- ಡಾ.ಮೋಹನ್ ಆಳ್ವಾ ಅಧ್ಯಕ್ಷತೆಯ ಸಮಿತಿ ತುಳು ಭಾಷೆಯ ಕುರಿತು ಅಧ್ಯಯನ
- ಆಂಧ್ರಪ್ರದೇಶದಲ್ಲಿ ಉರ್ದು 2ನೇ ಅಧಿಕೃತ ಭಾಷೆಯಾಗಿ
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸಿ ಘೋಷಣೆ ಮಾಡಬೇಕು ಎಂದು ಸ್ಪೀಕರ್ ಸೇರಿದಂತೆ ಕರಾವಳಿ ಭಾಗದ 13 ಶಾಸಕರು ಒಕ್ಕೊರಲಿನಿಂದ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ತುಳು ಭಾಷೆ ಬಗ್ಗೆ ಪುತ್ತೂರಿನ ಅಶೋಕ್ ಕುಮಾರ್ ರೈ ಕೇಳಿದ ಪ್ರಶ್ನೆಗೆ ಒಗ್ಗಟ್ಟಾಗಿ ಚರ್ಚೆಗಿಳಿದ ತುಳುನಾಡಿನ ಶಾಸಕರು, ತುಳುವಿನಲ್ಲಿ ಮಾತನಾಡಿಕೊಂಡರು. ಸ್ಪೀಕರ್ ಜೊತೆಗೆ ತುಳುವಿನಲ್ಲಿ ಮಾತನಾಡಿದ್ದು ಸದನದ ಹುಬ್ಬೇರುವಂತೆ ಮಾಡಿತ್ತು.
ಚರ್ಚೆಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಕುರಿತು ರಚನೆಯಾಗಿರುವ ತಂಡ ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ತೆರಳಿ ಅಧ್ಯಯನ ಮಾಡಿದೆ. ಈ ವರದಿಯನ್ನು ಸಲ್ಲಿಸಿದ ನಂತರ ಪರಿಶೀಲಿಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಿರುವ ಅಧ್ಯಯನ ತಂಡ ವಿವಿಧ ರಾಜ್ಯಗಳಲ್ಲಿ ಎರಡನೇ ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಕುರಿತು 3 ತಿಂಗಳಲ್ಲಿ ಸಂಪೂರ್ಣ ಅಧ್ಯಯನ ನಡೆಸುವ ಜವಾಬ್ದಾರಿ ನೀಡಲಾಗಿದೆ ಎಂದರು.
ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು 2ನೇ ಅಧಿಕೃತ ಭಾಷೆಯಾಗಿ ಘೋಷಿಸಲು ಅನುಸರಿಸಿರುವ ಮಾನದಂಡಗಳ ಕುರಿತು ಪರಿಶೀಲಿಸಲು ಜ.19 ಮತ್ತು 20ರಂದು ಅಲ್ಲಿಗೆ ಭೇಟಿ ಅಧ್ಯಯನ ಮಾಡಿದೆ ಎಂದರು.
*ವರದಿ ಬಳಿಕವೇ ಮುಂದುವರೆಯಬೇಕು:
ಡಾ.ಮೋಹನ್ ಆಳ್ವಾ ಅಧ್ಯಕ್ಷತೆಯ ಸಮಿತಿ ತುಳು ಭಾಷೆಯ ಕುರಿತು ಅಧ್ಯಯನ ನಡೆಸಿ 2023ರ ಫೆ.14ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಕುರಿತು ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ ಭಾಷೆ. ಅದೇ ರೀತಿ ಇಂಗ್ಲಿಷ್ ಹೆಚ್ಚುವರಿ ಆಡಳಿತ ಭಾಷೆಯಾಗಿದೆ. ಯಾವುದೇ ರಾಜ್ಯ ಸರ್ಕಾರ ಒಂದು ಭಾಷೆಯನ್ನು ಆ ರಾಜ್ಯದ ಅಧಿಕೃತ ಭಾಷೆಯೆಂದು ಘೋಷಿಸಲು ಭಾರತ ಸಂವಿಧಾನದ ಅನುಚ್ಛೇದ 345ರಲ್ಲಿ ಅವಕಾಶ ಮಾಡಿಕೊಟ್ಟಿದೆ. ಈ ಪ್ರಕಾರ ಕ್ರಮ ವಹಿಸುವ ಪೂರ್ವದಲ್ಲಿ ಕಾನೂನಾತ್ಮಕ ಸಮಿತಿಗಳನ್ನು ರಚಿಸಿ ವರದಿ ಪಡೆದುಕೊಂಡು ಅನಂತರವೇ ಸರ್ಕಾರ ತೀರ್ಮಾನಿಸಬೇಕಿದೆ.
ಸದನದಲ್ಲಿ ತುಳು ಮಾತು ತಂದ ಸಂಚಲನ
ನನ್ನ ಬೈದರೋ, ಹೊಗಳಿದರೋ ತಿಳಿಸಿ ಎಂದ ಸಚಿವ:
ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಕಾಂಗ್ರೆಸ್‌ನ ಅಶೋಕಕುಮಾರ್ ರೈ ಪ್ರಸ್ತಾಪಕ್ಕೆ ಬಿಜೆಪಿಯ ಡಿ.ವೇದವ್ಯಾಸ್ ಕಾಮತ್ ಸೇರಿದಂತೆ ಹಲವರು ದನಿಗೂಡಿಸಿದರು. ಈ ವೇಳೆ ಯು.ಟಿ.ಖಾದರ್ ಮತ್ತು ಕಾಮತ್ ನಡುವೆ ತುಳುವಿನಲ್ಲಿ ಸಂಭಾಷಣೆ ನಡೆಯಿತು.
ತಕ್ಷಣವೇ ಎದ್ದುನಿಂತ ಸಚಿವ ಶಿವರಾಜ್ ಎಸ್.ತಂಗಡಗಿ, ನನ್ನ ರಕ್ಷಣೆಗೆ ನೀವು(ಸಭಾಧ್ಯಕ್ಷರು) ಬರಬೇಕು. ಕಾಮತ್ ತುಳುವಿನಲ್ಲಿ ನನಗೆ ಏನು ಬೈದರೋ ಅಥವಾ ಹೊಗಳಿದರೋ ಗೊತ್ತಾಗುತ್ತಿಲ್ಲ. ಹೊಗಳಿದ್ದಾರೆ ಎನ್ನುವುದು ನನ್ನ ಅನಿಸಿಕೆ. ಆದರೆ ಕಾಮತ್ ಯಾವಾಗಲೂ ಪಾಸಿಟಿವ್ ಆಗಿ ಮಾತನಾಡಲ್ಲ. ಅವರು ಏನೆಂದು ಬೈದರು ಎಂದು ನೀವೇ ತಿಳಿಸಬೇಕೆಂದರು.
ಅದಕ್ಕೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿ, ನಿಮಗೆ ಸಂಶಯ ಬೇಡ. ನಮ್ಮ ತುಳುನಾಡಿನವರು ಏನೇ ಬೈದರೂ ಅಥವಾ ಹೊಗಳಿದರೂ ಪ್ರೀತಿಯಲ್ಲದೆ ಕೋಪ ಇರುವುದಿಲ್ಲ ಎಂದರು.
*ತುಳು ಭಾಷೆಗೆ 3 ಸಾವಿರ ವರ್ಷಗಳ ಇತಿಹಾಸವಿದೆ. ಗೂಗಲ್ ನಲ್ಲೂ ಸಂಭಾಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಜರ್ಮನ್ ಮತ್ತು ಫ್ರಾನ್ಸ್‌ನಲ್ಲಿ ತುಳು ಅಧ್ಯಯನ ಮಾಡಲು ಅವಕಾಶ ಕೊಟ್ಟಿದ್ದಾರೆ. ವಿಶ್ವ ವಿದ್ಯಾಲಯ ಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಮೂರ್ನಾಲ್ಕು ಭಾಷೆಗಳನ್ನು ಹೆಚ್ಚುವರಿ ಭಾಷೆಯನ್ನಾಗಿ ತೆಗೆದುಕೊಳ್ಳಲಾಗಿದೆ. ನಾನು ಸದನ ಪ್ರವೇಶಿಸಿದ ಮೊದಲ ದಿನದಿಂದಲೂ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬುದು ಒತ್ತಾಯ ಮಾಡುತ್ತಿದ್ದೇನೆ. ಪ್ರತಿ ಅಧಿವೇಶನದಲ್ಲೂ ಇದೇ ಪ್ರಶ್ನೆ ಕೇಳುತ್ತಿದ್ದೇನೆ. ಇದಕ್ಕೆ ಆರ್ಥಿಕ ನೆರವು ಬೇಕಾಗಿಲ್ಲ. ಯಾರಿಂದಲೂ ತಕರಾರು ಇಲ್ಲ. ಸರ್ಕಾರ ಯಾವ ಕಾಲಮಿತಿಯಲ್ಲಿ ಘೋಷಣೆ ಮಾಡುತ್ತದೆ ಎಂದು ತಿಳಸಬೇಕು.
-ಅಶೋಕ್ ಕುಮಾರ್ ರೈ(ಪುತ್ತೂರು), ಕಾಂಗ್ರೆಸ್ ಶಾಸಕ
*ತುಳುನಾಡಿನವರು ಒಳ್ಳೆಯ ಮತ್ತು ಪ್ರೀತಿಯ ಜನ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತು ರಚಿಸಿರುವ ತಂಡ ಆಂಧ್ರಪ್ರದೇಶದಲ್ಲಿ ಅಧ್ಯಯನ ನಡೆಸಿದ್ದು, ವರದಿ ಕೊಟ್ಟ ನಂತರ ಕ್ರಮ ವಹಿಸಲಾಗುವುದು.
-ಶಿವರಾಜ ಎಸ್.ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ