akram pasaha 
ರಾಜ್ಯ

ಸರ್ಕಾರಕ್ಕೆ ಸಾರಿಗೆ ನೌಕರರ ಮುಷ್ಕರದ ಸಂಕಷ್ಟ: ನೋ ವರ್ಕ್, ನೋ ಪೇ: ಎಸ್ಮಾ ಜಾರಿ ಎಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • ಶೇ.12.50 ಸಂಬಳ ಹೆಚ್ಚಳವನ್ನು ನಾವು ಒಪ್ಪುವುದಿಲ್ಲ. ಶೇ.25ರಷ್ಟು ಸಂಬಳ ಹೆಚ್ಚಳ ಮಾಡಲೇಬೇಕು.
  • ಕೋವಿಡ್ ಸಂದರ್ಭದ ಒಂದು ವರ್ಷದ ಹಿಂಬಾಕಿಯನ್ನು ಕೊಡಲೇಬೇಕು ಎಂದು ಸಾರಿಗೆ ನೌಕರರ ಜಂಟಿ ಕ್ರೀಯಾ ಸಮಿತಿ ಪಟ್ಟು
ಬೆಂಗಳೂರು:
ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಹಗ್ಗ ಜಗ್ಗಾಟ ಹಾಗೆಯೇ ಮುಂದುವರಿದಿದ್ದು, ನಾ ಕೊಡೆ, ನೀ ಬಿಡೆ ಎನ್ನುವ ನಿರ್ಮಾಣವಾಗಿದೆ.
ಒಂದು ಕಡೆಯಲ್ಲಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಸತತ ಪ್ರಯತ್ನ ನಡೆಸಿರುವ ಸರ್ಕಾರ, ಮತ್ತೊಂದು ಕಡೆಯಲ್ಲಿ ಮುಷ್ಕರ ಅನಿವಾರ್ಯವಾದರೆ, ಅದಕ್ಕೆ ಪರ‌್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ.
ಈಗಾಗಲೇ ಅಗತ್ಯ ಸೇವೆಗಳ ಕಾಯಿದೆ ಎಸ್ಮಾ ಜಾರಿ ಮಾಡಿರುವ ಸರ್ಕಾರ ನೋ ವರ್ಕ್, ನೋ ಪೇ ಎನ್ನುವುದನ್ನು ಸಾರಿದೆ.
ಸಾರಿಗೆ ಇಲಾಖೆ ಆಯುಕ್ತರ ಜೊತೆಯಲ್ಲಿ ನಡೆದ ಮಾತುಕತೆಯೂ ವಿಲವಾಗಿದೆ. ಶೇ.12.50 ಸಂಬಳ ಹೆಚ್ಚಳವನ್ನು ನಾವು ಒಪ್ಪುವುದಿಲ್ಲ. ಶೇ.25ರಷ್ಟು ಸಂಬಳ ಹೆಚ್ಚಳ ಮಾಡಲೇಬೇಕು. ಕೋವಿಡ್ ಸಂದರ್ಭದ ಒಂದು ವರ್ಷದ ಹಿಂಬಾಕಿಯನ್ನು ಕೊಡಲೇಬೇಕು ಎಂದು ಸಾರಿಗೆ ನೌಕರರ ಜಂಟಿ ಕ್ರೀಯಾ ಸಮಿತಿ ಪಟ್ಟು ಹಿಡಿದಿದೆ.
ಜಂಟಿ ಕ್ರೀಯಾ ಸಮಿತಿ ಜೊತೆಯಲ್ಲಿ ನಡೆಸಿದ ಹಲವು ಸುತ್ತಿನ ಸಭೆಯಲ್ಲಿ ಈ ಹಿಂದೆ ಮುಷ್ಕರ ನಡೆಸಿದ್ದ ಸಂದರ್ಭದಲ್ಲಿ ಎಸ್ಮಾ ಕಾಯಿದೆ ಬಳಸಿ 3 ಸಾವಿರ ಸಾರಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿರುವುದನ್ನು ನೆನಪಿಸಲಾಗಿದೆ.
ಮಾತುಕತೆಯ ಮೂಲಕ ಸಂಧಾನ ಯಶಸ್ವಿಯಾದ ಬಳಿಕ ವಜಾಗೊಂಡ ನೌಕರರನ್ನು ವಾಪಸ್ಸು ಪಡೆಯಲು ಸರ್ಕಾರ ಅನುಮತಿಸಿತ್ತು. ಶೇ.90ರಷ್ಟು ನೌಕರರು ವಾಪಸ್ಸು ಸೇವೆಗೆ ಮರಳಿದರೂ, ಈಗಲೂ ಹಲವು ನೌಕರರು ಕೋರ್ಟ್ ಕಚೇರಿ ಅಲೆಯುವುದು ಮಾತ್ರ ತಪ್ಪಿಲ್ಲ ಎನ್ನುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳಾಗಿವೆ. ಇದೇ ಮಾಹಿತಿಯನ್ನು ಸಾರಿಗೆ ಇಲಾಖೆ, ತನ್ನ ನೌಕರರಿಗೆ ರವಾನಿಸಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ತಿಳುವಳಿಕೆ ನೀಡುತ್ತಿದೆ.
ಪರ್ಯಾಯ ವ್ಯವಸ್ಥೆಗೆ ಸಿದ್ಧತೆ:
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗಳ ಮೊರೆ ಹೋಗಿರುವ ಸರ್ಕಾರ, ಖಾಸಗಿ ಬಸ್‌ಗಳನ್ನು ಓಡಿಸಲೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಸ್ಮಾ ಜಾರಿ ಮಾಡಿರುವ ಸರ್ಕಾರ ನೋ ವರ್ಕ್, ನೋ ಪೇ ಎನ್ನುವುದನ್ನು ಸಾರಿದ್ದು, ಆ ಮೂಲಕ ಕಟ್ಟು ನಿಟ್ಟಾಗಿ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದೆ.

*ಸಂಸ್ಥೆ ಮತ್ತು ನೌಕರರ ಹಿತ ದೃಷ್ಟಿಯಿಂದ ಈಗಾಗಲೇ ಹಲವು ತೀರ್ಮಾನಗಳನ್ನು ಮಾಡಲಾಗಿದೆ. ಹಿಂಬಾಕಿಯನ್ನು ಕೊಡಲಾಗಿದ್ದು, ಶೇ.12.50 ಸಂಬಳ ಹೆಚ್ಚಳವನ್ನು ಮಾಡಲಾಗಿದೆ. ಆದರೂ ನೌಕರರು ಶೇ.25ಕ್ಕೆ ಪಟ್ಟು ಹಿಡಿದಿರುವುದು ಸರಿಯಲ್ಲ. ಮತ್ತೊಮ್ಮೆ ಮಾತುಕತೆಯ ಮೂಲಕ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು. ಇಲ್ಲದಿದ್ದರೆ ಕ್ರಮ ಅನಿವಾರ್ಯ.-ಅಕ್ರಂ ಪಾಷ, ಎಂಡಿ, ಕೆಎಸ್‌ಆರ್‌ಟಿಸಿ

*ನಾವು ನ್ಯಾಯಯುತ ಬೇಡಿಕೆಯನ್ನೆ ಸರ್ಕಾರ ಮುಂದಿಟ್ಟಿದ್ದೇವೆ. ಹಿಂದಿನ ಅವಧಿಯ ಒಂದು ವರ್ಷದ ಹಿಂಬಾಕಿಯನ್ನು ಬಾಕಿ ಉಳಿಸಿಕೊಂಡಿರುವುದನ್ನು ಕೊಡಬೇಕು. 2024ರಿಂದಲೇ ಪೂರ್ವಾನ್ವಯವಾಗುವಂತೆ ಶೇ.25ರಷ್ಟು ಸಂಬಳ ಹೆಚ್ಚಳ ಮಾಡಲೇಬೇಕು ಎನ್ನುವುದು ನಮ್ಮ ಬೇಡಿಕೆ. ಈಡೇರಿಸದಿದ್ದರೆ ಮುಷ್ಕರ ಅನಿವಾರ್ಯ.
-ಎಚ್.ಎಸ್.ಮಂಜುನಾಥ್, ಸಾರಿಗೆ ಜಂಟಿ ಕ್ರೀಯಾ ಸಮಿತಿ ಮುಖಂಡರು.