ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ನೌಕರರ ದೇವಾಂಗ ನೌಕರರ ಸಂಘ ಭಾನುವಾರ ಹಮ್ಮಿಕೊಂಡಿದ್ದ ದೇವಾಂಗ ಮಹಿಳಾ ಜಾಗೃತಿ ಸಮಾವೇಶವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್​ ಪ್ರೀತಿ ವಿನಾಯಕ ಕಾಮಕರ ಉದ್ಘಾಟಿಸಿದರು. ಶ್ರೀ ದಯಾನಂದಪುರಿ ಸ್ವಾಮೀಜಿ, ಉಮಾಶ್ರೀ, ಎಸ್​.ಜಿ. ಸುಶೀಲಮ್ಮ ಇತರರಿದ್ದರು.  
ರಾಜ್ಯ

ಸಂಘಟನೆಯಿಂದ ಸ್ತ್ರೀಯರ ಸರ್ವತೋಮುಖ ಅಭಿವೃದ್ಧಿ ಸಾಧ್ಯ| ಉಮಾಶ್ರೀ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ದೇವಾಂಗ ನೌಕರರ ಸಂಘದಿಂದ ಮಹಿಳಾ ಜಾಗೃತಿ ಸಮಾವೇಶ
ಬೆಂಗಳೂರು: ಸಂಘಟನೆಗಳಿಂದ ಮಹಿಳೆಯರು ಸುಶಿಕ್ಷಿತರಾಗುತ್ತಿದ್ದಾರೆ. ಆದ್ದರಿಂದ ಯುವ ಸಮುದಾಯ ಹೆಚ್ಚಾಗಿ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ನಟಿ, ವಿಧಾನಪರಿಷತ್​ ಸದಸ್ಯೆ ಉಮಾಶ್ರೀ ಸಲಹೆ ನೀಡಿದ್ದಾರೆ.
ರಾಜ್ಯ ನೌಕರರ ದೇವಾಂಗ ನೌಕರರ ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇವಾಂಗ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ಕಳೆದ 2-3 ದಶಕಗಳಿಂದ ಮಹಿಳೆಯರು ಸಬಲರಾಗುತ್ತಿದ್ದಾರೆ. ಮುಂದುವರಿದವರು ಹಿಂದುಳಿದವರನ್ನು ಮೇಲಕ್ಕೆತ್ತಲು ಸಹಾಯ ಮಾಡಿದರೆ  ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ ಎಂದರು.
ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಬರುವುದೇ ತಪ್ಪು ಎಂಬ ಭಾವನೆ ಸಮಾಜದಲ್ಲಿತ್ತು. ಆದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಸ್ತ್ರೀಯರಿಗೆ ಎಲ್ಲ ರಂಗಗಳಲ್ಲಿ ಮುಕ್ತ ಸ್ವಾತಂತ್ರ್ಯ ನೀಡಿದೆ. ಗೃಹಿಣಿಯರು ಮನೆ ಕೆಲಸಗಳಿಗೆ ಸೀಮಿತವಾಗದೆ ಆಸಕ್ತಿಯ ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಸಾಧನೆ ಮಾಡಬಹುದು ಎಂದರು.
ಹಿರಿಯ ವಕೀಲ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್​ ಮಾತನಾಡಿ, ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಸ್ತ್ರೀಯರು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿಲ್ಲ. ಆದರೆ, ಬಿ.ವಿ. ನಾಗರತ್ನ ಅವರಿಗೆ ಈ ಅವಕಾಶವಿದೆ. ಅವರು ಕರ್ನಾಟಕದವರು ಎಂಬುದು ನಮ್ಮ ಹೆಮ್ಮೆ ಎಂದು ಹೇಳಿದರು.
ಹೇಮಕೂಟ ಹಂಪಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ, ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್​ ಪ್ರೀತಿ ವಿನಾಯಕ ಕಾಮಕರ, ರಾಜ್ಯ ದೇವಾಂಗ ನೌಕರರ ಸಂದ ಅಧ್ಯಕ್ಷ ಡಿ. ನಾಗೇಶ್​ ಕುಮಾರ್​, ಕೇಂದ್ರ ವಾರ್ತ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಎಸ್​.ಟಿ. ಶ್ರುತಿ ಮತ್ತಿತರರಿದ್ದರು.

250 ಮಹಿಳೆಯರಿಗೆ ಸೇವಾರತ್ನ ಪ್ರಶಸ್ತಿ

ಪದ್ಮಶ್ರೀ ಪುರಸ್ಕೃತೆ, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್​.ಜಿ. ಸುಶೀಲಮ್ಮ, ಡಾ. ರಾಜ್​ಕುಮಾರ್​ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ನಟಿ ಉಮಾಶ್ರೀ ಮತ್ತು ಕೆನಡಾ ಮಿಸೆಸ್​ ಎಲೈಟ್​ ಪೆಟೈಟ್​ ವಿಜೇತೆ ಆಶಾ ಕೆ. ನಾಗಪ್ಪ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾಜ ಸೇವೆ, ಉದ್ಯಮ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 250 ಮಹಿಳೆಯರಿಗೆ "ಸೇವಾರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು.