ಆಲಮಟ್ಟಿಯ ಲಾಲ ಬಹಾದ್ದೂರ ಶಾಸೀ ಸಾಗರವನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು. ಶಾಸಕರಾದ ಶಿವಾನಂದ ಪಾಟೀಲ, ಸಿ.ಎಸ್.ನಾಡಗೌಡ, ಜೆ.ಟಿ.ಪಾಟೀಲ್, ಉಮೇಶ ಮೇಟಿ, ಕೆಬಿಜೆಎನ್‌ಎಲ್ ಎಂಡಿ ಕೆ.ಬಿ.ಕುಲಕರ್ಣಿ, ಸಿ.ಇ ಡಿ.ಬಸವರಾಜ ಇತರರಿದ್ದರು.
- ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಆಲಮಟ್ಟಿಯಲ್ಲಿ ಭರವಸೆ
- ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 25 ಸಾವಿರ ಕೋಟಿ ರೂ. ಅನುದಾನ
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 25 ಸಾವಿರ ಕೋಟಿ ರೂ. ಅನುದಾನ ನೀಡಿ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಕೆಪಿ-3 ಯೋಜನೆಗೆ ಹಿಂದಿನ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸಾಂಕೇತಿಕವಾಗಿ 3 ಸಾವಿರ ಕೋಟಿ ರೂ.ನೀಡಿ ಪೂರಕ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೊಡುವುದಾಗಿ ಹೇಳಿದ್ದರು. ಆಗಿನ ಜಲಸಂಪನ್ಮೂಲ ಸಚಿವರೇ ಇಂದಿನ ಸಿಎಂ ಹಾಗೂ ಹಣಕಾಸು ಸಚಿವರಾಗಿದ್ದರಿಂದ ಅವರಿಗೆ ಎಲ್ಲವೂ ಅರಿವು ಇದೆ. ಹಾಗಾಗಿ ವಾರ್ಷಿಕ 25 ಸಾವಿರ ಕೋಟಿ ರೂ.ದಂತೆ ಅನುದಾನ ನೀಡಿ ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಕಗ್ಗಂಟು ಇಲ್ಲ, ಆಕಾಂಕ್ಷಿಗಳು ಹೆಚ್ಚಿರುವುದರಿಂದ ಸಹಜವಾಗಿ ಜಿಲ್ಲಾವಾರು, ವಿಭಾಗವಾರು, ಜಾತಿವಾರು ಪ್ರಾತಿನಿಧ್ಯ ಕೊಡಬೇಕಾಗಿದ್ದರಿಂದ ತಡವಾಗಿದ್ದು, ಜು.25ರೊಳಗೆ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ಆಲಮಟ್ಟಿ ಜಲಾಶಯದಲ್ಲಿ ಮುಂದಿನ ಜೂನ್‌ವರೆಗೆ ಬೇಕಾಗುವಷ್ಟು ಕುಡಿವ ನೀರು ಸಂಗ್ರಹವಾಗಿದೆ. ಇನ್ನೂ ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸಲು ಇನ್ನಷ್ಟು ಕೊರತೆ ಇದೆ. ಡ್ಯಾಂಗೆ ನಿತ್ಯ ಎರಡ್ಮೂರು ಟಿಎಂಸಿಯಷ್ಟು ನೀರು ಹರಿದು ಬರುತ್ತಿದ್ದು ಕೆಲವೇ ದಿನಗಳಲ್ಲಿ ನೀರಾವರಿಗೂ ನೀರು ಹರಿಸಲಾಗುವುದು. ಕೃಷ್ಣಾ ನೀರಾವರಿ ಸಲಹಾ ಸಮಿತಿ ರಚನೆ ಕುರಿತು ಕೆಬಿಜೆಎನ್‌ಎಲ್ ಎಂಡಿ ಅವರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದ್ದು ಒಂದೇ ದಿನದಲ್ಲಿ ಐಸಿಸಿ ಸಮಿತಿ ರಚಿಸಲಾಗುವುದು ಎಂದರು.
ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಮಹಾರಾಷ್ಟ್ರ ಸರ್ಕಾರ ಬಳಸಿಕೊಳ್ಳಲು ಬರುವುದಿಲ್ಲ. ಹೆಚ್ಚುವರಿಯಾದ ನೀರು ಇದ್ದರೆ ಅವರು ಬಳಸಿಕೊಳ್ಳಬಹುದು. ಅದಕ್ಕೆ ಕೇಂದ್ರ ಸರ್ಕಾರ ಅನುಮತಿ ಬೇಕಾಗುತ್ತದೆ. ಕರ್ನಾಟಕವಾದರೂ ಅಷ್ಟೇ ಹೆಚ್ಚುವರಿ ನೀರು ಬೇಕಾದರೆ ಕೇಂದ್ರದ ಅನುಮತಿ ತೆಗೆದುಕೊಂಡು ಮಾಡಬೇಕಾಗುತ್ತದೆ ಎಂದರು.
ಸಿಎಂ ಜತೆ ಮಹಾದಾಯಿ, ಮೇಕೆದಾಟು, ಯುಕೆಪಿ, ಭದ್ರಾ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ. ಹಿಂದೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಕೊಡುವುದಾಗಿ ಭರವಸೆ ನೀಡಿದ್ದರು. ಇಲ್ಲಿಯವರೆಗೂ ಆ ಭರವಸೆ ಈಡೇರಿಲ್ಲ. ಅಷ್ಟೂ ಹಣವನ್ನು ಒಟ್ಟಿಗೆ ಕೊಡದಿದ್ದರೂ ಹಂತ ಹಂತವಾಗಿ ನೀಡಿ ಎಂದ ಕೇಳಿದ್ದೇವೆ. ಎತ್ತಿನಹೊಳೆ ಯೋಜನೆ ನಮ್ಮ ಅವಧಿಯಲ್ಲಿ ಮುಗಿಯಲಿದೆ. 2028ರೊಳಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.
ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಕೃಷ್ಣಾ ನೀರು ಹಂಚಿಕೆ ಬಗ್ಗೆ ಕೋರ್ಟ್ ಮೊರೆ ಹೋಗಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದವರನ್ನು ಕರೆದು ಕೇಂದ್ರ ಜಲಶಕ್ತಿ ಮಂತ್ರಿಗಳು ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು. ಸುಪ್ರೀಂಕೋರ್ಟ್ ಬೇಗ ಇತ್ಯರ್ಥ ಮಾಡಿ ಎಂದು ಕರ್ನಾಟಕದಿಂದ ಕೇಸ್ ಹಾಕಲಾಗಿದ್ದು, ಸುಪ್ರೀಂಕೋರ್ಟ್ ಬೇಗ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದರು.
ಯುಕೆಪಿ 2050ಕ್ಕೆ ಮುಗಿದು ಹೋಗುತ್ತೆ, ಬೇಗ ನೋಟೀಫಿಕೇಶನ್ ಮಾಡಿ ಎಂದು ಸುಪ್ರೀಂಕೋರ್ಟ್ ಒತ್ತಾಯ ಮಾಡ್ತಿದ್ದೇವೆ. ತಡವಾದಷ್ಟು ಮೂರು ರಾಜ್ಯಗಳಿಗೆ ನಷ್ಟವಾಗುವುದರಿಂದ ನಾವು ಅವರು ಅರಿತುಕೊಂಡು ಹೋದರೆ ಎಲ್ಲರಿಗೂ ಒಳಿತಾಗಲಿದೆ ಎಂದರು.