ಗುರುಮಠಕಲ್​ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ರಕ್ತ ಶುದ್ಧೀಕರಣ (ಡಯಾಲಿಸಿಸ್​) ಟಕವನ್ನು ಶಾಸಕ ಶರಣಗೌಡ ಕಂದಕೂರು ಉದ್ಘಾಟಿಸಿದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಘಂಟಿ, ಡಾ.ಹಣಮಂತರೆಡ್ಡಿ, ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಪ್ರಕಾಶ ನೀರೆಟಿ ಇತರರಿದ್ದರು. 
ರಾಜ್ಯ

ಜನರಿಗೆ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕಂದಕೂರ ಸಲಹೆ
  • ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಶುದ್ಧೀಕರಣ ಘಟಕಕ್ಕೆ ಚಾಲನೆ
ಗುರುಮಠಕಲ್​: ನಮ್ಮ ಭಾಗದ ಜನರು ಬಹಳ ಮುಗ್ಧರು ಹೀಗಾಗಿ ಅವರಿಗೆ ಯಾವುದೇ ತೊಂದರೆಯಾಗದಂತೆ ನಿಮ್ಮ ಅಣ್ಣ ತಮ್ಮಂದಿರೆಂದು ಭಾವಿಸಿ ಚಿಕಿತ್ಸೆ ನೀಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ರಕ್ತ ಶುದ್ಧೀಕರಣ (ಡಯಾಲಿಸಿಸ್​) ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಿಗೆ ಸಮಸ್ಯೆಯಾಗದಂತೆ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಮನೆಯ ಅಣ್ಣ-ತಮ್ಮಂದಿರೆಂದು ಭಾವಿಸಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ಡಯಾಲಿಸಿಸ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಮೂತ್ರಪಿಂಡ ರೋಗಿಗಳನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳಿ, ಅವರ ಆರೋಗ್ಯವನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ ಉತ್ತಮ ಚಿಕಿತ್ಸೆ ನೀಡಿ ಕಳುಹಿಸಬೇಕು. ಸರ್ಕಾರದ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಎರಡು ರಕ್ತ ಶುದ್ಧೀಕರಣ ಘಟಕ ತರಲಾಗಿದೆ. ನಾನು ಐದು ಕೇಳಿದ್ದೆ, ಸಧ್ಯ ಎರಡು ನೀಡಿದ್ದಾರೆ ಎಂದು ಹೇಳಿದರು.
ನಮ್ಮ ಭಾಗದ ಬಡಜನರು ಖಾಸಗಿ ಆಸ್ಪತ್ರೆಗೆ ಹೋಗಲು ಹಣದ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂತಹವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣವನ್ನು ಪ್ಲಾಸ್ಟಿಕ್​ ಮುಕ್ತಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಯಾವುದೇ ಅನಾಹುತಗಳು ನಡೆದರೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ನಿರ್ಮಾಣ ಹಂತದಲ್ಲಿರುವ 50 ಹಾಸಿಗೆಗಳ ಆಸ್ಪತ್ರೆ ಕಟ್ಟಡವನ್ನು ವೀಸಿದ ಶಾಸಕರು, ಸಂಬಂಧಪಟ್ಟ ಇಂಜಿನಿಯರ್​ಗಳನ್ನು ಸ್ಥಳಕ್ಕೆ ಕರೆಸಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.
ಯಾವುದೇ ರೀತಿಯ ಕಳಪೆ ಕಾಮಗಾರಿ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಆಸ್ಪತ್ರೆ ಕಟ್ಟಡವನ್ನು ಅಚ್ಚುಕಟ್ಟಾಗಿ, ಸರಿಯಾದ ಕ್ಯೂರಿಂಗ್​ ಮೂಲಕ ಗುಣಮಟ್ಟದಿಂದ ನಿರ್ಮಿಸಬೇಕು ಎಂದು ಕಟ್ಟುನಿಟ್ಟಿನ ತಾಕೀತು ಮಾಡಿದರು.
ಪ್ರಸ್ತುತ 50 ಹಾಸಿಗೆಗಳಿರುವ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಸರ್ಕಾರದಿಂದ ಅನುದಾನ ದೊರಕದಿದ್ದರೂ, ಕೆಕೆಆರ್​ಡಿಬಿ ಅನುದಾನದಿಂದ ನೆರವು ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ತಹಸೀಲ್ದಾರ್​ ಚನ್ನಮಲ್ಲಪ್ಪ ಘಂಟಿ, ತಾಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಜೆಡಿಎಸ್​ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಟಿ, ಜೆಡಿಎಸ್​ ಬ್ಲಾಕ್​ ಅಧ್ಯಕ್ಷ ಪ್ರಕಾಶ ನೀರೆಟಿ, ಮಾಜಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಭೀಮಶಪ್ಪ ಗುಡಿಸೆ, ರುನಾಥರೆಡ್ಡಿ ಗವಿನೋಳ, ಬಸಣ ದೇವರಹಳ್ಳಿ ಇತರರಿದ್ದರು.
"

ಅತಿಯಾಗಿ ರಾಸಾಯನಿಕ ಮಿಶ್ರಿತ ಮಸಾಲೆ, ಕಲುಷಿತ ಆಹಾರ ಪದಾರ್ಥಗಳು ಹಾಗೂ ತಂಪು ಪಾನೀಯಗಳ ಬಳಕೆಯಿಂದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ನಮ್ಮ ಭಾಗದಲ್ಲಿ ಕ್ಯಾನ್ಸರ್​ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ನೋವಿನ ಸಂಗತಿ.

— > ಶರಣಗೌಡ ಕಂದಕೂರ ಶಾಸಕ ಗುರುಮಠಕಲ್​