ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಸ್ತೂರಿ ಬಾ ಗಾಂಧಿ ಶಾಲೆಯ ವಿದ್ಯಾರ್ಥಿನಿಯರು ರಾಕಿ ಕಟ್ಟಿದರು  
ರಾಜ್ಯ

ರಾಷ್ಟ್ರಪತಿಗೆ ರಾಕಿ ಕಟ್ಟಿದ ಇಬ್ಬರು ವಿದ್ಯಾರ್ಥಿನಿಯರು

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಪತಿ ದ್ರೌಪದಿ ಮುರ್ಮು
  • ರಾಕಿ ಕಟ್ಟುವ ಮೂಲಕ ಶುಭ
ಪಾಂಡವಪುರ: ರಕ್ಷಾ ಬಂಧನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಕಿ ಕಟ್ಟುವ ಮೂಲಕ ಶುಭಕೋರಿದ್ದ ತಾಲೂಕಿನ ಕಟ್ಟೇರಿ ಗ್ರಾಮದ ಕಸ್ತೂರಿ ಬಾ ಗಾಂಧಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರನ್ನು ಶಾಲೆ ಹಾಗೂ ತಾಲೂಕು ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸಲಾಯಿತು.
ಮುರ್ಮು ಅವರಿಗೆ ರಾಕಿ ಕಟ್ಟಲು ರಾಜ್ಯದಿಂದ ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಪೈಕಿ ಬಾಲಿಕಾ ವಸತಿ ಶಾಲೆಯ ಎಂ.ಎನ್.ಖುಷಿ ಹಾಗೂ ಎಂ.ಜೆ.ಮನ್ವತಾ ಸಹ ಇದ್ದರು. ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿ ದ್ರೌಪದಿ ಮುರ್ಮು ಅವರಿಗೆ ರಾಕಿ ಕಟ್ಟಿದ್ದರು.
ಮುಖ್ಯಶಿಕ್ಷಕಿ ವಿ.ಕೆ.ಪುಷ್ಪಲತಾ ಮಾತನಾಡಿ, ರಕ್ಷಾ ಬಂಧನ ಹಿನ್ನೆಲೆಯಲ್ಲಿ ರಾಷ್ಟ್ರಪತಿಗೆ ರಾಕಿ ಕಟ್ಟಲು ನಮ್ಮ ಶಾಲೆಯ ಇಬ್ಬರು ಹೆಣ್ಣುಮಕ್ಕಳು ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಥಾಪನೆಯಾಗಿರುವ ಕಸ್ತೂರಿ ಬಾ ಗಾಂಧಿ ಬಾಲಿಕ ವಸತಿ ಶಾಲೆಯ ಇಬ್ಬರು ಹೆಣ್ಣು ಮಕ್ಕಳು ಹಳ್ಳಿಯಿಂದ ದಿಲ್ಲಿಗೆ ತೆರಳುವ ಮೂಲಕ ಸಾಧನೆ ಮಾಡಿದ್ದಾರೆ. ಇದಕ್ಕೆ ಸಹಕಾರ ನೀಡಿದ ಬೆಂಗಳೂರಿನ ಯೋಜನಾ ಸಮಗ್ರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಚಂದ್ರಶೇಖರ್, ಬಿಇಒ ಧರ್ಮಶೆಟ್ಟಿ ಅವರಿಗೆ ಧನ್ಯವಾದ ಅರ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬಿಇಒ ಧರ್ಮಶೆಟ್ಟಿ, ಬಿಆರ್ ಸಿ ಪ್ರಕಾಶ್, ಶಾಲೆಯ ಮುಖ್ಯಶಿಕ್ಷಕಿ ವಿ.ಕೆ.ಪುಷ್ಪಲತಾ ಇತರರಿದ್ದರು.