ದೇವದುರ್ಗ ಬಸ್ ನಿಲ್ದಾಣ ಮುಂಭಾಗ ವಾಣಿಜ್ಯ ಕಟ್ಟಡದ ಛಾವಣಿ ಕುಸಿದು ಬಿದ್ದಿರುವುದು.
- ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
- ಯಮರೂಪಿಯಾದ ಹಳೇ ಬಿಲ್ಡಿಂಗ್
ದೇವದುರ್ಗ: ಪಟ್ಟಣದ ಹೊಸ ಬಸ್ ನಿಲ್ದಾಣ ಮುಂಭಾಗದ ವಾಣಿಜ್ಯ ಕಟ್ಟಡದ ಮೇಲ್ಭಾಗ ಭಾನುವಾರ ಕುಸಿದು ಬಿದ್ದು ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕ್ಯಾದಿಗೇರಾ ಗ್ರಾಮದ ನಾಗರಾಜ ಚಿದಾನಂದಪ್ಪ (21), ಸಮುದ್ರ ಗ್ರಾಮದ ರವಿಕುಮಾರ ಯಲ್ಲಪ್ಪ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊತ್ತಿಗುಡ್ಡ ಗ್ರಾಮದ ಅರ್ಜುನ್ ಯಲ್ಲಪ್ಪ, ಕರಡಿಗುಡ್ಡದ ಉಮೇಶ ಯಲ್ಲಪ್ಪ, ಎಸ್.ಎನ್.ತಾಂಡಾದ ಅಭಿಷೇಕ್ ಪೂಮಣ್ಣ, ಮಾತ್ಪಳ್ಳಿ ಗ್ರಾಮದ ಪ್ರಭು ಯಲ್ಲಪ್ಪ ತೀವ್ರವಾಗಿ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ನಾಲ್ಕು ಬೈಕ್‌ಗಳು ಜಖಂಗೊಂಡಿವೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದು, ಕೆಲಸ ನಿಮಿತ್ತ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಬಿಲ್ಡಿಂಗ್ ಕೆಳಗೆ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದರು. ಆಗ ಹಳೇ ಕಟ್ಟಡದ ಛಾವಣಿ ಹಾಗೂ ಕಬ್ಬಿಣದ ಮೆಟ್ಟಿಲು ಕುಸಿದು ಬಿದ್ದಿದೆ. ತಕ್ಷಣ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ, ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ಸ್ಥಳಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ, ಪಿಐ ಎಸ್.ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.