ಯ ಇರುವ ಹಣ ಎಷ್ಟೇ ಆದರೂ ಒದಗಿಸುವುದಾಗಿ ಹೇಳಿದ್ದಾರೆ. ಈಗ ಜಮೀನು ಕಳೆದುಕೊಳ್ಳುವ ಸಂತ್ರಸ್ತರಿಗೆ ನಿಗದಿತ ಅವಧಿಯಲ್ಲಿ ಪರಿಹಾರ ವಿತರಿಸುವ ಜವಾಬ್ದಾರಿಯನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಸರ್ಕಾರದ ಭರವಸೆ ಅನುಷ್ಠಾನಗೊಳ್ಳಬೇಕಿದೆ ಇದು ಸಹ ಉಮೇಶ ಮೇಟಿ ಅವರ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರುವ ಅಂಶವಾಗಿದೆ
ನಡುಗೆಡ್ಡೆ ಪ್ರದೇಶದ ಸ್ಥಳಾಂತರ:
ಬಾಗಲಕೋಟೆ ನಗರದಲ್ಲಿ ಆಲಮಟ್ಟಿ ಜಲಾಶಯಕ್ಕೆ ಮುಳುಗಡೆ ಆಗುವ ಪ್ರದೇಶವನ್ನ ಹೊರತುಪಡಿಸಿ ನಡುಗಡ್ಡೆಯಾಗಿ ಉಳಿಯುವ ಅಂದಾಜು ಒಂದು ಸಾವಿರಕ್ಕೂ ಅಧಿಕ ಮನೆಗಳನ್ನು ಸ್ಥಳಾಂತರಿಸಬೇಕಾಗಿದೆ ಈ ಬಗ್ಗೆ ಇಂದಿನ ಬಿಜೆಪಿ ಸರ್ಕಾರ ಸ್ಥಳಾಂತರಕ್ಕೆ ಹಸಿರು ನಿಶಾನೆ ತೋರಿಸಿ ಸರ್ವೆ ಕೂಡ ಆರಂಭಿಸಿತ್ತು. ನಂತರ ಕಾಂಗ್ರೆಸ್ ಸರ್ಕಾರದಲ್ಲಿ ಈ ಕಾರ್ಯ ಸ್ಥಗಿತವಾಗಿತ್ತು. ಇದೀಗ ಉಮೇಶ ಮೇಟಿ ಅವರು ನಡುಗಡ್ಡೆಯಾಗುವ ಪ್ರದೇಶವನ್ನ ಸಂಪೂರ್ಣವಾಗಿ ಸ್ಥಳಾಂತರ ಮಾಡಿಸಿ ನಿವಾಸಿಗಳಿಗೆ ಸೂಕ್ತ ಪರಿಹಾರ ಹಾಗೂ ನಿವೇಶನವನ್ನು ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಿದೆ.
200 ಎಕರೆಯ ಮಾದರಿ ಮಾರುಕಟ್ಟೆ:
ನಗರದಲ್ಲಿ ವ್ಯಾಪಾರ- ವಹಿವಾಟಿಗೆ ಉತ್ತೇಜಿಸುವ ದೃಷ್ಟಿಯಿಂದ 200 ಜಾಗೆಯಲ್ಲಿ ಮೆಗಾ ಮಾರ್ಕೇಟ್ ನಿರ್ಮಾಣ ಮಾಡಬೇಕು ಎನ್ಬುವ ಬೇಡಿಕೆ ಇದೆ. ಇದಕ್ಕೆ ಶಾಸಕ ಎಚ್.ವೈ.ಮೇಟಿ ಅವರು ಸಹ ಬಿಟಿಡಿಎ ಮೂಲಕ ಜಮೀನು ಒದಗಿಸಿ, ಸರ್ಕಾರದಿಂದ ಮಾರುಕಟ್ಟೆ ನಿರ್ಮಾಣದ ಭರವಸೆ ನೀಡುತ್ತ ಬಂದಿದ್ದರು. ಈಚೆಗೆ ಉಪ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಹ ವ್ಯಾಪಾರಸ್ಥರ ಸಭೆ ನಡೆಸಿ ಬೆಂಬಲ ಕೋರಿದ್ದರು. ಹಾಗೆಯೇ ವಾಣಿಜ್ಯ ಮಳಿಗೆ ನಿರ್ಮಾಣದ ಅಭಯವನ್ನು ನೀಡಿದ್ದರಂತೆ. ಇದೀಗ ಅದನ್ನು ಈಡೇರಿಸವ ಮೂಲಕ ವ್ಯಾಪಾರಸ್ಥರ ಪರವಾಗಿದ್ದೇವೆ ಎಂದು ಸಾಬೀತು ಪಡಿಸುವ ಜವಾಬ್ದಾರಿ ಉಮೇಶ ಮೇಟಿ ನಿರ್ವಹಿಸಬೇಕಿದೆ.
ಉಪ ಚುನಾವಣೆಯಲ್ಲಿ ನಾನಾ ರಂತ್ರಗಳನ್ನು ಬಳಕೆ ಮಾಡಿ ಕಾಂಗ್ರೆಸ್ ಪಕ್ಷ ದೊಡ್ಡ ಅಂತರದ ಗೆಲುವು ಕಂಡಿದೆ.
ಇದೀಗ ಚುನಾವಣೆಗಾಗಿ ಮಾಡಿದ ಕಸರತ್ತುಗಳೆಲ್ಲವೂ ಮರೆಯಾಗಿ, ಮತದಾರರಿಗೆ ಏನೆಲ್ಲ ಭರವಸೆ ನೀಡಿದ್ದಾರೋ ಅವುಗಳನ್ನ ಈಡೇರಿಸುವ ಕೆಲಸ ಸರ್ಕಾರ ಮಾಡಬೇಕಿದೆ.
ಮುಖ್ಯವಾಗಿ ಹೆದ್ದಾರಿ ನಿರ್ಮಾಣಕ್ಕೆ ಶೆಡ್ಡು ಕಳೆದುಕೊಂಡಿರುವ ಸ್ಲಮ್ ನಿವಾಸಿಗಳಿಗೆ ಹೆದ್ದಾರಿ ಪ್ರಾಧಿಕಾರದಿಂದ ಘೋಷಣೆ ಆಗಿದ್ದು, ನೂರಾರು ಕುಟುಂಬಗಳಿಗೆ ನಿವೇಶನ ಒದಗಿಸುವುದಾಗಿ 2023 ರ ಚುನಾವಣೆಯಲ್ಲಿ ಎಚ್.ವೈ.ಮೇಟಿ ಅವರು ನೀಡಿದ್ದರು. ಅದು ಆಗಲಿಲ್ಲ. ಮೊನ್ನೆ ಉಪ ಚುನಾವಣೆಯಲ್ಲಿ ನಿವೇಶನ ಒದಗಿಸುವುದಾಗಿ ಉಸ್ತುವಾರಿ ಸಚಿವರು ಸೇರಿದಂತೆ ಅನೇಕ ಮುಖಂಡರು ಭರವಸೆ ನೀಡಿದ್ದು, ನಿವೇಶನ ಸಿಗುವ ನಿರೀಕ್ಷೆಯಲ್ಲಿ ನಿವಾಸಿಗಳು ಇದ್ದಾರೆ. ಈ ಸಲವೂ ಅವರ ನಿರೀಕ್ಷೆ ಹುಸಿಯಾಗದಂತೆ ಕ್ಷೇತ್ರದ ಶಾಸಕರು ನೋಡಿಕೊಳ್ಳಬೇಕಿದೆ.
ಹಾಗೆಯೇ ಶಿರೂರ-ಭಗವತಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ಮಲ್ಲಯ್ಯನ ಗುಡ್ಡದ ಅಭಿವೃದ್ಧಿ, ಐಹೊಳೆ ಸ್ಥಳಾಂತರ ಸೇರಿದಂತೆ ಅನೇಕ ದೊಡ್ಡ ದೊಡ್ಡ ಭರವಸೆಗಳು ಅನುಷ್ಠಾನಕ್ಕೆ ತರುವುದು, ಅಪೂರಗಣಗೊಂಡಿರುವ ಇನ್ನೂ ಹಲವು ಕಾಮಗಾರಿಗಳನ್ನು ಮುಕ್ತಾಯಗೊಳಿಸುವ ಸವಾಲಿನಲ್ಲಿ ಉಮೇಶ ಮೇಟಿ ಗೆಲ್ಲುತ್ತಾರಾ ಕಾಯ್ದುನೋಡಬೇಕಿದೆ.