ಎರಡು ದಿನಗಳ ಬೈಕ್ ಹಾಗೂ ಕಾರ್ ರೇಸ್ ಸ್ಪರ್ಧೆಗೆ ಶನಿವಾರ ಅಧಿಕೃತ ಚಾಲನೆ ನೀಡಲಾಯಿತು.
- ಹಾನುಬಾಳು ಸ್ಫೋಟ್ಸ್ ಅಸೋಸಿಯೇಷನ್
- ಹಾನುಬಾಳು ಹೋಬಳಿಯ ವೆಂಕಟಹಳ್ಳಿ ಸಮೀಪ
ಸಕಲೇಶಪುರ: ಹಾನುಬಾಳು ಸ್ಫೋಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ತಾಲೂಕಿನ ಹಾನುಬಾಳು ಹೋಬಳಿಯ ವೆಂಕಟಹಳ್ಳಿ ಸಮೀಪ ಆಯೋಜಿಸಲಾದ ಎರಡು ದಿನಗಳ ಬೈಕ್ ಹಾಗೂ ಕಾರ್ ರೇಸ್ ಸ್ಪರ್ಧೆಗೆ ಶನಿವಾರ ಅಧಿಕೃತ ಚಾಲನೆ ನೀಡಲಾಯಿತು.
ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದ ನಡುವೆ ನಡೆದ ಈ ಸ್ಪರ್ಧೆ ವಾಹನ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು. ಮೊದಲ ದಿನ ನಾಲ್ಕು ಚಕ್ರದ ವಾಹನಗಳ ವಿವಿಧ ವಿಭಾಗಗಳ ಸ್ಪರ್ಧೆಗಳು ನಡೆಯಿತು. 800 ಸಿಸಿ ಇಂದ 1600 ಸಿಸಿವರೆಗಿನ ಕಾರುಗಳ ಸಮಯ ಮಿತಿಯೊಳಗಿನ ರೇಸ್ ಆಯೋಜಿಸಲಾಗಿತ್ತು. ಮಹಿಳೆಯರು ಹಾಗೂ ಪುರುಷರು ಎರಡೂ ವರ್ಗಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ರಾಷ್ಟ್ರ ಮಟ್ಟದ ಸ್ಪರ್ಧಿಗಳು ತಮ್ಮ ಚಾಲನಾ ಕೌಶಲ ಪ್ರದರ್ಶಿಸಿದರು.
ಸ್ಪರ್ಧೆ ಕುರಿತು ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷ ಕುರುಡಿ ವಿಕ್ರಂಗೌಡ, ಅಸೋಸಿಯೇಷನ್ ವತಿಯಿಂದ ಇದು ಎರಡನೇ ವರ್ಷದ ಕಾರ್ಯಕ್ರಮವಾಗಿದೆ. ವಿವಿಧ ಸಿಸಿ ವಿಭಾಗಗಳಲ್ಲಿ ಕಾರ್ ರೇಸ್ ನಡೆಯುತ್ತಿದೆ. ಮೇ 24ರಂದು ಬೈಕ್ ರೇಸ್ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಖ್ಯಾತ ಬೈಕ್ ಸವಾರರು ಭಾಗವಹಿಸಲಿದ್ದಾರೆ. ಸ್ಥಳೀಯರಿಗಾಗಿ ವಿಶೇಷ ವಿಭಾಗವನ್ನೂ ಕಲ್ಪಿಸಲಾಗಿದೆ ಎಂದರು.
ಸ್ಪರ್ಧೆಗೆ ಅಗತ್ಯವಾದ ಟ್ರಾೃಕ್ ವ್ಯವಸ್ಥೆ, ಪ್ರೇಕ್ಷಕರ ಸೌಲಭ್ಯ, ಊಟೋಪಚಾರ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಮಳೆಯ ಕಾರಣ ಜನಸಂದಣಿ ಸ್ವಲ್ಪ ಕಡಿಮೆಯಾಗಿದ್ದರೂ, ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದರು.
ಆಯೋಜಕ ಅಚ್ಚರಡಿ ಪೂರ್ಣೇಶ್ ಮಾತನಾಡಿ, ಹಾನುಬಾಳು ಹೋಬಳಿಯ ಯುವಕರು ಹಾಗೂ ಸ್ನೇಹಿತರು ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಎಲ್ಲರ ಸಹಕಾರದಿಂದ ಸ್ಪರ್ಧೆ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ವರ್ಷ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಸುವ ಉದ್ದೇಶವಿದೆ ಎಂದು ಹೇಳಿದರು.
ಸ್ಪರ್ಧೆಯ ಮತ್ತೊಬ್ಬ ಆಯೋಜಕಿ ನಯನಾ ಮಾತನಾಡಿ, ನಾಲ್ಕು ಚಕ್ರ ವಿಭಾಗದಲ್ಲಿ 800 ಸಿಸಿ, 1000 ಸಿಸಿ, 1400 ಸಿಸಿ ಸೇರಿದಂತೆ ವಿವಿಧ ವಿಭಾಗಗಳ ಸ್ಪರ್ಧೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.