ಪ್ರಶಸ್ತಿ ವಿಜೇತ ತನಿಖಾ ಪತ್ರಕರ್ತೆ ಹಾಗೂ 'ದಿ ನ್ಯೂಸ್ ಮಿನಿಟ್' ಮಾಧ್ಯಮದ ಸಹ-ಸಂಸ್ಥಾಪಕರಾದ ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ  
ರಾಜ್ಯ

ನಂಬಿಕೆ ಅನ್ನೋದು ಕೇವಲ ಒಂದು ಬಾರಿ ಗಳಿಸುವ ಸಂಗತಿಯಲ್ಲ, ಪ್ರತಿದಿನವೂ ನಂಬಿಕೆಗೆ ಅರ್ಹರಾಗಲು ಶ್ರಮಿಸಬೇಕು: ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ

ಪ್ರಮುಖ ಮುಖ್ಯಾಂಶಗಳು

  • ಜೈನ್ ವಿಶ್ವವಿದ್ಯಾಲಯದಲ್ಲಿ ಜರುಗಿದ ಮಾಧ್ಯಮ ಉಪನ್ಯಾಸ ಸರಣಿ ಕಾರ್ಯಕ್ರಮ
  • ಪ್ರಜಾಪ್ರಭುತ್ವ ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಕುರಿತು ಮಾತನಾಡಿದ ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ
  • ಬೋಫೋರ್ಸ್ ಹಗರಣದ ತನಿಖೆಯ ದಿನಗಳನ್ನು ನೆನಪಿಸಿಕೊಂಡ ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಹ್ಮಣ್ಯಂ
  • ಪತ್ರಿಕೋದ್ಯಮ ಎಂದರೆ ಸತ್ಯದ ಬೆನ್ನು ಬೀಳುವುದು ಎಂದ ಪ್ರಶಸ್ತಿ ವಿಜೇತ ಪತ್ರಕರ್ತೆ ಚಿತ್ರಾ ಸುಬ್ರಹ್ಮಣ್ಯಂ
ಬೆಂಗಳೂರು, 20 ಜುಲೈ, 2026: ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್ (ಪರಿಗಣಿತ ವಿಶ್ವವಿದ್ಯಾಲಯ) ಇತ್ತೀಚೆಗೆ 'ಮಾಧ್ಯಮ ಉಪನ್ಯಾಸ ಸರಣಿ'ಯನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಪ್ರಶಸ್ತಿ ವಿಜೇತ ತನಿಖಾ ಪತ್ರಕರ್ತೆ ಹಾಗೂ 'ದಿ ನ್ಯೂಸ್ ಮಿನಿಟ್' ಮಾಧ್ಯಮದ ಸಹ-ಸಂಸ್ಥಾಪಕರಾದ ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ಶಾಲೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹಮ್ಮಿಕೊಂಡಿದ್ದ "ಪ್ರಜಾಪ್ರಭುತ್ವ ಸಮಾಜದಲ್ಲಿ ಸಾರ್ವಜನಿಕ ಒಳಿತಿಗಾಗಿ ಪತ್ರಿಕೋದ್ಯಮ" ಎಂಬ ವಿಷಯದ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ, ಸಾರ್ವಜನಿಕ ಚರ್ಚೆಗಳನ್ನು ಬಲಪಡಿಸುವಲ್ಲಿ ಹಾಗೂ ಸಮಾಜದಲ್ಲಿ ಸತ್ಯ ಮತ್ತು ಜವಾಬ್ದಾರಿಯನ್ನು ಎತ್ತಿಹಿಡಿಯುವಲ್ಲಿ ಪತ್ರಿಕೋದ್ಯಮದ ಪಾತ್ರದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಹಳೆಯ ಬೋಫೋರ್ಸ್ ಹಗರಣದ ತನಿಖೆಯನ್ನು ನೆನಪಿಸಿಕೊಂಡ ಚಿತ್ರಾ ಸುಬ್ರಹ್ಮಣ್ಯಂ ಅವರು, ಭಾರತದ ಅತ್ಯಂತ ದೊಡ್ಡ ತನಿಖಾ ವರದಿಗಳಲ್ಲಿ ಒಂದಾದ ಇದು ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದರು. ಸ್ವೀಡಿಷ್ ರೇಡಿಯೋ ಪ್ರಸಾರ ಮಾಡಿದ ಒಂದು ವರದಿಯಲ್ಲಿ, ಬೋಫೋರ್ಸ್ ರಕ್ಷಣಾ ಒಪ್ಪಂದದಲ್ಲಿ ಕಾನೂನುಬಾಹಿರವಾಗಿ ಕಮಿಷನ್ ಹಣ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. "ಇದು 38–39 ವರ್ಷಗಳ ಹಿಂದಿನ ಮಾತು. ಆಗ ವಾಟ್ಸ್​ಆ್ಯಪ್, ಇಂಟರ್ನೆಟ್ ಅಥವಾ ಇಂದಿನ ತರಹದ ಫ್ಯಾಕ್ಸ್ ಯಂತ್ರಗಳು ಇರಲಿಲ್ಲ. ನಮ್ಮ ಬಳಿ ಟೆಲೆಕ್ಸ್ ಯಂತ್ರಗಳಿದ್ದವು. ಬೋಫೋರ್ಸ್ ಸಂಸ್ಥೆಯು ಭಾರತದ ಪ್ರಮುಖರಿಗೆ ಹಣ ನೀಡಿದೆ ಎಂದು ಸ್ವೀಡಿಷ್ ರೇಡಿಯೋ ಸುದ್ದಿಯನ್ನು ಬ್ರೇಕ್ ಮಾಡಿತು. ಆ ಸಮಯದಲ್ಲಿ ತಮಗೆ ಕೇವಲ ಆರೋಪಗಳಿಗಿಂತ ಹೆಚ್ಚಾಗಿ, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆ ಹೆಚ್ಚು ಗಮನ ಸೆಳೆಯಿತು ಎಂದು ಅವರು ನೆನಪಿಸಿಕೊಂಡರು. ಅವರು ಸಂಸತ್ತಿನ ಸದನಕ್ಕೆ ಬಂದು, 'ನಾನು ಹಣ ಮಾಡಿಲ್ಲ. ನನ್ನ ಕುಟುಂಬವೂ ಹಣ ಮಾಡಿಲ್ಲ' ಎಂದರು. ಆದರೆ ಆಗ ಯಾರೂ ಅವರ ಮೇಲೆ ನೇರ ಆರೋಪ ಮಾಡಿರಲಿಲ್ಲ. ಆ ಒಂದು ಹೇಳಿಕೆಯೇ ಈ ವಿಷಯದಲ್ಲಿ ಏನೋ ತನಿಖೆ ಮಾಡಬೇಕಾದ ಸಂಗತಿ ಇದೆ ಎಂಬುದಕ್ಕೆ ಮೊದಲ ಸುಳಿವು ನೀಡಿತು."
ತಮ್ಮ ಅಂತಃಪ್ರಜ್ಞೆಯನ್ನು ನಂಬಿ, ಅವರು ಯುರೋಪಿನಾದ್ಯಂತ ಬ್ಯಾಂಕ್ ಖಾತೆಗಳು, ಹಣಕಾಸು ದಾಖಲೆಗಳು ಮತ್ತು ರಹಸ್ಯ ಪತ್ರಗಳನ್ನು ಪರಿಶೀಲಿಸಲು ಮುಂದಾದರು. ಆಗ ನನಗೆ ಹಣಕಾಸಿನ ಅನೇಕ ತಾಂತ್ರಿಕ ಪದಗಳ ಅರ್ಥ ತಿಳಿಯುತ್ತಿರಲಿಲ್ಲ. ನಾನು ಲೈಬ್ರರಿಗಳಿಗೆ ಹೋಗಿ, ಪುಸ್ತಕಗಳನ್ನು ತೆಗೆದು ಓದಿದೆ. ನಾವು ನಿರಂತರವಾಗಿ ಓದುತ್ತಿರಬೇಕು, ಏಕೆಂದರೆ ಆ ಜ್ಞಾನ ಯಾವಾಗ ನಮಗೆ ಸಹಾಯಕ್ಕೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ತನಿಖೆಗೆ ಅಪಾರ ತಾಳ್ಮೆ ಮತ್ತು ಪರಿಶ್ರಮ ಬೇಕಾಯಿತು ಎಂದು ಅವರು ವಿವರಿಸಿದರು. ನನಗೆ ಸುಮಾರು 400 ದಾಖಲೆಗಳನ್ನು ನೀಡಲಾಗಿತ್ತು. ಬಿಡಿಯಾಗಿ ನೋಡಿದಾಗ ಅವುಗಳಿಂದ ಯಾವುದೇ ಅರ್ಥ ಸಿಗುತ್ತಿರಲಿಲ್ಲ. ಆದರೆ, ಆ ಎಲ್ಲಾ ದಾಖಲೆಗಳನ್ನು ಒಟ್ಟಿಗೆ ಜೋಡಿಸಿ ನೋಡಿದಾಗ ಒಂದು ಸ್ಪಷ್ಟ ಚಿತ್ರಣ ಸಿಗಲಾರಂಭಿಸಿತು. ತನಿಖಾ ಪತ್ರಿಕೋದ್ಯಮ ಕೆಲಸ ಮಾಡುವುದು ಹೀಗೆಯೇ—ನೀವು ಮಾಹಿತಿಯನ್ನು ಕಲೆಹಾಕುತ್ತಾ ಹೋದಂತೆ ಸತ್ಯ ತಾನಾಗಿಯೇ ಹೊರಬರುತ್ತದೆ. ತಮ್ಮ ತನಿಖೆಯ ದಿನಗಳಲ್ಲಿ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿಯೊಬ್ಬರನ್ನು ಭೇಟಿಯಾಗಿದ್ದು ಅವರ ಜೀವನದ ಮರೆಯಲಾಗದ ಕ್ಷಣವಾಗಿತ್ತು. ಅವರೇ ಮುಂದೆ ಚಿತ್ರಾ ಅವರಿಗೆ ಅತ್ಯಮೂಲ್ಯ ಮಾಹಿತಿದಾರರಾದರು. ನಾನು ಅದಕ್ಕೂ ಮುನ್ನ ಎಂದೂ ಶಸ್ತ್ರಾಸ್ತ್ರ ವ್ಯಾಪಾರಿಯನ್ನು ಭೇಟಿ ಮಾಡಿರಲಿಲ್ಲ. ನನಗೆ ತುಂಬಾ ಹೆದರಿಕೆಯಾಗಿತ್ತು. ನಾನು ಅವರ ಆಫೀಸ್ ಒಳಗೆ ಹೋದಾಗ ಬರೀ 'ಖರೀದಿಸು, ಮಾರು, ಖರೀದಿಸು, ಮಾರು' ಎಂಬ ಶಬ್ದಗಳು ಕೇಳಿಸುತ್ತಿದ್ದವು. ಅವರು ಯಾವುದೋ ಸಾಮಾನ್ಯ ಬಿಸಿನೆಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಾನು ಭಾವಿಸಿದೆ, ಆದರೆ ಆಮೇಲೆ ತಿಳಿಯಿತು ಅವರು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರದ ಬಗ್ಗೆ ಮಾತನಾಡುತ್ತಿದ್ದರು ಎಂದು. ಆ ವ್ಯಾಪಾರಿಯಿಂದ ಕಲಿತ ಒಂದು ಅನಿರೀಕ್ಷಿತ ಪಾಠವನ್ನು ಅವರು ಹಂಚಿಕೊಂಡರು: "ಅವರು ವಿವಿಧ ಫೋಟೋಗಳನ್ನು ತೋರಿಸಿ, 'ನಿಮ್ಮ ಚರ್ಮದ ಬಣ್ಣ ಯಾವುದೇ ಇರಲಿ—ಎಲ್ಲರ ರಕ್ತದ ಬಣ್ಣ ಕೆಂಪೇ' ಎಂದರು. ಶಸ್ತ್ರಾಸ್ತ್ರ ವ್ಯಾಪಾರಿಯೊಬ್ಬರಿಂದ ಇಂತಹ ಮಾತು ಕೇಳಿದ್ದು ನನಗೆ ತುಂಬಾ ಆಶ್ಚರ್ಯ ತಂದಿತು."
ದಾಖಲೆಗಳನ್ನು ಕಲೆಹಾಕುವಷ್ಟೇ ಮುಖ್ಯವಾದದ್ದು ಮಾಹಿತಿದಾರರೊಂದಿಗೆ ನಂಬಿಕೆಯನ್ನು ಗಳಿಸುವುದು ಎಂದು ಅವರು ಹೇಳಿದರು. "ತನಿಖಾ ಪತ್ರಿಕೋದ್ಯಮ ಎಂದರೆ ಕೇವಲ ದಾಖಲೆಗಳಲ್ಲ. ಇದು ಜನರೊಂದಿಗಿನ ಸಂಬಂಧ, ತಾಳ್ಮೆ ಮತ್ತು ನಿಮಗೆ ಮಾಹಿತಿ ನೀಡುವ ವ್ಯಕ್ತಿಯ ನಂಬಿಕೆಯನ್ನು ಗಳಿಸುವುದಾಗಿದೆ." ಇವರ ವರದಿಯ ಪರಿಣಾಮ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಬದಲಿಗೆ ವಿದೇಶಗಳ ಮೇಲೂ ಆಯಿತು. "ನನ್ನ ವರದಿಯು ಸ್ವಿಟ್ಜರ್ಲೆಂಡ್‌ನ ಅಪರಾಧ ತನಿಖೆ ಮತ್ತು ದೇಶಗಳ ನಡುವಿನ ದಾಖಲೆಗಳ ವಿನಿಮಯಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿದ್ದ ಲೋಪದೋಷಗಳನ್ನು ಬಹಿರಂಗಪಡಿಸಿತು. ನಂತರ ಆ ಲೋಪದೋಷಗಳನ್ನು ಸರಿಪಡಿಸಲಾಯಿತು ಮತ್ತು ಅಲ್ಲಿನ ಕಾನೂನುಗಳನ್ನು ಬದಲಾಯಿಸಲಾಯಿತು." ಪತ್ರಿಕೋದ್ಯಮದ ನೈತಿಕತೆಯ ಬಗ್ಗೆ ಮಾತನಾಡುತ್ತಾ, ಬೋಫೋರ್ಸ್ ಹಗರಣದಲ್ಲಿ ನಟ ಅಮಿತಾಭ್ ಬಚ್ಚನ್ ಅವರ ಹೆಸರು ಹೇಗೆ ಕೇಳಿಬಂತು ಎಂಬುದನ್ನು ಚಿತ್ರಾ ನೆನಪಿಸಿಕೊಂಡರು. "ಅಮಿತಾಭ್ ಬಚ್ಚನ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಸೇರಿಸಲಾಗಿತ್ತು. ನಾನು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದಾಗ ಅವರ ಹೆಸರಿಗೂ ಈ ಹಣದ ವ್ಯವಹಾರಕ್ಕೂ ಯಾವುದೇ ಸಂಬಂಧವಿರಲಿಲ್ಲ. ನನ್ನ ಬಳಿ ಅವರ ವಿರುದ್ಧ ಯಾವುದೇ ಪುರಾವೆ ಇಲ್ಲದ ಕಾರಣ ನಾನು ಅವರ ಪರವಾಗಿ ನಿಂತೆ." ಪತ್ರಿಕೋದ್ಯಮವು ಯಾವಾಗಲೂ ವದಂತಿಗಳ ಬದಲಾಗಿ ಪುರಾವೆಗಳ ಆಧಾರದ ಮೇಲೆ ನಡೆಯಬೇಕು ಎಂದು ಅವರು ಒತ್ತಿ ಹೇಳಿದರು. "ನಿಮ್ಮದೇ ಆದ ಪುರಾವೆಗಳನ್ನು ನೀವು ಹೊಂದಿರಬೇಕು—ಕನಿಷ್ಠ ಇಬ್ಬರು ಸ್ವತಂತ್ರ ಮಾಹಿತಿದಾರರು ಇರಬೇಕು. ಏಕೆಂದರೆ ನೀವು ಬರೆಯುವ ಒಂದು ಸುಳ್ಳು ವರದಿ ಒಬ್ಬ ವ್ಯಕ್ತಿಯ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಬಹುದು."
ಪತ್ರಿಕೋದ್ಯಮಕ್ಕೆ ತಾಳ್ಮೆ, ಪ್ರಾಮಾಣಿಕತೆ ಮತ್ತು ವಿನಮ್ರತೆ ಮುಖ್ಯ ಎಂದು ಚಿತ್ರಾ ಅವರು ವಿದ್ಯಾರ್ಥಿಗಳಿಗೆ ನೆನಪಿಸಿದರು. ನಿಮ್ಮ ಅಹಂಕಾರವನ್ನು ಹೊರಗಿಡಿ. ಇಲ್ಲಿ ನೀವು ಮುಖ್ಯವಲ್ಲ, ನಿಮ್ಮ ಸುದ್ದಿ ಮುಖ್ಯ. ಯಾವ ದಿನ ಸುದ್ಧಿಗಿಂತ ನೀವೇ ಮುಖ್ಯ ಎಂದು ಭಾವಿಸುತ್ತೀರೋ, ಅಂದೇ ನೀವು ಪತ್ರಕರ್ತರಾಗಿ ಸೋತಂತೆ." ಪತ್ರಿಕೋದ್ಯಮ ಸಮಾಜದ ಸೇವೆಗಾಗಿ ಇರುವುದು ಎಂದು ಹೇಳುತ್ತಾ ಅವರು ತಮ್ಮ ಭಾಷಣವನ್ನು ಮುಗಿಸಿದರು. "ಪತ್ರಿಕೋದ್ಯಮ ಎಂದರೆ ಜನರ ಬೆನ್ನು ಬೀಳುವುದಲ್ಲ. ಪತ್ರಿಕೋದ್ಯಮ ಎಂದರೆ ಸತ್ಯದ ಬೆನ್ನು ಬೀಳುವುದು—ಅದು ಎಷ್ಟೇ ಕಷ್ಟ ಇರಲಿ, ಎಷ್ಟೇ ಸಮಯ ತೆಗೆದುಕೊಳ್ಳಲಿ.
ಜೈನ್ (ಪರಿಗಣಿತ ವಿಶ್ವವಿದ್ಯಾಲಯ)ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾರ್ಗವಿ ಡಿ. ಹೆಮ್ಮಿಗೆ ಅವರು, ಹೊಸದಾಗಿ ಆರಂಭಿಸಲಾದ 'ಮಾಧ್ಯಮ ಉಪನ್ಯಾಸ ಸರಣಿ'ಯ ಮೂಲಕ ಪ್ರಮುಖ ಮಾಧ್ಯಮ ತಜ್ಞರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮಹತ್ವವನ್ನು ತಿಳಿಸಿದರು. “ನಮ್ಮ ವಿದ್ಯಾರ್ಥಿಗಳಲ್ಲಿ ನಿಜವಾದ ಪತ್ರಿಕೋದ್ಯಮದ ಮೌಲ್ಯಗಳಾದ ಸತ್ಯ, ನೈತಿಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಧೈರ್ಯವನ್ನು ತುಂಬುವುದು ನಮ್ಮ ಉದ್ದೇಶವಾಗಿದೆ. ಇಂದಿನ ಮಾಧ್ಯಮ ರಂಗವು ಪಬ್ಲಿಕ್ ರಿಲೇಶನ್ಸ್ (PR), ಜಾಹೀರಾತು ಮತ್ತು ಬ್ರ್ಯಾಂಡಿಂಗ್‌ಗೆ ಹೆಚ್ಚು ಒತ್ತು ನೀಡುತ್ತಿರುವಾಗ, ಈ ಉಪನ್ಯಾಸ ಸರಣಿಯು ಪತ್ರಿಕೋದ್ಯಮದ ನಿಜವಾದ ಉದ್ದೇಶವನ್ನು ನೆನಪಿಸುತ್ತದೆ: ಪ್ರಶ್ನಿಸುವುದು, ತನಿಖೆ ಮಾಡುವುದು, ಮಾಹಿತಿ ನೀಡುವುದು ಮತ್ತು ಸಮಾಜದ ಸೇವೆ ಮಾಡುವುದು.” ಮುಂದುವರಿದು ಅವರು, “ಇಂತಹ ಸಾಧಕ ಪತ್ರಕರ್ತರೊಂದಿಗಿನ ಸಂವಾದವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಧ್ಯಮ ಜಗತ್ತಿನ ಅನುಭವವನ್ನು ನೀಡುತ್ತದೆ ಮತ್ತು ಜವಾಬ್ದಾರಿಯುತ, ನೈತಿಕ ಹಾಗೂ ಸಾಮಾಜಿಕ ಪ್ರಜ್ಞೆಯುಳ್ಳ ಮಾಧ್ಯಮ ವೃತ್ತಿಪರರನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯದ ಬದ್ಧತೆಯನ್ನು ಬಲಪಡಿಸುತ್ತದೆ,” ಎಂದರು.
ಈ ಉಪನ್ಯಾಸದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ (BAJ) ಮತ್ತು ಸ್ನಾತಕೋತ್ತರ ಪದವಿ (MAJ) ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ತನಿಖಾ ಪತ್ರಿಕೋದ್ಯಮ, ಮಾಧ್ಯಮ ಸ್ವಾತಂತ್ರ್ಯ, ಪತ್ರಿಕೋದ್ಯಮದ ನೈತಿಕತೆ, ಡಿಜಿಟಲ್ ಪತ್ರಿಕೋದ್ಯಮ ಮತ್ತು ಇಂದಿನ ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಪತ್ರಕರ್ತರ ಪಾತ್ರದ ಕುರಿತು ಕೇಳಿದ ಪ್ರಶ್ನೆಗಳಿಗೆ ಸ್ಪೀಕರ್ ಅವರು ಉತ್ತರಿಸಿದರು.
ಈ ಮಾಧ್ಯಮ ಉಪನ್ಯಾಸ ಸರಣಿಯು ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನ ಮಾತ್ರವಲ್ಲದೆ, ಉದ್ಯಮದ ತಜ್ಞರ ಅನುಭವದ ಆಧಾರದ ಮೇಲೆ ಕಲಿಯಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಜಾಗತಿಕ ಮಾಧ್ಯಮ ರಂಗದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ, ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಸಾರ್ವಜನಿಕ ಸೇವೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಇದು ಭಾವಿ ಪತ್ರಕರ್ತರಿಗೆ ಪ್ರೇರಣೆ ನೀಡುತ್ತದೆ.

ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಕುರಿತು

ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಭಾರತದಲ್ಲಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದು ವಿದ್ಯಾರ್ಥಿಗಳ ಪ್ರತಿಭೆಯನ್ನು ಅಭಿವೃದ್ಧಿಪಡಿಸುವಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಈ ವಿಶ್ವವಿದ್ಯಾಲಯಕ್ಕೆ NAAC ವತಿಯಿಂದ A++ ಮಾನ್ಯತೆ (CGPA 3.71) ಲಭಿಸಿದ್ದು, UGC ಯಿಂದ Category-1 ಸ್ವಾಯತ್ತತೆ ನೀಡಲಾಗಿದೆ. ಇದು ಏಷ್ಯಾ ಮತ್ತು ಪ್ಯಾಸಿಫಿಕ್ ವಿಶ್ವವಿದ್ಯಾಲಯಗಳ ಸಂಘದ ಸದಸ್ಯತ್ವ ಹೊಂದಿದೆ. KSURF ICARE ರೇಟಿಂಗ್‌ನಲ್ಲಿ ಯುವ ವಿಶ್ವವಿದ್ಯಾಲಯ ವಿಭಾಗದಲ್ಲಿ ಫೈವ್ ಸ್ಟಾರ್ ಮಾನ್ಯತೆ ಪಡೆದಿದೆ. 2025ರ NIRF ರ‍್ಯಾಂಕಿಂಗ್‌ನಲ್ಲಿ 62ನೇ ಸ್ಥಾನ ಮತ್ತು ಇಂಡಿಯಾ ಟುಡೇ ವರದಿ ಪ್ರಕಾರ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ 8ನೇ ಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ 2933 ಪೇಟೆಂಟ್ ಅರ್ಜಿಗಳು ಸಲ್ಲಿಸಲಾಗಿದ್ದು, 2335 ಪ್ರಕಟಗೊಂಡಿವೆ.2023ರಲ್ಲಿ ಯುವಜನ ಮತ್ತು ಕ್ರೀಡಾ ಸಚಿವಾಲಯದಿಂದ ‘ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ’ ಲಭಿಸಿದೆ. ಕ್ರೀಡಾ ಕ್ಷೇತ್ರದಲ್ಲಿಯೂ ವಿಶ್ವವಿದ್ಯಾಲಯ ಸಾಧನೆ ಮಾಡಿದ್ದು, ಖೇಲೋ ಇಂಡಿಯಾ 2021ರಲ್ಲಿ ಚಾಂಪಿಯನ್ ಆಗಿ, 2022ರಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ISO 21001:2018 ಗುಣಮಟ್ಟದ ಪ್ರಮಾಣಪತ್ರವನ್ನು ಹೊಂದಿದೆ.ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ವಿಭಾಗವು ಸಾಮಾಜಿಕ ವಿಜ್ಞಾನ ಶಾಲೆಯ ಪ್ರಮುಖ ಭಾಗವಾಗಿದೆ. ಇದು ವಿದ್ಯಾರ್ಥಿಗಳಿಗೆ ಜಾಗತಿಕ ಮಾಧ್ಯಮ ಕ್ಷೇತ್ರದಲ್ಲಿ ಪ್ರವೇಶಿಸಲು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. 2025ರಲ್ಲಿ ಇಂಡಿಯಾ ಟುಡೇ ಶ್ರೇಯಾಂಕದಲ್ಲಿ 7ನೇ ಸ್ಥಾನ ಪಡೆದಿದೆ. ಕಾರ್ಯಾಗಾರಗಳು, ಅತಿಥಿ ಉಪನ್ಯಾಸಗಳು ಮತ್ತು ಮಾಧ್ಯಮ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಬೆಳವಣಿಗೆಗೆ ವೇದಿಕೆ ಒದಗಿಸುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಡಾ. ಭಾರ್ಗವಿ ಡಿ. ಹೆಮ್ಮಿಗೆ, ಪ್ರೊಫೆಸರ್, ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಶನ್ ವಿಭಾಗ,
+91 9739974938 ಅಥವಾ ಇಮೇಲ್: dr.bhargavi_d@cms.ac.in
ಡಾ. ಜೀಸಸ್ ಮಿಲ್ಟನ್ ಆರ್.ಎಸ್., ಅಸೋಸಿಯೇಟ್ ಪ್ರೊಫೆಸರ್, ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಶನ್ ವಿಭಾಗ,
+91 7892155436 ಅಥವಾ ಇಮೇಲ್: dr.jesus_milton@cms.ac.in
ಡಾ. ಅಭಿಲಾಷಾ ಆರ್, ಅಸಿಸ್ಟೆಂಟ್ ಪ್ರೊಫೆಸರ್, ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಶನ್ ವಿಭಾಗ,
+91 9916140564 ಅಥವಾ ಇಮೇಲ್: dr.abhilasha_r@cms.ac.in