ತುಂಗಾಭದ್ರಾ ರೈತರ ಬದುಕು ಸುಭದ್ರ 
ರಾಜ್ಯ

ತುಂಗಾಭದ್ರಾ ರೈತರ ಬದುಕು ಸುಭದ್ರ

(ರವೀಂದ್ರ ರಡ್ಡಿ ಕೊಪ್ಪಳ) 
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯ ಅಭಿವೃದ್ಧಿಗೆ ಮೂರು ರಾಜ್ಯಗಳು ಟೊಂಕ ಕಟ್ಟಿ ನಿಂತಿವೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಸಿಎಂ ಡಿ.ಕೆ. ಶಿವಕುಮಾರ್​ ತಮ್ಮ ಇಚ್ಛಾಶಕ್ತಿಯಿಂದ ಮರುಜೀವ ನೀಡಿದ್ದಾರೆ. 2024ರ ಆಗಸ್ಟ್​ 10ರಂದು ತುಂಡಾಗಿದ್ದ ಡ್ಯಾಂನ 19ನೇ ಕ್ರಸ್ಟ್​ ಗೇಟ್​ ಮರುಜೋಡಿಸುವ ನೆಪದಲ್ಲಿ ನೆರೆರಾಜ್ಯಗಳ ವಿಶ್ವಾಸ ಸಾಧಿಸಿದ್ದಲ್ಲದೇ 51 ಕೋಟಿ ರೂ. ವೆಚ್ಚದಲ್ಲಿ ವರ್ಷದೊಳಗೆ ಹೊಸ 33 ಸ್ಪಿಲ್​ವೇ ಗೇಟ್​ ಅಳವಡಿಸಿ ಹೊಸ ಇತಿಹಾಸಕ್ಕೆ ಭಾಷ್ಯ ಬರೆಯಲಾಗಿದೆ. ಜೂ. 25ರಂದು ಮೂವರು ಸಿಎಂಗಳು ಒಂದೇ ವೇದಿಕೆಯಲ್ಲಿ ಅಂತಾರಾಜ್ಯ ಜಲವಿವಾದ ಪರಿಹರಿಸಿಕೊಳ್ಳುವ ವಾಗ್ದಾನ ಮಾಡಿದ್ದಾರೆ. ಅಭಿವೃದ್ಧಿಗಾಗಿ ಹಮ್ಮುಬಿಮ್ಮು ತೊರೆದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದು ಬಲು ಅಪರೂಪದ ಘಟನೆ. ಜತೆಗೆ ಐತಿಹಾಸಿಕ ಕೂಡ.
ತುಂಗಭದ್ರಾ ಜಲಾಶಯದ ಹೊಸ ಗೇಟ್​ ಅಳವಡಿಕೆಯಿಂದ ಜಲಾಶಯದ ಭವಿಷ್ಯ 50 ವರ್ಷ ಭದ್ರವಾಗಿದ್ದು, ಅಚ್ಚುಕಟ್ಟು ವ್ಯಾಪ್ತಿಯ 17.33 ಲಕ್ಷ ಎಕರೆ ಪ್ರದೇಶದ ರೈತರ ಬದುಕು ಸುಭದ್ರವಾಗಿದೆ. ತ್ರಿವಳಿ ರಾಜ್ಯಗಳು ವಾಗ್ದಾನದಂತೆ ಹೂಳು ತೆರವು, ನವಲಿ ಸಮಾನಾಂತರ ಜಲಾಶಯ ನಿರ್ಮಿಸಿದ್ದೇ ಆದಲ್ಲಿ ಭವಿಷ್ಯದ ಅರ್ಧ ಶತಮಾನಕ್ಕೆ ನೀರಾವರಿ ಕ್ಷೇತ್ರ ದ್ವಿಗುಣಗೊಳ್ಳಲಿದೆ. ಕುಡಿವ ನೀರು, ಜಲವಿದ್ಯುತ್​ ಉತ್ಪಾದನೆ ಹೆಚ್ಚಳಕ್ಕೆ ಆಸರೆಯಾಗಲಿದೆ.
ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ತುಂಗಭದ್ರಾ ಅಂತಾರಾಜ್ಯ ನೀರಾವರಿ ಯೋಜನೆ. ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಕ್ಕೂ ಮೂರೂ ರಾಜ್ಯಗಳ ಅನುಮೋದನೆ ಅಗತ್ಯ. ರಾಜ್ಯಗಳ ಒಗ್ಗಟ್ಟಿನ ಕೊರತೆಯಿಂದಾಗಿ ಅಭಿವೃದ್ಧಿಗಿಂತ ವಿವಾದವೇ ಹೆಚ್ಚು. ನೀರು ಹಂಚಿಕೆ, ಹೂಳಿಗೆ ಪರ್ಯಾಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಿಟ್ಟ ಯೋಜನೆಗಳೆಲ್ಲ ಅನುಷ್ಠಾನಕ್ಕಿಂತ ಕಡತ ಸೇರಿದ್ದೇ ಅಧಿಕ. 133 ಟಿಎಂಸಿ ಅಡಿ ಜಲ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದ್ದು, 102 ಟಿಎಂಸಿ ಬಳಕೆಗೆ ಸಿಗುತ್ತಿದೆ. 2013ರಿಂದ ಸಮಸ್ಯೆ ಉದ್ಭವಿಸಿದ್ದು, ಪರಿಹಾರ ಕಾಣುವ ಬದಲು ಕಗ್ಗಂಟಾಗುತ್ತ ಸಾಗಿತ್ತು. ರಾಜ್ಯಗಳ ಮಧ್ಯೆ ವಿಶ್ವಾಸದ ಕೊರತೆ, ಅಸಹಕಾರ, ಕಾನೂನು ಸಮರದಿಂದಾಗಿ ವಿವಾದ ಮತ್ತಷ್ಟು ಜಟಿಲವಾಗಿತ್ತು.
ಸತತ 3 ವರ್ಷ ಆಂಧ್ರ-ತೆಲಂಗಾಣದೊಂದಿಗೆ ಮಾತುಕತೆಗೆ ಯತ್ನಿಸಿದ ಡಿಕೆ ಶಿವಕುಮಾರ್​ ಕೊನೆಗೂ ನೆರೆರಾಜ್ಯಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್​. ಪಾಟೀಲ್​ ನೇತೃತ್ವದಲ್ಲಿ ಮುನಿರಾಬಾದ್​ನಲ್ಲಿ ನಡೆದ ಸಭೆಯಲ್ಲಿ ಮಾತುಕತೆ ಮೂಲಕ ವಿವಾದ ಪರಿಹರಿಸಿಕೊಳ್ಳಲು ಮೂವರೂ ಸಿಎಂಗಳು ಶಪಥ ಮಾಡಿದ್ದಾರೆ. ಹೂಳು ತೆರವು, ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಜತೆಗೆ ಭವಿಷ್ಯದಲ್ಲಿನ ನೀರಿನ ಕೊರತೆ ನೀಗಿಸಲು ನದಿಜೋಡಣೆಗೆ ಸಮ್ಮತಿಸಿದ್ದಾರೆ.
ಜಲವಿವಾದ ಇಷ್ಟು ಸರಳವಾಗಿ ಪರಿಹಾರವಾದದ್ದು ಇತಿಹಾಸದಲ್ಲೇ ಇಲ್ಲ. ದಶಕಗಳ ವಿವಾದವನ್ನು ಕೇವಲ ಒಂದು ಳಿಗೆಯ ಸಭೆಯಲ್ಲಿ ಪರಿಹರಿಸಿಕೊಂಡು ಕೇಂದ್ರದ ಯೋಜನೆಗೆ ಕೈಜೋಡಿಸುವ ನಿರ್ಧಾರ ಕೈಗೊಂಡಿದ್ದು ದೇಶವೇ ತಿರುಗಿ ನೋಡುವಂತೆ ಮಾಡಿದೆ. ಡ್ಯಾಂ ಸಂಬಂಧ ಸದ್ಯ ಇರುವ ಪರಿಹಾರ ಸೂತ್ರಗಳು, ಉಪಕ್ರಮ, ಪ್ರಸ್ತಾವನೆಗಳನ್ನು ಅವಲೋಕಿಸುವ ಭರವಸೆ ನೀಡಿರುವ ಕೇಂದ್ರ, ಮೂರು ರಾಜ್ಯಗಳಿಗೂ ಅನುಕೂಲವಾಗುವ ಯೋಜನೆ ರೂಪಿಸುವ ವಾಗ್ದಾನ ಮಾಡಿದೆ. ರಾಜಕೀಯ ಟೀಕೆ ಟಿಪ್ಪಣಿ, ವಿರೋಧ ಪಕ್ಷದ ವ್ಯಾಖ್ಯಾನ ಏನೇ ಇರಬಹುದು ಈ ಬೆಳವಣಿಗೆಯ ಪೂರ್ಣ ಕ್ರೆಡಿಟ್​ ಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ಸಲ್ಲಬೇಕೆಂಬುದರಲ್ಲಿ ಎರಡು ಮಾತಿಲ್ಲ.

ಸಮಾನಾಂತರ ಜಲಾಶಯ ಪರಿಹಾರ

ಸದ್ಯ ರಾಜ್ಯಕ್ಕೆ ಪ್ರತಿ ವರ್ಷ 38 ಟಿಎಂಸಿ ನೀರು ನಷ್ಟವಾಗುತ್ತಿದೆ. ರಾಯಚೂರು ಭಾಗದ (ಮೈಲ್​ 47ರಿಂದ 141ವರೆಗೆ) 2 ಲಕ್ಷ ಎಕರೆ ಪ್ರದೇಶಕ್ಕೆ ನೀರು ಸರಿಯಾಗಿ ತಲುಪುತ್ತಿಲ್ಲ. 2013ರಲ್ಲೇ ಯೋಜಿಸಿದಂತೆ ಜಲಾಶಯದ ಹೂಳು ತೆರವಿಗೆ 65 ಸಾವಿರ ಎಕರೆ ಜಾಗ ಬೇಕಿದ್ದು, ಪ್ರತಿ ಟಿಎಂಸಿಗೆ 380 ಕೋಟಿ ರೂ.ನಂತೆ 12,500 ಕೋಟಿ ರೂ. ಅನುದಾನ ಅವಶ್ಯವೆಂದು ಅಧಿಕಾರಿಗಳು ಅಂದಾಜಿಸಿದ್ದರು. ಯೋಜನೆ ಕೈಬಿಟ್ಟ ರಾಜ್ಯ ಸರ್ಕಾರ ಪರ್ಯಾಯವಾಗಿ ಫ್ಲಡ್​ಫ್ಲೋ ಕಾಲುವೆ ಮೂಲಕ ನವಲಿ ಬಳಿ 30.02 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆ ರೂಪಿಸಿದೆ. ಹಿನ್ನೀರು ಭಾಗದ ಹಿರೇಬಗನಾಳ ಬಳಿಯಿಂದ ನವಲಿವರೆಗೆ 38 ಕಿ.ಮೀ. ಕಾಲುವೆ ಮೂಲಕ ಹೊಸ ಜಲಾಶಯಕ್ಕೆ ನೀರು ಸೇರಿಸಬೇಕು. ಅಲ್ಲಿಂದ ಮುಂದೆ 8 ಕಿ.ಮೀ. ಕಾಲುವೆ ಮೂಲಕ ತುಂಗಭದ್ರಾ ಎಡದಂಡೆ ಕಾಲುವೆಯ 45ನೇ ಮೈಲ್​ಗೆ ಕೂಡಿಸಿದಲ್ಲಿ ಕಡೆಭಾಗದ ರೈತರಿಗೆ ಆಗುತ್ತಿರುವ ನೀರಿನ ಕೊರತೆ ನೀಗಿಸಬಹುದೆಂದು ಲೆಕ್ಕ ಹಾಕಲಾಗಿದೆ. 2013ರಲ್ಲಿ ಯೋಜಿಸಿದಂತೆ ಹೊಸ ಡ್ಯಾಂ ಕಟ್ಟಲು 6,000 ಕೋಟಿ ರೂ. ವೆಚ್ಚ ತಗುಲಲಿದ್ದು, 17,900 ಎಕರೆ ಭೂಮಿ ಬೇಕು. 12 ಗ್ರಾಮಗಳು ಮುಳುಗಡೆಯಾಗಲಿದ್ದು, 6,500 ಜನರನ್ನು ಬೇರೆಡೆ ಸ್ಥಳಾಂತರಿಸಬೇಕೆನ್ನಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಡಿಪಿಆರ್​ ಮಾಡಿಸಿದ್ದು ವಿವರಗಳು ಬಹಿರಂಗವಾಗಿಲ್ಲ. ಆದರೆ ಈಗ ನೂತನ ಮುಖ್ಯಮಂತ್ರಿಯವರ ಸಾರಥ್ಯದಲ್ಲಿ ಹೊಸ ಪ್ರಯತ್ನ ಆರಂಭವಾಗಿದೆ.

70:30 ಅನುಪಾತದಲ್ಲಿ ನೀರು ಹಂಚಿಕೆ

ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಐತೀರ್ಪು-1ರಂತೆ ತುಂಗಭದ್ರಾ ಯೋಜನೆಗೆ 230 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಕರ್ನಾಟಕಕ್ಕೆ 151.49 ಟಿಎಂಸಿ, ಆಂಧ್ರ-ತೆಲಂಗಾಣಕ್ಕೆ 78.51 ಟಿಎಂಸಿ ನೀರು ಹಂಚಿಕೆಯಾಗಿದೆ. 17.33 lakh ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಇದರಲ್ಲಿ ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳ 9.26 ಲಕ್ಷ ಎಕರೆ ನೀರಾವರಿ ಸೌಲಭ್ಯ ಪಡೆದಿದೆ. ಆಂಧ್ರದಲ್ಲಿ 7.20 ಲಕ್ಷ ಎಕರೆ, ತೆಲಂಗಾಣದಲ್ಲಿ 87 ಸಾವಿರ ಎಕರೆ ಪ್ರದೇಶ ಸಮೃದ್ಧವಾಗಿದೆ. 30 ಟಿಎಂಸಿ ಹೂಳು ತುಂಬಿದ ಕಾರಣ 2013ರಿಂದ ಪ್ರತಿ ವರ್ಷ ಎರಡೂ ಬೆಳೆಗಳಿಗೆ ನೀರಿನ ಕೊರತೆಯಾಗುತ್ತಿದೆ. ನ್ಯಾಯಾಧಿಕರಣದಲ್ಲಿ ಹಂಚಿಕೆಯಾದ ನೀರನ್ನೇ ಬಳಸಲಾಗದ ಸ್ಥಿತಿ ನಿರ್ಮಾಣವಾಗಿದೆ. ವರ್ಷದಿಂದ ವರ್ಷಕ್ಕೆ ನೀರಿನ ಕೊರತೆ ಹೆಚ್ಚುತ್ತಿದ್ದರೆ, ಹೂಳಿನ ಪ್ರಮಾಣವೂ ಪ್ರತಿ ವರ್ಷ 0.5ರಷ್ಟು ಏರುತ್ತಿದೆ.

ತ್ರಿವಳಿ ರಾಜ್ಯಗಳಿಗೆ ಹತ್ತಾರು ಪ್ರಯೋಜನ

ಮೂರೂ ರಾಜ್ಯಗಳ ಹಿತದೃಷ್ಟಿಯ ಯೋಜನೆ ಅನುಮೋದಿಸಿದಲ್ಲಿ ಭವಿಷ್ಯದ ಕೃಷ, ನೀರಾವರಿ ಕ್ಷೇತ್ರ ವಿಸ್ತರಣೆ, ಆಹಾರ ಉತ್ಪಾದನೆ, ದೇಶದ ಆರ್ಥಿಕತೆ, ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ, ವಾರ್ಷಿಕ 50-60 ಸಾವಿರ ಕೋಟಿ ರೂ. ವಹಿವಾಟು ವೃದ್ಧಿಸಲಿದೆ. ಜಲವಿದ್ಯುತ್​ ಉತ್ಪಾದನೆ, ಕುಡಿವ ನೀರಿನ ಬವಣೆ ನೀಗಿಸಲು ಶಕ್ತಿ ತುಂಬಲಿದೆ. ನವಲಿ ಜಲಾಶಯದಲ್ಲಿ 30.32 ಟಿಎಂಸಿ ನೀರು ಸಂಗ್ರಹಿಸಿದರೆ ರಾಜ್ಯಕ್ಕೆ ಲಾಭವಾಗಲಿದೆ. ನೆರೆರಾಜ್ಯಗಳಿಗೂ ಪಾಲು ದೊರೆಯಲಿದೆ. ಎಡದಂಡೆ 45ನೇ ಮೈಲ್​ಗೆ ಹೊಸ ಡ್ಯಾಂನಿಂದ ಕಾಲುವೆ ಸಂಪರ್ಕಿಸುವುದರಿಂದ ಕೊನೇ ಭಾಗದ ರೈತರಿಗೆ ಸುಲಭವಾಗಿ ನೀರು ತಲುಪಿಸಬಹುದು. ಭವಿಷ್ಯದಲ್ಲಿ ಜಲಾಶಯದ ಎತ್ತರವನ್ನು 497.500 ಮೀಟರ್​ ಹಂತಕ್ಕೆ ಹೆಚ್ಚಿಸಿದಲ್ಲಿ 52 ಟಿಎಂಸಿ ಅಡಿ ನೀರು ಸಂಗ್ರಹಿಸಿಕೊಳ್ಳಬಹುದು. ನದಿಜೋಡಣೆ ಸಾಕಾರವಾದಲ್ಲಿ ಎರಡೂ ಜಲಾಶಯ ಭರ್ತಿಗೆ ಅನುಕೂಲವಾಗಲಿದ್ದು ನೀರಾವರಿ ಕ್ಷೇತ್ರ ಹೆಚ್ಚಿಸಬಹುದು. ಏತ ನೀರಾವರಿ ಯೋಜನೆಗಳ ಮೂಲಕ ಒಣ ಬೇಸಾಯ ಪ್ರದೇಶಗಳನ್ನು ನೀರಾವರಿಗೊಳಪಡಿಸಲು ಅನುಕೂಲ. ಕಾಲುವೆ ಮೂಲಕ ನೀರು ಹರಿಸುವುದರಿಂದ ಜಲವಿದ್ಯುತ್​ ಉತ್ಪಾದನೆ ಪ್ರಮಾಣ ಹೆಚ್ಚಲಿದೆ.

ಗೇಟ್​ ಅಳವಡಿಕೆ ಇತಿಹಾಸ

1953ರಲ್ಲಿ ಜಲಾಶಯ ಲೋಕಾರ್ಪಣೆಗೊಂಡಿದ್ದು, 1955ರಲ್ಲಿ ಸ್ಪಿಲ್​ವೇ ಗೇಟ್​ ಅಳವಡಿಸಲಾಗಿದೆ. 70 ವರ್ಷದ ಬಳಿಕ ಶಕ್ತಿ ಕಳೆದುಕೊಂಡ 19ನೇ ಕ್ರಸ್ಟ್​ಗೇಟ್​ 2024ರ ಆ. 10ರ ಮಧ್ಯರಾತ್ರಿ ಕಳಚುವ ಮೂಲಕ ಬಹುದೊಡ್ಡ ಆಪತ್ತು ತಂದೊಡ್ಡಿತು. ರಾಜ್ಯ ರಾಜಕೀಯದಲ್ಲಿ ಟ್ರಬಲ್​ಶೂಟರ್​ ಎಂದು ಖ್ಯಾತಿಯಾದ ಸಿಎಂ ಡಿ.ಕೆ. ಶಿವಕುಮಾರ್​ ಆಗ ಜಲಸಂಪನ್ಮೂಲ ಖಾತೆ ಜತೆಗೆ ಡಿಸಿಎಂ ಆಗಿದ್ದರು. ವಿಷಯ ತಿಳಿಯುತ್ತಲೇ ಬೆಳಗಾಗುವುದರೊಳಗೆ ಟಿಬಿ ಡ್ಯಾಂಗೆ ಬಂದಿದ್ದೇ ಟಿಬಿ ಬೋರ್ಡ್​, ಆಂಧ್ರ-ತೆಲಂಗಾಣ ಸರ್ಕಾರಗಳೊಡನೆ ಮಾತನಾಡಿ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ವಾರದೊಳಗೆ ಸ್ಟಾಪ್​ಲಾಗ್​ ಗೇಟ್​ ಅಳವಡಿಸಿ 71.35 ಟಿಎಂಸಿ ಜಲರಾಶಿ ರಕ್ಷಿಸಲು ಕಾರಣರಾದರು. ಆ ವರ್ಷ ಮುಂಗಾರು-ಹಿಂಗಾರು ಬೆಳೆಗೆ ನೀರೊದಗಿಸಲು ಸಾಧ್ಯವಾಯಿತು. ತಕ್ಷಣವೇ ಹೊಸ ಗೇಟ್​ ನಿರ್ಮಾಣ ಕಾರ್ಯಕ್ಕೆ 2025ರ ಏ. 4ರಂದು ಟೆಂಡರ್​ ಕರೆದಿದ್ದಲ್ಲದೇ ರಾಜ್ಯದ ಜಲಾಶಯ ಸುರಕ್ಷತೆ ಪರಿಶೀಲನೆಗೆ ವಿಶೇಷ ಸಮಿತಿ ರಚಿಸಲಾಯಿತು. ಸಮಿತಿ ನೀಡಿದ ವರದಿ ಆತಂಕ ತಂದಿತ್ತು. ಜಲಾಶಯದ ಅಷ್ಟೂ ಗೇಟ್​ಗಳು ಶಕ್ತಿ ಕಳೆದುಕೊಂಡಿದ್ದು, ಗಮನಕ್ಕೆ ಬರುತ್ತಲೇ ಎಲ್ಲ 33 ಗೇಟ್​ ಬದಲಾವಣೆ ಮಾಡುವ ಮಹತ್ತರ ನಿರ್ಧಾರ ಕೈಗೊಳ್ಳಲಾಯಿತು. ಆಂಧ್ರ-ತೆಲಂಗಾಣ ಸರ್ಕಾರಗಳ ಸಮ್ಮತಿ ಪಡೆದು ಟಿಬಿ ಬೋರ್ಡ್​ ತಕ್ಷಣವೇ ಟೆಂಡರ್​ ಆಹ್ವಾನಿಸಿತು. 51 ಕೋಟಿ ರೂ. ಮೊತ್ತದಲ್ಲಿ ಹೊಸಪೇಟೆ-ಗದಗನಲ್ಲಿ ನಿರ್ಮಾಣಗೊಂಡ ಹೊಸ ಗೇಟ್​ಗಳನ್ನು ವರ್ಷದೊಳಗೆ ಅಳವಡಿಸಿ ದೇಶದ ನೀರಾವರಿ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಾಯಿತು.

ಅಭಿವೃದ್ಧಿಗೆ ಭಾಷ್ಯ ಬರೆದ ಸಿಎಂಗಳು

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್​ರೆಡ್ಡಿ ಹಾಗೂ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್​ ಅಭಿವೃದ್ಧಿಗಾಗಿ ಪಕ್ಷಭೇದ, ಒಣಪ್ರತಿಷ್ಠೆ ಬದಿಗಿಟ್ಟು ಒಂದಾಗಿದ್ದಾರೆ. ರೈತರ ಸಮಸ್ಯೆಗೆ ...ಸ್ಪಂದಿಸುವ ಮೂಲಕ ತಾವು ಅಭಿವೃದ್ಧಿಪರವೆಂದು ಸಾರಿದ್ದಾರೆ. ದೇಶದ ಇತಿಹಾಸದಲ್ಲಿ ಇದೊಂದು ಅಪರೂಪದ ಘಟನೆ. ದಕ್ಷಿಣ ರಾಜ್ಯಗಳೂ ಸರ್ವತೋಮುಖ ಬೆಳವಣಿಗೆ ಕಾಣಬೇಕೆಂಬ ನಿಟ್ಟಿನಲ್ಲಿ ರಾಜಕೀಯ ಬೆರೆಸದೆ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಡಿ.ಕೆ.ಶಿವಕುಮಾರ್​ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದ್ದು, ಇಷ್ಟು ವರ್ಷಗಳ ಜಲವಿವಾದ, ನೀರಿನ ಅಭಾವ, ಹಂಚಿಕೆ ಸೂತ್ರದ ಜಿಜ್ಞಾಸೆಗೆ ಸರಳ ಪರಿಹಾರ ಸಿಕ್ಕಂತಾಗಿದೆ. ಮುಖ್ಯವಾಗಿ ದಿನಬೆಳಗಾದರೆ ಟೀಕೆ ಟಿಪ್ಪಣಿ ಮೂಲಕ ಸಕ್ರಿಯರಾಗುವ ಬದಲು ಮಾತುಕತೆ ಮೂಲಕ, ಮನವೊಲಿಸುವ ಮೂಲಕ ನಾಡಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಖಂಡಿತ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿಯಲಿದೆ.