ರಾಜ್ಯ ಅಬಕಾರಿ ನಿರೀಕ್ಷಕರ ಸಂಘ
ಬೆಂಗಳೂರು: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಳೆದ ವರ್ಷ ಅಬಕಾರಿ ಇಲಾಖೆಯಲ್ಲಿ ಗ್ರೂಪ್ ‘ಸಿ‘ ವೃಂದಕ್ಕೆ ಜಾರಿಗೆ ತಂದಿರುವ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ರಾಜ್ಯ ಅಬಕಾರಿ ನಿರೀಕ್ಷಕರ ಸಂಘ, ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದೆ.
ಸಂಘದ ಅಧ್ಯಕ್ಷ ಬಿ.ಜ್ಞಾನಪ್ರಕಾಶ್, ಉಪಾಧ್ಯಕ್ಷ ಸದಾಶಿವಕೊರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಎಂ.ಸುಧೀರ್‌ಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ನೂರಾರು ಅಬಕಾರಿ ನಿರೀಕ್ಷಕರು ಸಚಿವರನ್ನು ಭೇಟಿ, ಕೌನ್ಸೆಲಿಂಗ್ ತರುವ ಮುನ್ನ ವರ್ಗಾವಣೆಯಲ್ಲಿ ಹೇಗೆಲ್ಲಾ ಭ್ರಷ್ಟಾಚಾರ ನಡೆಯುತ್ತಿತ್ತು ಹಾಗೂ ಕೌನ್ಸೆಲಿಂಗ್ ಬಂದ ಬಳಿಕ ಭ್ರಷ್ಟಾಚಾರ ರಹಿತವಾಗಿ ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೆ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಗಮನಕ್ಕೆ ತಂದರು.
2025ರಲ್ಲಿ ಜಾರಿಗೆ ತರಲಾದ ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ಪದ್ಧತಿಯು ಅತ್ಯಂತ ಪಾರದರ್ಶಕವಾಗಿದ್ದು, ಸಿಬ್ಬಂದಿಗಳ ಜ್ಯೇಷ್ಠತೆ ಮತ್ತು ಕಾರ್ಯಕ್ಷಮತೆಗೆ ತಕ್ಕಂತೆ ಅರ್ಹ ಸ್ಥಳ ಆಯ್ಕೆ ಮಾಡಲು ನ್ಯಾಯಯುತ ಅವಕಾಶ ನೀಡಿದೆ. ಹಳೆಯ ವರ್ಗಾವಣೆ ಪದ್ಧತಿಯಲ್ಲಿದ್ದ ಅನಿಶ್ಚಿತತೆ, ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರಕ್ಕೆ ಕೌನ್ಸಿಲಿಂಗ್ ವ್ಯವಸ್ಥೆಯು ಸಂಪೂರ್ಣವಾಗಿ ತಡೆ ನೀಡಿದೆ. ಸರ್ಕಾರವು ಮತ್ತೆ ಹಳೆಯ ಪದ್ಧತಿಯನ್ನು ಮರುಜಾರಿಗೊಳಿಸಲು ಪರಿಶೀಲಿಸುತ್ತಿರುವುದು ನಮಗೆ ತೀವ್ರ ಆತಂಕ ತಂದಿದೆ ಎನ್ನುತ್ತಾರೆ ಸಂಘದ ಪದಾಧಿಕಾರಿಗಳು.
ವರ್ಗಾವಣೆ ಮಾರ್ಗಸೂಚಿಗಳಲ್ಲಿನ ಕೆಲವು ನಿಯಮಗಳಾದ ಸ್ವಂತ ಜಿಲ್ಲೆಗೆ ವರ್ಗಾವಣೆ, ಲೋಕಾಯುಕ್ತ ದೂರು ಅಥವಾ ಇಲಾಖಾ ವಿಚಾರಣೆ ಎದುರಿಸುತ್ತಿರುವವರನ್ನು ಕಾರ್ಯನಿರ್ವಾಹಕೇತರ ಹುದ್ದೆಗಳಿಗೆ ವರ್ಗಾಯಿಸುವ ಅಂಶಗಳನ್ನು ಪುನರ್ ಪರಿಶೀಲಿಸಿ ಸೂಕ್ತ ತಿದ್ದುಪಡಿ ತರಬೇಕೆಂದು ಸಂಘದ ಪದಾಧಿಕಾರಿಗಳು ,ಸಚಿವರಿಗೆ ಮನವಿ ಮಾಡಿದರು.