ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- * ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಫೆ.16 ಕೊನೆಯ ದಿನ
- * ಫೆ. 18ರೊಳಗೆ ಶುಲ್ಕ ಪಾವತಿಸಬೇಕು
ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಯುಜಿಸಿಇಟಿಯ 2026ನೇ ಸಾಲಿನ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಫೆ.16 ಹಾಗೂ ಶುಲ್ಕ ಪಾವತಿಗೆ ಫೆ.18 ಕೊನೆಯ ದಿನ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಕೆಇಎ ವೆಬ್ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದ್ದು, ಅದರ ಮೂಲಕ ಅರ್ಜಿ ಮತ್ತು ಶುಲ್ಕ ಪಾವತಿ ಮಾಡಬಹುದಾಗಿದೆ. ಇಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿ ಇತರ ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)/ ಕೌನ್ಸೆಲಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಅಂಕಗಳ ಆಧಾರದ ಮೇಲೆ ಕೇವಲ ಸೀಟು ಹಂಚಿಕೆಯನ್ನು ಪ್ರಾಧಿಕಾರ ಮಾಡಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ನೀಡಿರುವ ಕಾರಣ ಅಭ್ಯರ್ಥಿಗಳು ಸಾವಧಾನದಿಂದ ಸಿಇಟಿ ಮಾಹಿತಿಯನ್ನು ಓದಿ, ಮನನ ಮಾಡಿಕೊಂಡ ನಂತರ ಅರ್ಜಿ ಭರ್ತಿ ಮಾಡಬೇಕು. ತಮಗೆ ಅನ್ವಯವಾಗುವ ಮೀಸಲಾತಿಗಳಿಗೆ ಪೂರಕವಾಗಿ ದಾಖಲೆಗಳ ಸಹಿತಿ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಆಧಾರ್ ಆಧಾರಿತ ಅರ್ಜಿಯಾಗಿದ್ದು, ಹೆಸರು ಇತ್ಯಾದಿ ಅಂಶಗಳು ಸ್ವತಃ ದಾಖಲಾಗುತ್ತದೆ. ಇ-ಮೇಲ್ ಮೂಲಕವೂ ಒಟಿಪಿ ಜತೆಗೆ ಪ್ರತಿ ಹಂತದ ಮಾಹಿತಿ ತಿಳಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಾಟ್ಸ್ ಆ್ಯಪ್ ಮೂಲಕವೂ ಸಂದೇಶಗಳು ರವಾನೆಯಾಗಲಿವೆ. ಇದಕ್ಕಾಗಿ ಕಾಲೇಜು ಸಿಬ್ಬಂದಿಗೆ 10 ದಿನಗಳ ತರಬೇತಿ ಸಹ ನೀಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಉಪನ್ಯಾಸಕರ ಸಲಹೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.