Two more arrested in Pushpalatha murder case 
ರಾಜ್ಯ

ಪುಷ್ಪಲತಾ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ

ಚಿಕ್ಕಬಳ್ಳಾಪುರ ಡೆಸ್ಕ್
ಚಿಕ್ಕಬಳ್ಳಾಪುರ: ನಗರದ ಕಂದವಾರಪೇಟೆಯ ಪುಷ್ಪಲತಾ ಕೊಲೆ ಪ್ರಕರಣದಲ್ಲಿ ಆಕೆಯ ಅತ್ತೆ, ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಮೃತಳ ಅತ್ತೆ ವಿಜಯಮ್ಮ (55), ಅಜ್ಜಿ ನಾಗಮ್ಮ (72) ಬಂಧಿತರಾಗಿದ್ದಾರೆ.
ಕತ್ತು ಹಿಸುಕಿ ಚಾಕುವಿನಿಂದ ಕೊಲೆ ಮಾಡಿದ ಆರೋಪದಲ್ಲಿ ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಲೋಹಿತ್​ ಕುಮಾರ್​ ಅಲಿಯಾಸ್​ ಲಲ್ಲು (31) ಹಾಗೂ ಮೃತಳ ನಾದಿನಿ ಭವ್ಯಾ(39) ಬಂಧನಕ್ಕೊಳಗಾಗಿದ್ದರು. ಇದರೊಂದಿಗೆ ಬಂಧಿತರ ಸಂಖ್ಯೆ 4ಕ್ಕೆ ಏರಿದೆ. ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಪ್ರಕರಣದಲ್ಲಿ ಇತರರು ಭಾಗಿಯಾಗುವುದರ ಬಗೆಗಿನ ಖಾತ್ರಿಗೆ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ: ಚಿಕ್ಕಬಳ್ಳಾಪುರದ ಕಂದವಾರಪೇಟೆಯ ಮನೆಯಲ್ಲಿ ಗೃಹಿಣಿ ಪುಷ್ಪಲತಾ ಕೊಲೆಯಾಗಿತ್ತು. ಉಸಿರುಗಟ್ಟಿಸಿದ ಬಳಿಕ ಕತ್ತು ಕೊಯ್ಯಲಾಗಿತ್ತು. ಇದರ ನಡುವೆ ಕಳ್ಳರು ಬಂದು ಪ್ರಜ್ಞೆ ತಪ್ಪಿಸಿ, ಒಡವೆಗಳನ್ನು ಕದ್ದು ಪರಾರಿಯಾಗುವ ವೇಳೆ ಪುಷ್ಪಲತಾರನ್ನು ಕೊಲೆ ಮಾಡಿದ್ದಾರೆ ಎಂದು ಮೃತಳ ನಾದಿನಿ ಭವ್ಯಾ ಹೇಳಿಕೆ ಕೊಟ್ಟಿದ್ದಳು. ಆದರೆ, ಇದರಲ್ಲಿನ ಅನುಮಾನಾಸ್ಪದ ನಡೆ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಆಕೆಯ ಕೊಲೆಯ ವಿಚಾರವನ್ನೆಲ್ಲ ಹೇಳಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಲೋಹಿತ್​ ಕುಮಾರ್​ ಖಾಸಗಿ ವಿಡಿಯೋಗಳನ್ನು ವೈರಲ್​ ಮಾಡುವುದಾಗಿ ಹೇಳಿ ಬೆದರಿಸಿ ಹಣವನ್ನು ಪಡೆದುಕೊಂಡಿದ್ದು, ಮತ್ತೆ ಹೆಚ್ಚಿನ ಹಣಕ್ಕೆ ಪೀಡಿಸಿದಾಗ ಪುಷ್ಪಲತಾರನ್ನು ಕೊಲೆ ಮಾಡಿ ಒಡವೆಗಳನ್ನು ತೆಗೆದುಕೊಂಡು ಹೋಗಲು ಹೇಳಲಾಯಿತು. ಅದರಂತೆ ಆತ ಮನೆಯೊಳಗೆ ಬಂದು ಕತ್ತು ಹಿಸುಕಿ ಸಾಯಿಸಿದ್ದಾನೆ ಎಂಬ ಹೇಳಿಕೆಯನ್ನು ಆಪಾದಿತಳು ತಿಳಿಸಿದ್ದಾರೆ.
ಸಂಚು ರೂಪಿಸಿದ ಆರೋಪ
ಮಗ ಭರತ್​ ಹಾಗೂ ಪುಷ್ಪಲತಾಗೆ ಮದುವೆಯಾಗಿ 4 ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ನೆಪವನ್ನಿಟ್ಟುಕೊಂಡು ಅತ್ತೆ ವಿಜಯಮ್ಮ ಸೊಸೆಗೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆಗೆ ಒತ್ತಾಯಿಸಿ ಗಲಾಟೆ ಮಾಡುತ್ತಿದ್ದರು. ಇದರ ನಡುವೆ ಮಗ, ಸೊಸೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿರುವುದು, ತನ್ನ ಮಾತನ್ನು ಕೇಳದಿರುವುದರಿಂದ ಆಕ್ರೋಶಗೊಂಡಿದ್ದರು. ಮಗಳು ಭವ್ಯಾ ಅತ್ತಿಗೆಯ ಕೊಲೆಗೆ ರೂಪಿಸಿದ್ದ ಸಂಚು ವಿಜಯಮ್ಮ ಹಾಗೂ ನಾಗಮ್ಮಳಿಗೆ ಮೊದಲೇ ತಿಳಿದಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.