ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಬೆಂಗಳೂರು: ಒಳಮೀಸಲಾತಿ ರೋಸ್ಟರ್ ವಿರೋಧಿಸಿ, ಮಂಗಳವಾರ (ಮಾ.24) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿ, ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ ಮತ್ತು ಚರ್ಮಕಾರ ಸೇರಿ ಸೂಕ್ಷ್ಮ ಪರಿಶಿಷ್ಟ ಜಾತಿಗಳ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ದಿನದ ಮಟ್ಟಿಗೆ ಮುಷ್ಕರ ಕೈಗೊಂಡಿದ್ದೇವೆ. ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 1 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ಮೂಲಕ ಸರ್ಕಾರಕ್ಕೆ ನಮ್ಮ ಶಕ್ತಿಯನ್ನು ತೋರಿಸಲಿದ್ದೇವೆ. ಒಳಮೀಸಲಾತಿ ನ್ಯೂನತೆ ಕುರಿತು ವಿಶೇಷ ಸಚಿವ ಸಂಪುಟದಲ್ಲಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಮೇರೆಗೆ ಹಂತ ಹಂತವಾಗಿ ಹೋರಾಟ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.
ರಾಜ್ಯ ಸರ್ಕಾರ,ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕವಾಗಿ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದೆ. ಇದು ಎಸ್ಸಿ ಒಳಮೀಸಲಾತಿ ವರ್ಗೀಕರಣದಲ್ಲಿ ಸಿ-ಪ್ರವರ್ಗದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ, ಆದಿಯಾ ಮತ್ತು ಅಗೇರ ಸೇರಿ 63 ಜಾತಿಗಳಿಗೆ ಮಾರಕವಾಗಿದೆ. ರೋಸ್ಟರ್ ಪದ್ಧತಿ ಜೀವಂತ ಶವವಾಗಿದೆ. ನ್ಯಾ.ನಾಗಮೋಹನ್‌ದಾಸ್ ಆಯೋಗ ತಪ್ಪು ದತ್ತಾಂಶ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯು ಹಲವು ದೋಷದಿಂದ ಕೂಡಿದೆ. ಕೂಡಲೇ ಇದನ್ನು ರದ್ದುಪಡಿಸಿ ಮರು ಅಧ್ಯಯನ ನಡೆಸಿ ಸರ್ಕಾರ ಸಮೀಕ್ಷಾ ವರದಿ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಒಕ್ಕೂಟದ ಪದಾಧಿಕಾರಿಳಾದ ಅನಂತ ನಾಯಕ್, ರಾಘವೇಂದ್ರ ನಾಯಕ್ ಸೇರಿ ಮತ್ತಿತರರಿದ್ದರು.
ಮೀಸಲು ಸೌಲಭ್ಯಕ್ಕೆ 2 ತಲೆಮಾರು ಬೇಕು:
ಎಸ್ಸಿ ರೋಸ್ಟರ್ ಪದ್ಧತಿ ಪ್ರಕಾರ ಈ 63 ಸಮುದಾಯದವರಿಗೆ ಮೀಸಲು ಸೌಲಭ್ಯ ದೊರೆಯಬೇಕಾದರೆ ಎರಡು ತಲೆಮಾರು ಬೇಕಾಗುತ್ತದೆ. ಇದು ಶಾಶ್ವತವಾಗಿ ಜಾರಿಯಾದರೆ ಈ ಸಮುದಾಯಗಳೆಲ್ಲ ಅಧೋಗತಿಯತ್ತ ಸಾಗಲಿವೆ. ಅಪೂರ್ಣವಾಗಿರುವ ನ್ಯಾ.ನಾಗಮೋಹನದಾಸ್ ವರದಿಯಲ್ಲೇ 29 ಕೋಷ್ಟಕಗಳ ಪೈಕಿ 19 ಕೋಷ್ಟಕಗಳಲ್ಲಿ ಈ ಸಮುದಾಯಗಳು ಸಾಮಾಜಿಕವಾಗಿ ಹಿಂದುಳಿದಿವೆ. ಸುಪ್ರೀಕೋರ್ಟ್ ತೀರ್ಪಿನ ಪ್ರಕಾರ ಹಿಂದುಳಿವಿಕೆ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣವಾದರೆ ಇವುಗಳೆಲ್ಲವೂ ಎ-ಪ್ರವರ್ಗದಲ್ಲಿ ಬರಬೇಕು. ಆದರೆ, ರಾಜಕೀಯ ಶಕ್ತಿ, ಧ್ವನಿ ಇಲ್ಲದ ಕಾರಣಕ್ಕೆ ಸಿ-ಪ್ರವರ್ಗಕ್ಕೆ ಸೇರಿಸಲಾಗಿದೆ. ಆದ್ದರಿಂದ, ಒಳ ಮೀಸಲಾತಿ ವರ್ಗೀಕರಣವನ್ನೇ ಮರುಪರಿಶೀಲನೆ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು.
* ಕೇಂದ್ರದಿಂದ ದೇಶವ್ಯಾಪಿ ನಡೆಯುತ್ತಿರುವ ಜನಗಣತಿಯ ಸಮಗ್ರ ದತ್ತಾಂಶ ಬರುವವರೆಗೆ ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬಾರದು
* ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ನಮ್ಮ ಸಮುದಾಯಗಳ ಮುಖಂಡರ ಜೊತೆಗೆ ಸಮಾಲೋಚನಾ ಸಭೆ ನಡೆಸಬೇಕು
*ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಪೂರ್ಣಪ್ರಮಾಣದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಬಳಕೆಯಾಗಬೇಕು
* ಪರಿಶಿಷ್ಟ ಜಾತಿ (ಶೇ.17) ಮತ್ತು ಪರಿಶಿಷ್ಟ ಪಂಗಡಗಳ (ಶೇ.7) ಮೀಸಲಾತಿ ಹೆಚ್ಚಳ ಮಾಡಿರುವ ಆದೇಶವನ್ನು ಸಂವಿಧಾನದ 9ನೇ ಷೆಡ್ಯೂಲ್ನಲ್ಲಿ ಸೇರಿಸಲು ರಾಜ್ಯ ಸರ್ಕಾರ, ಕೇಂದ್ರಕ್ಕೆ ಮನವರಿಕೆ ಮಾಡಲು ಪ್ರಧಾನಮಂತ್ರಿ ಬಳಿ ನಿಯೋಗ ಕಂಡೊಯ್ಯಬೇಕು
* ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯಲ್ಲಿ ಅಂಕಿ-ಅಂಶಗಳು ಹಲವು ತಪ್ಪುಗಳಿಂದ ಕೂಡಿದೆ
* ಉದ್ಯೋಗ ನೇಮಕಾತಿ ಕುರಿತು ಇತ್ತೀಚೆಗೆ ಹೊರಡಿಸಿರುವ ಎಲ್ಲ ರೊಸ್ಟರ್ ಹಂಚಿಕೆ ಆದೇಶ, ಸುತ್ತೋಲೆ ಹಿಂಪಡೆಯಬೇಕು
* ಪರಿಶಿಷ್ಟ ಜಾತಿ ಪ್ರವರ್ಗ ಎ,ಬಿ ಮತ್ತು ಸಿ ಎಂದು ನಮೂದಿಸಿ ನೀಡಲಾಗಿರುವ ಜಾತಿ ಪ್ರಮಾಣಪತ್ರ ಹಿಂಪಡೆದು ಹಳೆಯ ಜಾತಿ ಪ್ರಮಾಣ ಪತ್ರಗಳನ್ನೇ ಪರಿಗಣಿಸಬೇಕು.