ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಬಳಿ ಖಾಸಗಿ ಬಸ್ ಅಪಘಾತವಾಗಿ ಜಖಂಗೊಂಡಿರುವುದು.
- ಬೆಂಗಳೂರು-ಮಂಗಳೂರು ರಾ.ಹೆದ್ದಾರಿಯ ನೆಲ್ಲಿಗೆರೆ ಟೋಲ್ ಸಮೀಪ
- ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟೋಲ್‌ನ ಸೂಚನಾ ಫಲಕಕ್ಕೆ ಖಾಸಗಿ ಬಸ್ ಡಿಕ್ಕಿ
ತಾಲೂಕಿನ ಬೆಂಗಳೂರು-ಮಂಗಳೂರು ರಾ.ಹೆದ್ದಾರಿಯ ನೆಲ್ಲಿಗೆರೆ ಟೋಲ್ ಸಮೀಪ ಗುರುವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟೋಲ್‌ನ ಸೂಚನಾ ಫಲಕಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ ಕ್ಲೀನರ್, ಉಡುಪಿ ಜಿಲ್ಲೆಯ ಬೈಂದೂರಿನ ಅಶೋಕ್(35) ಹಾಗೂ ಬೆಂಗಳೂರಿನ ಆರ್.ಆರ್.ನಗರದ ಕಸ್ತೂರಿ ಶಾನುಭಾಗ್(64) ಮೃತರು.
ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಖಾಸಗಿ ಬಸ್ ತಾಲೂಕಿನ ನೆಲ್ಲಿಗೆರೆ ಟೋಲ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಟೋಲ್‌ನ ಸೂಚನಫಲಕಗಳಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು ಚಾಲಕ ಹಾಗೂ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಬಸ್‌ನಲ್ಲಿ ಒಟ್ಟು 32 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಒಬ್ಬ ಪ್ರಯಾಣಿಕನಿಗೆ ಒಂದು ಕೈ ತುಂಡಾಗಿದ್ದು, ಮತ್ತೆರಡು ಜನರಿಗೆ ಅಂಗೈ ತುಂಡಾಗಿದೆ. ಅಲ್ಲದೆ ಕೆಲವರಿಗೆ ಕಾಲು ಹಾಗೂ ಕೈನ ಮೂಳೆ ಮುರಿತವಾಗಿದೆ.
ಇನ್ನಷ್ಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಘಟನೆಗೆ ಚಾಲಕನ ಅಜಾಗರೂಕತೆ, ಅತಿವೇಗ ಹಾಗೂ ನಿದ್ದೆ ಮಂಪರಿನಲ್ಲಿದ್ದ ಕಾರಣ ಈ ಘಟನೆ ಸಂಭವಿಸಿದೆ ಎಂಬುದು ಪ್ರಯಾಣಿಕರು ಆರೋಪಿಸಿದ್ದಾರೆ.
ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಎಸ್ಪಿ ಡಾ.ಶೋಭರಾಣಿ ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ನಂತರ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ ಡಿಸಿ ಹಾಗೂ ಎಸ್ಪಿ ಸಾಂತ್ವನ ಹೇಳಿದರು. ಬಸ್ ಮಗುಚಿ ಬಿದ್ದಿದ್ದರಿಂದ ಸಂಚಾರಕ್ಕೆ ಯಾವುದೇ ಅಡೆಚಣೆಯಾಗದಂತೆ ಬೆಳ್ಳೂರು ಪೊಲೀಸ್ ಠಾಣೆ ಪಿಎಸ್ಸೈ ರವಿಕುಮಾರ್ ನೇತೃತ್ವದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬಸ್‌ಅನ್ನು ಕ್ರೇನ್‌ಮೂಲಕ ಮೇಲಕ್ಕೆತ್ತಿ, ರಸ್ತೆಬದಿ ಮುರಿದಿದ್ದ ಸೂಚನಫಲಕಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಡಿವೈಎಸ್ಪಿ ಚಲುವರಾಜು, ಸಿಪಿಐ ಹೇಮಂತ್‌ಕುಮಾರ್, ತಹಸೀಲ್ದಾರ್ ಅಶೋಕ್ ಇದ್ದರು.