Bengaluru Day care Case (ಚಿತ್ರ X) 
ರಾಜ್ಯ

ಡೇ ಕೇರ್​ ಪ್ರಕರಣಕ್ಕೆ ಟ್ವಿಸ್ಟ್; ಹೀರೊಯಿನ್ ಆಗಲು ಹೋಗಿ ಜೈಲು ಪಾಲಾದ ವಿಸ್ಲ್‌ಬ್ಲೋವರ್; ಆಯಾ ಸುಜಾತಾ ಹೂಡಿದ ಪ್ಲಾನ್ ನೋಡಿ ಬೆಚ್ಚಿಬಿದ್ದ ಖಾಕಿ! Bengaluru Day care Case

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್ ಸಿಟಿಯ ಕಾರ್ಪೊರೇಟ್ ಕ್ಯಾಂಪಸ್‌ನಲ್ಲಿರುವ ಡೇಕೇರ್ ಸೆಂಟರ್‌ನಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿದ್ದ ದೌರ್ಜನ್ಯ
  • ಕೃತ್ಯವನ್ನು ಬಯಲಿಗೆಳೆದು ಪೋಷಕರಲ್ಲಿ ಜಾಗೃತಿ ಮೂಡಿಸಿದ್ದ ಮಹಿಳೆಯೇ ಈಗ ಪ್ರಕರಣದ 6 ನೇ ಆರೋಪಿ
  • ಮಕ್ಕಳ ಮೇಲಿನ ದೌರ್ಜನ್ಯದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಸುಜಾತ
ಬೆಂಗಳೂರು: ಸಿಲಿಕಾನ್ ಸಿಟಿಯ ಕಾರ್ಪೊರೇಟ್ ಕ್ಯಾಂಪಸ್‌ನಲ್ಲಿರುವ ಡೇಕೇರ್ ಸೆಂಟರ್‌ನಲ್ಲಿ ಪುಟ್ಟ ಮಕ್ಕಳ (Bengaluru Day care Case) ಮೇಲೆ ನಡೆದಿದ್ದ ದೌರ್ಜನ್ಯ ಪ್ರಕರಣ ಇದೀಗ ಆಘಾತಕಾರಿ ತಿರುವು ಪಡೆದುಕೊಂಡಿದೆ. ಈ ಅಮಾನವೀಯ ಕೃತ್ಯವನ್ನು ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ಬಯಲಿಗೆಳೆದು, ಪೋಷಕರಲ್ಲಿ ಜಾಗೃತಿ ಮೂಡಿಸಿದ್ದ ಮಹಿಳೆಯನ್ನೇ ಪೊಲೀಸರು ಇದೀಗ ಪ್ರಕರಣದ 6ನೇ ಆರೋಪಿಯನ್ನಾಗಿ ಬಂಧಿಸಿದ್ದಾರೆ. 
ಆದಾಗ್ಯೂ, ಮಕ್ಕಳ ಮೇಲಿನ ದೌರ್ಜನ್ಯದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಲ್ಲದೆ, ಕಾನೂನುಬಾಹಿರವಾಗಿ ಕೃತ್ಯದ ಕ್ಲಿಪ್‌ಗಳನ್ನು ಪ್ರದರ್ಶಿಸಿದ ಗಂಭೀರ ಆರೋಪ ಈ ಮಹಿಳೆಯ ಮೇಲೆ ಆರೋಪ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕ್ಯಾಪ್ಜೆಮಿನಿಯ ಕ್ಯಾಂಪಸ್ ಡೇಕೇರ್ ಕೇಂದ್ರದ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಕೇವಲ ಮಗು ಅಳುತ್ತಿದೆ ಎಂಬುದಕ್ಕೆ ಶಿಕ್ಷೆಯಾಗಿ ಆ ಮಕ್ಕಳನ್ನು ವಾಷಿಂಗ್​ ಮೆಷಿನ್​ನ ಡ್ರಮ್​ಗೆ ಬಲವಂತವಾಗಿ ತಳ್ಳಿ, ಬಿಡೆಟ್‌ನಿಂದ ನೀರನ್ನು ಸಿಂಪಡಿಸಿ ಬಾತ್​ರೂಂ ಲಾಕ್​ ಮಾಡಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು.
ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಪೋಷಕರು ಮತ್ತು ಐಟಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ಅದರ ಅನುಸಾರ ಜುಲೈ 2 ರಂದೇ ವಿಜಯಲಕ್ಷ್ಮಿ ಸೇರಿದಂತೆ ಐದು ಮಹಿಳೆಯರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಇದಾದ ಬಳಿಕ ಜುಲೈ 3ರಂದು ಸುಜಾತಾ ಅವರನ್ನು ಬಂಧಿಸಿದರು. 
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಸುಜಾತಾ ಹಾಗೂ ಡೇ-ಕೇರ್ ಮೇಲ್ವಿಚಾರಕಿ ಮಂಜುಳಾ ನಡುವೆ ಸಂಬಳ ಮತ್ತು ಕೆಲಸದ ವಿಚಾರವಾಗಿ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದವು. ಮಂಜುಳಾಗೆ ತೊಂದರೆ ಕೊಡುವ ಉದ್ದೇಶದಿಂದ, ಸುಜಾತಾ ತಾನೇ ಪುಟ್ಟ ಮಗುವೊಂದನ್ನು ಶೌಚಾಲಯದಲ್ಲಿ ಕೂಡಿ ಹಾಕಿ ವೀಡಿಯೋ ರೆಕಾರ್ಡ್ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮುಖ್ಯ ಆರೋಪಿ ಮಂಜುಳಾ ತಲೆಮರೆಸಿಕೊಂಡಿದ್ದಾಳೆ.
ಇಷ್ಟೇ ಅಲ್ಲದೆ, ಅಲ್ಲಿನ ಸಿಬ್ಬಂದಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ಇನ್ನೂ ಎರಡು ವೀಡಿಯೋಗಳನ್ನು ಸುಜಾತಾ ರೆಕಾರ್ಡ್ ಮಾಡಿಕೊಂಡಿದ್ದಳು. ಈ ಮೂರೂ ವೀಡಿಯೋಗಳನ್ನು ಆಕೆ ಗೌತಮ್ ಎಂಬಾತನಿಗೆ ಕಳುಹಿಸಿದ್ದು, ಆತ ಅದನ್ನು ಇಂಟರ್ನೆಟ್‌ನಲ್ಲಿ ವೈರಲ್ ಮಾಡಿದ್ದಾನೆ. ಡಿಜಿಟಲ್ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಸುಜಾತಾ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕಂಪನಿಯಿಂದ ಡೇ-ಕೇರ್ ಕೇಂದ್ರ ಬಂದ್

ಈ ವಿಷಯ ಹೊರಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕ್ಯಾಪ್‌ಜೆಮಿನಿ ಸಂಸ್ಥೆಯು ತನ್ನ ಕಚೇರಿ ಆವರಣದಲ್ಲಿದ್ದ ಡೇ-ಕೇರ್ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ನಮ್ಮ ಸಿಬ್ಬಂದಿ ಮತ್ತು ಅವರ ಕುಟುಂಬದ ಸುರಕ್ಷತೆಯೇ ನಮಗೆ ಮುಖ್ಯ. ನಾವು ಕಾನೂನು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

ಮಕ್ಕಳ ಹಕ್ಕುಗಳ ಆಯೋಗದ ತನಿಖೆ

ಮಕ್ಕಳಿಗೆ ಹಿಂಸೆ ನೀಡಿರುವ ಈ ಗಂಭೀರ ಪ್ರಕರಣದ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ. ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಪೊಲೀಸರಿಂದ ಸಂಪೂರ್ಣ ವರದಿ ಪಡೆದು ಸ್ವತಂತ್ರವಾಗಿ ತನಿಖೆ ನಡೆಸುವುದಾಗಿ ತಿಳಿಸಿದೆ (ಏಜೆನ್ಸೀಸ್​).