ಕುರಿಂಜಲ್ ಚಾರಣ 
ರಾಜ್ಯ

ಅಬ್ಬಬ್ಬಾ! ಈ ಶಿಖರದ ತುತ್ತ ತುದಿಗೆ ನೀವೊಮ್ಮೆ ಹೋಗಲೇಬೇಕು; ಸ್ವರ್ಗ ಲೋಕಕ್ಕೆ ಬಾಗಿಲು ಕುರಿಂಜಲ್​ ಚಾರಣ

ಪ್ರಮುಖ ಮುಖ್ಯಾಂಶಗಳು

  • ಮಲೆನಾಡಿನ ತವರೂರು ಚಿಕ್ಕಮಗಳೂರಿನ ಸುಂದರ ತಾಣ
  • ಶಿಖರದ ತುತ್ತ ತುದಿ ತಲುಪಿದರೆ ಸ್ವರ್ಗಕ್ಕೆ ಬಾಗಿಲು
  • ಟ್ರೆಕ್ಕಿಂಗ್​ ಹೋಗುವವರಿಗಂತು ಹೇಳಿ ಮಾಡಿಸಿದ ಚಾರಣ
ಬೆಂಗಳೂರು: ಕರುನಾಡಿನ ಶಿಖರಗಳ ಅಧಿಪತಿ ನಮ್ಮ ಮಲೆನಾಡಿನ ತವರೂರು ಚಿಕ್ಕಮಗಳೂರು. ಘಾಟಿ ರಸ್ತೆ, ತಂಪಿನ ಗಾಳಿ, ಬಿರುಸಿನ ಮಳೆ, ಕಲ್ಲುಗುಡ್ಡಗಳು, ಹಸಿರ ಹೊದ್ದು ಮಲಗಿರುವ ಪರ್ವತ ಶ್ರೇಣಿಗಳು ನೋಡುಗರ ಕಣ್ಮನ ಸೆಳೆಯುತ್ತದೆ. ಕಾಫಿನಾಡಿನ ಹೆಬ್ಬಾಗಿಲ ತಲುಪಿ, ಒಂದಷ್ಟು ದೂರ ಪ್ರಯಾಣಿಸುತ್ತಿದ್ದಂತೆ ಹಸಿರಿನ ಹಿತನುಡಿಗಳ ಆಲಿಂಗನ ಶುರು. ಚಾರಣಗಳಿಗೆ ಹೆಸರುವಾಸಿಯಾದ ಈ ನಾಡಿಗೆ ವಾರಾಂತ್ಯಗಳಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಅದರಲ್ಲೂ, ಮಳೆ-ಚಳಿಗಾಲದಲ್ಲಿ ಅಪಾರ. ಜಿಲ್ಲೆಯ ಹಲವು ಚಾರಣಗಳಲ್ಲಿ ಅತಿ ಕಡಿಮೆ ಭೇಟಿ ಕೊಡುವ ಟ್ರೆಕ್ಕಿಂಗ್​ ಸ್ಪಾಟ್​ ಎಂದರೆ ಅದೇ ಈ ಕುರಿಂಜಲ್.

ಹೆಚ್ಚು ಪರಿಚಿತವಲ್ಲದ ಶಿಖರ

ಕುರಿಂಜಲ್ (ಕರಿಕ್ಕಲ್​ ಬೆಟ್ಟ)​ ಚಾರಣ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಡಾಲು ಸಮೀಪದ ಪರ್ವತ. ಕಾಫಿನಾಡಿನ ಇತರೆ ಚಾರಣಗಳ ಪೈಕಿ ಪ್ರವಾಸಿಗರಿಗೆ ಹೆಚ್ಚು ಪರಿಚಿತವಲ್ಲದ ಶಿಖರವಿದು ಅನ್ನೋದೇ ಅಚ್ಚರಿ ಸಂಗತಿ! ಸಮುದ್ರ ಮಟ್ಟದಿಂದ 5,751 ಅಡಿ ಎತ್ತರದಲ್ಲಿರುವ ಈ ಪರ್ವತದ ಬಗ್ಗೆ ಬಹುತೇಕರಿಗೆ ಇಂದಿಗೂ ತಿಳಿದಿಲ್ಲ. ಪ್ರವಾಸಿಗರು ಮುಳ್ಳಯ್ಯನಗಿರಿ, ಕುದುರೆಮುಖ, ಕೆಮ್ಮಣಗುಂಡಿ, ಬಾಬುಬುಡನ್​ಗಿರಿ, ಘಾಟಿಕಲ್ಲು, ನೇತ್ರಾವತಿ, ಎತ್ತಿನಭುಜ ಚಾರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಅಷ್ಟಕ್ಕೂ, ಜನರಿಗೆ ಅಷ್ಟು ಪರಿಚಯವಿಲ್ಲದ ಕುರಿಂಜಲ್​ ಶಿಖರಕ್ಕೆ ನಾವು ಹೋಗಬೇಕು, ಅಲ್ಲಿ ಕಂಡ ಕರಿಕ್ಕಲ್​ ಬೆಟ್ಟದ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಬೇಕು ಅಂತ ಅನಿಸಿತು. ಕಡೆಗೂ ಮಾಡಿಬಿಟ್ಟೆವು ಕಣ್ರೀ ಈ ಟ್ರೆಕ್​!     

ಚಾರಣ ಪ್ರಿಯರಿಗೆ ಸಖತ್ ಜಾಗ

ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ಕುರಿಂಜಲ್​, ಹಿರಿದಾದ ಮತ್ತು ಎತ್ತರದ ಮರಗಳನ್ನು ಮೈದುಂಬಿಕೊಂಡಿದೆ. ಸಸ್ಯಕಾಶಿಯಿಂದ ಕೂಡಿರುವ ದಟ್ಟಕಾಡು ಪ್ರದೇಶದಲ್ಲಿ ಹಲವು ಝರಿಗಳ ಹರಿವು ಮತ್ತು ಕಡಿದಾದ ದಾರಿಗಳು ಚಾರಣದ ತುತ್ತ ತುದಿ ತಲುಪುವ ಉತ್ಸುಕತೆಯನ್ನು ದುಪ್ಪಟ್ಟಾಗಿಸುತ್ತದೆ. ಹಸಿರು ಹುಲ್ಲುಗಾವಲುಗಳಲ್ಲಿ ನಡೆದು ಹೋಗುವಾಗ ಜಿಗಣೆಗಳ ಹೀರುವಿಕೆಯ ಪ್ರಕ್ರಿಯೆ ಅದಾಗಲೇ ಆರಭವಾಗಿರುತ್ತದೆ. ಚಳಿಗಾಲದಲ್ಲಿ ಇದರ ಹವಾ ಹೆಚ್ಚೇನು ಇರೋದಿಲ್ಲ. ಆದರೆ, ಮಳೆಗಾಲದಲ್ಲಿ ಮಾತ್ರ ಮುತ್ತಿಕ್ಕುತ್ತಿರುತ್ತವೆ. ಇದಕ್ಕೆ ನೀವೇ ಜವಾಬ್ದಾರರು! 

ಚಳಿಗಾಲದಲ್ಲೇ ಬೆಸ್ಟ್​

7+7 ಒಟ್ಟು 14 ಕಿಮೀ ಇರುವ ಕುರಿಂಜಲ್​ ಆರಂಭಿಕರಿಗೂ ಅತ್ಯಂತ ಸುಲಭವಾದ ಚಾರಣ. 4 ಕಿ.ಮೀ ಹಸಿರಿನ ಸುರಂಗದಲ್ಲಿ ಸಾಗಿದರೆ, ಉಳಿದ 3 ಮೈಲಿ ಕೊಂಚ ಕಠಿಣ ಅನಿಸುತ್ತದೆ. ಶಿಖರದ ತುತ್ತ ತುದಿ ತಲುಪುತ್ತಿದ್ದಂತೆ ಉಂಟಾಗುವ ಅನುಭವ ಮಾತ್ರ ಹೇಳತೀರದು. ಮಳೆಗಾಲದಲ್ಲಿ ಇದರ ಅನುಭವ ನಿಜಕ್ಕೂ ರೋಮಾಂಚಕವೇ ನಿಜ. ಆದರೆ, ಮಳೆ ಸುರಿಯುವ ಸಮಯದಲ್ಲಿ ಇಳಿಜಾರುಗಳಲ್ಲಿ ಹಾದು ಹೋಗುವುದು ಕಷ್ಟಸಾಧ್ಯ.  

ಬುಕ್ಕಿಂಗ್, ಎಂಟ್ರಿ ಹೇಗೆ?

ನೀವು ಆಯ್ಕೆ ಮಾಡುವ ಚಾರಣ ಯಾವುದೆಂದು ದೃಢವಾಗಿ ನಿರ್ಧರಿಸಿದ ಬಳಿಕ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್​ಸೈಟ್​ ಆದ ಅರಣ್ಯ ವಿಹಾರ https://aranyavihaara.karnataka.gov.in/ ತಲುಪಿ, ಅಲ್ಲಿ ಚಾರಣದ ಲಭ್ಯತೆಯನ್ನು ಹುಡುಕಿ. ಒಬ್ಬರಿಗೆ 475 ರೂ. ಬುಕ್ಕಿಂಗ್ ಚಾರ್ಜಸ್​ ಆಗಲಿದೆ. ಟ್ರೆಕ್ಕಿಂಗ್​ಗೆ ಒಂದು ದಿನ ಅಥವಾ 15 ದಿನಗಳ ಮುಂಚಿತವಾಗಿ ಬುಕ್ ಮಾಡಿಕೊಳ್ಳುವುದು ಉತ್ತಮ. ವಿಪರೀತ ಮಳೆ, ಭೂಕುಸಿತದ ಮುನ್ಸೂಚನೆ ಇದ್ದರೆ, ಚಾರಣ ಕೊನೆಯ ಸಮಯದಲ್ಲಿ ರದ್ದಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಪ್ಲಾಸ್ಟಿಕ್​ಗೆ ಗುಡ್​ಬೈ

ಟ್ರೆಕ್ಕಿಂಗ್ ಮಾಡುವ ಚಾರಣಿಗರು, ತಾವು ತಂದಿರುವ ಬ್ಯಾಗ್​ಗಳಲ್ಲಿ ಪ್ಲಾಸ್ಟಿಕ್​ ವಸ್ತುಗಳನ್ನು ಕಡ್ಡಾಯವಾಗಿ ಕೈಬಿಡಬೇಕು. ಪ್ಲಾಸ್ಟಿಕ್​ ಬಾಟಲಿ, ಊಟದ ಬಾಕ್ಸ್​ ಸೇರಿದಂತೆ ಕವರ್​ನಿಂದ ಕೂಡಿರುವ ಕುರುಕಲು ತಿಂಡಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕಸ್ಮಾತ್​ ನೀವು ಈ ನಿಯಮಗಳನ್ನು ಮರೆತು ಅಥವಾ ನಿರ್ಲಕ್ಷಿಸಿ ಬ್ಯಾಗಿನಲ್ಲಿ ಹೊತ್ತು ತಂದಿದ್ದೇ ಆದರೆ, ಅರಣ್ಯ ಸಿಬ್ಬಂದಿಗಳು ಅವುಗಳನ್ನು ಚೆಕ್​ಪೋಸ್ಟ್​ ಹಂತದ ಚೆಕಿಂಗ್​ನಲ್ಲಿಯೇ ವಶಕ್ಕೆ ಪಡೆಯುತ್ತಾರೆ.   

ಗೈಡ್​ ಕಡ್ಡಾಯ

ಒಂದು ಬುಕ್ಕಿಂಗ್​ ಐಡಿಯಲ್ಲಿ ಗರಿಷ್ಠ ಮೂರು ಸಂದರ್ಶಕರಿಗೆ ಮಾತ್ರ ಅವಕಾಶ. 5 ಅಥವಾ 10ಕ್ಕೂ ಅಧಿಕ ಮಂದಿ ಗುಂಪಾಗಿ ಟ್ರೆಕ್ಕಿಂಗ್​ ಮಾಡಲು ಬಯಸಿದರೆ, ಟ್ರೆಕ್ಕಿಂಗ್​ ಪಾಯಿಂಟ್​ಗೂ ಮುನ್ನ ಸಿಗುವ ಚೆಕ್​ಪೋಸ್ಟ್​ನಲ್ಲಿ ನಿಮ್ಮ ಬುಕ್ಕಿಂಗ್​ ವಿವರಗಳನ್ನು ತೋರಿಸಿ, ಆನ್​ಲೈನ್​ನಲ್ಲಿ ಲಗ್ಗತ್ತಿಸಿದ ದಾಖಲೆಗಳನ್ನು ಅರಣ್ಯ ಅಧಿಕಾರಿಗಳಿಗೆ ಒದಗಿಸಬೇಕು. ಆ ನಂತರ ನಿಮ್ಮೊಂದಿಗೆ ಒಬ್ಬ ಸ್ಥಳೀಯ ಗೈಡ್​ ಅನ್ನು ಕರೆದುಕೊಂಡು ಹೋಗಬೇಕು. ಇವರಿಗೆ 1000 ರೂ. ಪಾವತಿಸಿದರೆ, ಇವರು ನಿಮಗೆ ಕುರಿಂಜಲ್​ ಶಿಖರದ ಬಗ್ಗೆ ಮಾಹಿತಿ ನೀಡುವುದರ ಜತೆ ಟ್ರೆಕ್​ನ ಆರಂಭದಿಂದ ಕೊನೆಯವರೆಗೂ ನಿಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಾರೆ. ಇಲ್ಲಿ ಗೈಡ್​ ಅನ್ನು ಜೊತೆಯಲ್ಲೇ ಕರೆದುಕೊಂಡು ಹೋಗುವುದು ಕಡ್ಡಾಯ.​