ಶ್ರೀ ವಾಸವಿ ಸಮೂಹ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್.ಬಾಲಜಿ, ಎ.ಡಿ.ಕುಮಾರ ಕೃಷ್ಣ, ಪಿ.ಜಿ.ಶ್ರೀಧರ್ ಇತರರು ಇದ್ದರು.
ಕೊಳ್ಳೇಗಾಲ: ಭಾರತ ವೈವಿಧ್ಯತೆಯಿಂದ ಕೂಡಿರುವ ರಾಷ್ಟ್ರವಾಗಿದ್ದು, ನಾವಿಲ್ಲಿ ಗಟ್ಟಿಯಾಗಿ ನಿಂತಿದ್ದೇವೆ. ಪ್ರಸ್ತುತ ನಮ್ಮ ದೇಶ ಎತ್ತರಕ್ಕೇರುತ್ತಿದ್ದು ನಾವೆಲ್ಲರೂ ಸಂವಿಧಾನಕ್ಕೆ, ಕಾನೂನಿಗೆ, ಹಿರಿಯರಿಗೆ ಗೌರವ ಕೊಡಬೇಕು ಎಂದು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ನಿವೃತ್ತ ಪ್ರಾಂಶುಪಾಲ ಎಸ್.ಬಾಲಾಜಿ ಹೇಳಿದರು.
ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 2ನೇ ದಿನದ ಶ್ರೀ ವಾಸವಿ ಸಮೂಹ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮ-2025 ಸಂಸ್ಕೃತಿ ಭಾವನೆ ಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಈ ನೆಲದ ಸಂಸ್ಕೃತಿಯನ್ನು ತಿಳಿಯಬೇಕು. ಉತ್ತಮ ನಡವಳಿಕೆ ಹೊಂದಬೇಕು. ನಿಜವಾದ ಜ್ಞಾನ ವಿನಯದಿಂದ ಸಿಗಲಿದೆ ಎಂದು ಕಿವಿ ಮಾತು ಹೇಳಿದರು.
ಕೊಳ್ಳೇಗಾಲ ಸಾಧು ಸಂತರು, ಧಾರ್ಮಿಕ ಶ್ರೇಷ್ಠರು, ಸುಧಾರಕರು ನೆಲೆಸಿರುವ ಪವಿತ್ರ ಕ್ಷೇತ್ರವಾಗಿದೆ. ಕೌಹಳ-ಗಾಲವ ಋಷಿ ಮುನಿಗಳಿದ್ದ ಈ ಸ್ಥಳ ಕೊಳ್ಳೇಗಾಲವಾಗಿದೆ ಎಂಬುದು ಇತಿಹಾಸ. ಮಲೆ ಮಹದೇಶ್ವರರು ಮಂಡಿಯೂರಿದ ಮರಡಿಗುಡ್ಡ, ಶಿವನಸಮುದ್ರ, ಹೊಗೇನಿಕಲ್ ಫಾಲ್ಸ್, ಬಿಳಿಗಿರಿರಂಗನಬೆಟ್ಟ, ಸಿಂಗನಲ್ಲೂರಿನಲ್ಲಿರುವ ವರನಟ ಡಾ.ರಾಜ್ ಕುಮಾರ್ ಅವರ ಮನೆ, ಹೀಗೆ ಹಲವು ಪ್ರಸಿದ್ಧ ಸ್ಥಳಗಳಿವೆ. ಆದ್ದರಿಂದಲೇ ದ.ರಾ.ಬೇಂದ್ರೆ ಅವರು ಕೊಳ್ಳೇಗಾಲ ಜಾಗೃತಿ ಭೂಮಿ ಎಂದು ಹೇಳಿದ್ದಾರೆ ಎಂದರು.
ಇನ್ನು ಹೆಸರಾಂತ ಶ್ರೀ ವಾಸವಿ ವಿದ್ಯಾ ಸಂಸ್ಥೆ ಕೊಳ್ಳೇಗಾಲದಲ್ಲಿರುವುದು ಮತ್ತೊಂದು ವಿಶೇಷವಾಗಿದ್ದು, ಈ ಸಂಸ್ಥೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿಸಿ ನಾಯಕತ್ವ ತರಬೇತಿಯನ್ನು ನೀಡುತ್ತಿದೆ. ಒಬ್ಬ ವಿದ್ಯಾರ್ಥಿ ವಾರ್ಷಿಕೋತ್ಸವ ಸಮಾರಂಭವನ್ನು ಧೈರ್ಯದಿಂದ ನಡೆಸಿಕೊಡುತ್ತಿರುವುದೇ ಸಾಕ್ಷಿಯಾಗಿದೆ. ಇಲ್ಲಿ ಓದಿನ ಜತೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕೊಳ್ಳೇಗಾಲಕ್ಕೆ ಇಂಟರ್‌ನ್ಯಾಷನಲ್ ಶಾಲೆ: ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ಕೊಳ್ಳೇಗಾಲ ಆರ‌್ಯವೈಶ್ಯ ಸಂಘ ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ ಮಾತನಾಡಿ, ಶ್ರೀ ವಾಸವಿ ವಿದ್ಯಾ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಣ ಭಾವದಿಂದ ಕೆಲಸ ಮಾಡುತ್ತಿದ್ದೇವೆ. ಈ ಸಂಸ್ಥೆ ಹಂತ ಹಂತವಾಗಿ ಬೆಳೆದು ನಿಂತಿದೆ. ಇದಕ್ಕೂ ಮುನ್ನ ಕೊಳ್ಳೇಗಾಲದಲ್ಲಿ ಸಿಬಿಎಸ್‌ಸಿ ಶಾಲೆಯಿಲ್ಲದೇ ಪಾಲಕರು ಮಕ್ಕಳನ್ನು ಬೇರೆಡೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿದ್ದರು. ಆದರಿಂದ ಬಹಳ ಶ್ರಮ ವಹಿಸಿ ಸಿಬಿಎಸ್‌ಸಿ ಶಿಕ್ಷಣ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಿಬಿಎಸ್‌ಸಿ ಹೊಸ ಶಾಲೆಯನ್ನು ನಿರ್ಮಿಸುತ್ತಿದ್ದೇವೆ. ನಾವು ಕಟ್ಟುತ್ತಿರುವ ಶಾಲೆ ರಾಜ್ಯಕ್ಕೆ ಕಿರೀಟ ಪ್ರಾಯವಾಗಲಿದೆ. ವಾಸವಿ ಇಂಟರ್‌ನ್ಯಾಷನಲ್ ಶಾಲೆಯನ್ನು ಕೊಳ್ಳೇಗಾಲಕ್ಕೆ ಸಮರ್ಪಣೆ ಮಾಡುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ಶ್ರೀ ವಾಸವಿ ಸಮೂಹ ವಿದ್ಯಾಸಂಸ್ಥೆಗಳ 2025-2026 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಬಳಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೂ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಜಿ.ಶ್ರೀಧರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು ಇದ್ದರು.