- ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಸ್ಯಕ್ಕೂ ತಮ್ಮದೇ ಆದ ಪವಿತ್ರ ಸ್ಥಾನವಿದೆ
- ದೇವರ ರೂಪವಾಗಿ ಇಲ್ಲವೇ ದೇವರಿಗೆ ಪ್ರಿಯವಾದ್ದು ಎನ್ನುವ ಭಾವನೆ ಇದೆ
- ಎಲ್ಲ ಭಾರತೀಯ ಮನೆಯಲ್ಲಿ ತಪ್ಪದೆ ನಾವು ನೋಡಬಹುದಾದ ಗಿಡ ತುಳಸಿ
- ಪ್ರತಿನಿತ್ಯ ತುಳಸಿಗೆ ಭಾರತೀಯ ಹೆಣ್ಣುಮಗಳು ಪೂಜೆ ಮಾಡುತ್ತಾಳೆ
Bhoo Vandana 15 : ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಸ್ಯಕ್ಕೂ ತಮ್ಮದೇ ಆದ ಪವಿತ್ರ ಸ್ಥಾನವಿದೆ. ಪರಿಸರಕ್ಕೆ ಅವುಗಳ ಅಗತ್ಯತೆಯನ್ನು ಮನದಟ್ಟು ಮಾಡಲು ಅನೇಕ ಸಸ್ಯಗಳನ್ನು ದೇವರ ರೂಪವಾಗಿ ಇಲ್ಲವೇ ದೇವರಿಗೆ ಪ್ರಿಯವಾದ್ದು ಎನ್ನುವ ಭಾವವನ್ನು ಪ್ರಚುರಪಡಿಸಲಾಗಿದೆ. ಪರಿಸರದ ರಕ್ಷಣೆಗಾಗಿಯೇ ಎಂಬಂತೆ ಪ್ರತಿ ಕುಟಂಬವನ್ನೂ ಒಂದೂಂದು ಗಿಡದ ಶಾಖೆಯೆಂದು ಗುರುತಿಸಿಕೊಳ್ಳುವ ವ್ಯವಸ್ಥೆಯಿದೆ. ಯಾವ ಗಿಡದೊಂದಿಗೆ ಕುಟುಂಬ ಗುರುತಿಸಿಕೊಂಡಿದೆಯೋ ಆ ಗಿಡವನ್ನು ಕಡಿಯುವಂತಿಲ್ಲ, ಕೀಳುವಂತೆಯೂ ಇಲ್ಲ. ಉದಾಹರಣೆಗೆ: ಹೊoಗೆ, ಆಲ, ಎಕ್ಕ ಇತ್ಯಾದಿ.
ಎಲ್ಲ ಭಾರತೀಯ ಮನೆಯಲ್ಲಿ ತಪ್ಪದೆ ನಾವು ನೋಡಬಹುದಾದ ಗಿಡ ತುಳಸಿ. ಪ್ರತಿನಿತ್ಯ ತುಳಸಿಗೆ ಭಾರತೀಯ ಹೆಣ್ಣುಮಗಳು ಪೂಜೆ ಮಾಡುತ್ತಾಳೆ. ಇನ್ನು ಕಾರ್ತಿಕ ಮಾಸದ ದ್ವಾದಶಿಯಂದು ಮನೆಮಂದಿಯೆಲ್ಲ ಸೇರಿ ತುಳಸಿಗೆ ವಿಶೇಷ ಪೂಜೆಯನ್ನು ಮಾಡಿ ಸoಭ್ರಮಿಸುತ್ತಾರೆ ಮತ್ತು ಧನ್ಯ ಭಾವನೆಯನ್ನು ಅನುಭವಿಸುತ್ತಾರೆ. ತುಳಸಿ ಪೂಜೆಯ ಆ ಸಂಭ್ರಮವನ್ನು ಅದಾಗಲೇ ಮುಗಿಸಿದ್ದೇವೆ. ಆದರೆ, ಪ್ರತಿನಿತ್ಯದ ತುಳಸಿಗೆ ಪೂಜೆ ನಿರಂತರವಾಗಿ ನಡೆಸುವಾಗ ಈ ಗಿಡಕ್ಕೆ ನಾವು ಏಕೆ ವಿಶೇಷ ಪೂಜೆ ಸಲ್ಲಿಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದೂ ಅತ್ಯಗತ್ಯ. ಭಾರತೀಯ ಪರಂಪರೆಯ ಆಚರಣೆಗಳು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿವೆಯೆನ್ನಲು ನಾವು ಮಾಡುವ ತುಳಸಿ ಪೂಜೆ ಒಂದು ನಿದರ್ಶನ ಮಾತ್ರ.
ಭಾರತೀಯ ವೈದ್ಯ ಪದ್ಧತಿ ಆಯುರ್ವೇದದಲ್ಲಿ ತುಳಸಿಯನ್ನು “ಮಹೌಷಧಿ” ಎಂದು ಗುರುತಿಸಲಾಗಿದೆ. ಚರಕ ಸಂಹಿತೆಯ ಸೂತ್ರಸ್ಥಾನ ಅಧ್ಯಾಯದಲ್ಲಿ ತುಳಸಿಯನ್ನು “ಕಫ-ವಾತ ನಿವಾರಿಣಿ, ದೀಪನಿ, ಹೃದಯ ಹಿತಕರ” ಎಂದು ವರ್ಣಿಸಲಾಗಿದೆ. ಅಂದರೆ ತುಳಸಿಯ ಸೇವನೆಯಿಂದ ದೇಹದಲ್ಲಿ ಉಂಟಾಗುವ ದೋಷಗಳ ನಿವಾರಣೆಯಾಗಿ ಜೀರ್ಣಕ್ರಿಯೆಗೆ ಅನುವು ಮಾಡಿಕೊಡುತ್ತದೆ. ಸುಶ್ರುತ ಸಂಹಿತೆಯ ಉತ್ತರ ತಂತ್ರದಲ್ಲಿ ತುಳಸಿಯನ್ನು “ಶ್ವಾಸಕಾಸ ನಾಶಿನೀ” ಯಾಗಿ ವಿವರಿಸಲಾಗಿದೆ. ಅಂದರೆ ಉಸಿರಾಟದ ತೊಂದರೆಗಳು, ಕಫವನ್ನು ಹೋಗಲಾಡಿಸುತ್ತದೆ ಎ೦ದು ವಿವರಿಸುತ್ತಾರೆ.
ಇನ್ನೊಬ್ಬ ಪ್ರಖ್ಯಾತ ಆಯುರ್ವೇದ ಪಂಡಿತ ಭಾವಪ್ರಕಾಶರ 'ನಿಘಂಟಿ' ನಲ್ಲಿ ತುಳಸಿಯನ್ನು "ಸೂರಸಾ" ಎಂಬ ಹೆಸರಿನಿoದ ಉಲ್ಲೇಖಿಸಿದ್ದಾರೆ. ತುಳಸಿಯ 5 ಬಗೆಗಳು ಅಂದರೆ ಶ್ರೀತುಳಸಿ, ಕೃಷ್ಣತುಳಸಿ, ರಕ್ತತುಳಸಿ, ವನತುಳಸಿ ಮತ್ತು ಕಪೂರತುಳಸಿ ವೈದ್ಯಕೀಯ ಗುಣಗಳನ್ನು ಹೊಂದಿವೆ ಎನ್ನುತ್ತಾರೆ. ತುಳಸಿಯು ಜ್ವರಹರ, ಕಫಹರ, ದೀಪನ (ಜೀರ್ಣಕ್ರಿಯೆ ವೃದ್ಧಕ), ರಕ್ತಶೋಧಕ (ರಕ್ತ ಶುದ್ಧೀಕಾರಕ) ಎಂದು ಅವರು ವಿವರಿಸುತ್ತಾರೆ. ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ತುಳಸಿ ಗಿಡದ ಪ್ರತಿ ಭಾಗವೂ ಅಂದರೆ ಎಲೆ, ಬೀಜ, ಮತ್ತು ಬೇರುಗಳಿಂದ ಅನೇಕ ಔಷಧೀಯ ಉತ್ಪನ್ನಗಳು ತಯಾರಾಗುತ್ತಿವೆ.
ಪ್ರಾಚೀನ ವೈದ್ಯ ಪರಂಪರೆಯೊಂದಿಗೆ ಇಂದಿನ ವಿಜ್ಞಾನವೂ ತುಳಸಿಯಲ್ಲಿರುವ ವಿವಿಧ ರಸಾಯನಿಕಗಳು, ಉದಾಹರಣೆಗೆ ಯುಜಿನಾಲ್( Eugenol) ಹೃದಯ ಮತ್ತು ಶ್ವಾಸಕೋಶದ ಆರೋಗ್ಯ ಸುಧಾರಣೆಗೆ, ಉರ್ ಸೋಲಿಕ್ ಆಸಿಡ್( Ursolic acid) ಪ್ರತಿಜೀವಕ ಮತ್ತು ಪ್ರತಿದಹನ (anti-inflammatory) ಚಿಕಿತ್ಸೆಗೆ ಅತ್ಯoತ ಫಲಕಾರಿಯೆನ್ನುತ್ತದೆ. ಹಾಗೆಯೇ ತುಳಸಿಯಲ್ಲಿರುವ ಲಿನಾಲೂಲ್ ( Linalool ) ಮನಸ್ಸನ್ನು ಸಮಾಧಾನ ಪಡಿಸುವ ಹಾಗೂ ನಿದ್ರೆಯ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ಬಳಕೆಯಾದರೆ, ಮಾನಸಿಕ ಒತ್ತಡದಿಂದ ಬಳಲುವವರಿಗೆ ಈ ಗಿಡದಲ್ಲಿರುವ ರೋಸ್ಮರಿನಚ್ ಆಸಿಡ್ (Rosmarinic acid) ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆಂದು ತಿಳಿಸಿದೆ. ಮಾನವ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ತುಳಸಿ ಬಲಪಡಿಸುತ್ತವೆ. ಆಧುನಿಕ ವೈದ್ಯಕೀಯ ವಿಜ್ಞಾನದ ಸoಶೋಧನೆಗಳು ತುಳಸಿಯ ಇಮ್ಯುನೋಮೋಡ್ಯುಲೇಟರ್, ಆ್ಯಂಟಿ-ಆಕ್ಸಿಡೆಂಟ್, ಮತ್ತು ಆ್ಯಂಟಿ-ಮೈಕ್ರೋಬಿಯಲ್ ಗುಣಗಳನ್ನು ದೃಢಪಡಿಸುತ್ತವೆ (Indian Journal of Natural Products and Resources).
ಕಾರ್ತಿಕ ಮಾಸದ ವಿಶೇಷ ತುಳಸಿ ಪೂಜೆಯಲ್ಲಿ ನಲ್ಲಿಕಾಯಿ ಮರದ ರಂಬೆ ಕೊಂಬೆಗಳನ್ನು ಕತ್ತರಿಸಿ ಪೂಜೆಗಿಡುವ ಪದ್ಧತಿಯಿಂದ ನಲ್ಲಿಯ ಮರದ ನಾಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಮೂಡಿಬಂದಿತ್ತು. ಪೂಜಾ ಆಚರಣೆಯಲ್ಲಿ ಕಾರ್ತಿಕದ ದ್ವಾದಶಿಯಂದು ತುಳಸಿಯ ಲಗ್ನ ಮಹೋತ್ಸವವನ್ನಾಗಿಯೇ ವಿಶೇಷವಾಗಿ ಆಚರಿಸುವಾಗ ತುಳಸಿಯ ರೂಪದ ಲಕ್ಷ್ಮಿಯ ವಿವಾಹ ಸಾಲಿಗ್ರಾಮ ರೂಪದಲ್ಲಿ ವಿಷ್ಣುವಿನೊಂದಿಗೆ ನಡೆಸುವ ಸ೦ದರ್ಭದ ಬಗ್ಗೆ ವಿವರಣೆ ದೊರಕುತ್ತದೆ. ವಿಶೇಷವಾಗಿ ನಲ್ಲಿಕಾಯಿಯನ್ನಿಟ್ಟು ಪೂಜಿಸುವ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ದೊರೆಯದಿದ್ದರೂ, ನಲ್ಲಿಕಾಯಿಯನ್ನು ವಿಷ್ಣುವಿನ ರೂಪದಲ್ಲಿಯೂ ನೋಡುತ್ತೇವಾದ್ದರಿಂದ ಹಾಗೂ ಸಾಲಿಗ್ರಾಮ ಎಲ್ಲರ ಮನೆಯಲ್ಲೂ ದೊರಕದ ಕಾರಣ ಈ ಪದ್ಧತಿ ಬಂದಿರಬಹುದು.
ಅಂದಹಾಗೆ, ಪೂಜಾವಿಧಾನ ಕುರಿತ ಚರ್ಚೆ "ಭೂ ವಂದನ" ದ ಉದ್ದೇಶವಲ್ಲ. ಆದರೆ, ಇಲ್ಲಿ ಒಂದಂಶವನ್ನು ಹೇಳಲೇಬೇಕು. ಮಾರುಕಟ್ಟೆಯಲ್ಲಿ ಜನರು ಕೇವಲ ನಂಬಿಕೆಗಾಗಿ ಅಥವಾ ಶಾಸ್ತ್ರಕ್ಕಾಗಿ ನಲ್ಲಿಕಾಯಿ ಟೊಂಗೆಯನ್ನು ಜನರು ಈ ಸಂದರ್ಭದಲ್ಲಿ ಕೊಳ್ಳುತ್ತಾರೆಂಬ ಭಾವನೆಯನ್ನು ಗುರುತಿಸಿ, ಮಾರುವ ಟೊಂಗೆಗಳಲ್ಲಿ ಹಲವರು ಒಂದಿಷ್ಟು ನಲ್ಲಿಕಾಯಿಗಳನ್ನು ಮೊಳೆಗಳಿಂದ ಚುಚ್ಚಿ ಮಾರಾಟ ಮಾಡುವುದು ಕಂಡುಬಂದಿದೆ. ಕೇವಲ ನಾಮಕಾವಸ್ಥೆಯ ಆಚರಣೆಗಾಗಿ ಇoತಹ ಟೊಂಗೆಗಳನ್ನು ನಾವು ಮನೆಗೆ ತಂದರೆ, ಅದು ಸರಿಯಲ್ಲ. ಕಾರಣ ತುಕ್ಕುಹಿಡಿವ ಮೊಳೆಗಳ ಕಾರಣದಿಂದ ಸಿಕ್ಕಿಸಿದ ನಲ್ಲಿಕಾಯಿಗಳನ್ನು ನಾವು ತಿನ್ನುವುದಿಲ್ಲ. ಹಸಿ ಕಸದ ರೂಪದಲ್ಲಿ ಎಸೆದು, ನಾವಾ ರೀತಿಯಲ್ಲಿ ಎಸೆದ ಕಸ, ಹಾಗೊಂದು ವೇಳೆ ಯಾವುದಾದರೂ ಪ್ರಾಣಿಗೆ ಆಹಾರವಾದರೆ! ಪರಿಣಾಮ ಗಂಭೀರವಲ್ಲವೇ.
ಕಾರ್ತಿಕದ ಈ ಸಂದರ್ಭದಲ್ಲಿ ನಲ್ಲಿಕಾಯಿಯ ಜೊತೆಗೆ ಕೆಲವಡೆ ಹುಣಸೇ ಗಿಡದ ಟೊಂಗೆಯನ್ನೂ ಪೂಜೆಗೆ ಇಡುತ್ತಾರೆ. ಸಾಂಪ್ರದಾಯಿಕವಾಗಿ ಚಾತುರ್ಮಾಸದ ಆಚರಣೆ ಸಮಾಪ್ತಿಯಾಗುವುದು ಕಾರ್ತಿಕದ ತುಳಸೀ ಪೂಜೆಯ ದಿನ. ಅಲ್ಲಿಯವರೆಗೆ ನಲ್ಲಿ, ಹುಣಸೆಗಳ ಬಳಕೆಯಿರುವುದಿಲ್ಲ. ಇನ್ನು ಭಾರತೀಯ ಕೃಷಿಯಲ್ಲಿ ನಲ್ಲಿಕಾಯಿಯ ಹೊಸ ಫಸಲು ದೊರಕಲಾರಂಭಿಸುವುದು ಸೆಪ್ಟಂಬರ್ ಮಧ್ಯೆದಿಂದ ಡಿಸೆಂಬರ್ ತಿಂಗಳುಗಳಲ್ಲಿ. ಅಂದರೆ ಚಳಿಗಾಲದ ಸಮಯದಲ್ಲಿ. ಹೊಸ ಫಸಲನ್ನು ಸೇವಿಸುವ ಮುನ್ನದ ಸಮರ್ಮಣೆಯ ಭಾವವೂ ಮತ್ತೆ ತಿನ್ನಲಾರಂಭಿಸುವ ಮೊದಲು ಅವುಗಳನ್ನು ದೇವರಿಗೆ ಸಮರ್ಪಿಸಿ ತಿನ್ನುವ ಭಾವವೂ ಇಲ್ಲಿ ಸೇರಿರಬಹುದು. ಒಟ್ಟಾರೆ ನಾವಿಲ್ಲಿ ನೋಡುವುದು ಪ್ರಕೃತಿಯ ಆರಾಧನೆ. ಕಾರಣ ತುಳಸಿ ಹಾಗೂ ನಲ್ಲಿ ಎರಡರಲ್ಲೂ ಮಾನವನ ಆರೋಗ್ಯಕ್ಕೆ ಅಗತ್ಯವಾದ ಗುಣಗಳಿವೆ. ಜನರು ಧಾತ್ರಿ ಭೋಜನವನ್ನೂ ಮಾಡುತ್ತಾರೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನೆನಪಿಡೋಣ ನಮ್ಮೆಲ್ಲ ಆಚರಣೆಗಳಿಗೆ ವೈಜ್ಞಾನಿಕ ಹಿನ್ನಲೆಯಿದೆ. ಪ್ರಕೃತಿಯ ರಕ್ಷಣೆಯತ್ತ ನಾವಿಡಬೇಕಾದ ಸಣ್ಣ ಹೆಜ್ಜೆಗಳಲ್ಲಿ 'ತುಳಸಿ ಪೂಜೆ' ಯನ್ನು ನಾವು ಕೇವಲ ಧಾರ್ಮಿಕ ಹಿನ್ನಲೆಯಲ್ಲಿ ನೋಡದೇ ಪ್ರಕೃತಿ ನಮಗೆ ನಮ್ಮ ಮನೆಯ ಹಿತ್ತಲ ಜಾಗದಲ್ಲಿ ಅಥವಾ ಕುಂಡಗಳಲ್ಲಿ ಸುಲಭವಾಗಿ ಬೆಳಸಬಹುದಾದಂತಹ ವೈದ್ಯಕೀಯ ಗುಣವುಳ್ಳ ಸಸ್ಯವನ್ನು ನೀಡಿದೆ ಎಂದು ಭಾವಿಸಿ ಪೂಜಿಸೋಣ. ಧಾರ್ಮಿಕ ಹಿನ್ನಲೆಯಲ್ಲಿ ಪೂಜಿಸುವ ಸಂಪ್ರದಾಯ ಭಾರತೀಯ ಮನೆಗಳಲ್ಲಿ ಗಟ್ಟಿಯಾಗಿ ಮುಂದುವರೆದಿರುವುದರಿಂದಲೇ ಬಹುಶ: ಆಧ್ಯಾತ್ಮ ಚಿಂತಕರು ಮನೆಯಲ್ಲಿ ಎರಡು ತುಳಸಿ ಗಿಡಗಳನ್ನು ಬೆಳಸಲು ಸಲಹೆ ನೀಡುತ್ತಾರೆ. ಒಂದನ್ನು ಪೂಜಿಸಿ ಮತ್ತೊಂದು ಗಿಡವನ್ನು ವೈದ್ಯಕೀಯ ಕಾರಣಗಳಿಗೆ ಬಳಸಿ ಎನ್ನುವುದು ಅವರು ನೀಡುವ ಸಂಕೇತ. ತುಳಸಿ ಕಷಾಯವನ್ನು ಪ್ರತಿ ನಿತ್ಯ ಸೇವಿಸೋಣ, ಆರೋಗ್ಯವಾಗಿರೋಣ. ನಮ್ಮನ್ನು ಆರೋಗ್ಯವಾಗಿಟ್ಟ ತುಳಸಿಗೆ ಒಂದು ನಮನ ಅಗತ್ಯವಲ್ಲವೇ !
ಲೇಖಕರ ಪರಿಚಯ
ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸಂಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್ನ ಸಂಸ್ಥಾಪಕರು.