ಐಪಿಎಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ 
ರಾಜ್ಯ

ಐಪಿಎಸ್‌ಗಳ ವರ್ಗಾವಣೆ ಪಿಇಬಿ ಸುರ್ಪದಿಗೆ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮುಜುಗರ ತಪ್ಪಿಸಲು ಎಸ್‌ಪಿ/ಡಿಸಿಪಿ ದರ್ಜೆ ಮೇಲ್ಪಟ್ಟವರ ವರ್ಗಾವಣೆ ಅಧಿಕಾರವನ್ನೂ ಪೊಲೀಸ್ ಸ್ಥಾಪನಾ ಮಂಡಳಿ(ಪಿಇಬಿ)ವ್ಯಾಪ್ತಿಗೆ ತರಲು ಗೃಹ ಇಲಾಖೆ ಮುಂದಾಗಿದೆ.
ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆಯಿಂದ ಬಳ್ಳಾರಿ ಜಿಲ್ಲೆಗೆ ಎಸ್‌ಪಿಯಾಗಿ ವರ್ಗಾವಣೆಯಾಗಿದ್ದ ಪವನ್ ನಜ್ಜಾರು, ಅಧಿಕಾರ ಸ್ವೀಕರಿಸಿದ ಕೆಲವೇ ತಾಸಿನಲ್ಲಿ ಶಾಸಕರ ಬೆಂಬಲಿಗರ ನಡುವೆ ಗಲಾಟೆ ನಡೆದು ಓರ್ವ ಯುವಕ ಮೃತಪಟ್ಟಿದ್ದ. ಇದು ಸರ್ಕಾರಕ್ಕೆ ಮತ್ತು ಗೃಹ ಇಲಾಖೆಗೆ ಸಾಕಷ್ಟು ಮುಜುಗರ ಮತ್ತು ಪ್ರತಿಪಕ್ಷದವರ ವಾಗ್ದಾಳಿಗೆ ಒಳಗಾಗಿತ್ತು.
ಏಕೆಂದರೆ ಜಿಲ್ಲಾ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಬೇಕಾದರೆ ಪೂರ್ವಪರ ಪರಿಶೀಲನೆ ಮಾಡಿಯೇ ಕಳುಹಿಸಬೇಕಾಗುತ್ತದೆ. ಆದರಿಂದ ಎಸ್‌ಪಿ/ಡಿಸಿಪಿ ಮೇಲ್ದರ್ಜೆ ಅಧಿಕಾರಿಗಳನ್ನು ವರ್ಗಾವಣೆಯನ್ನು ಮಾಡುವ ಅಧಿಕಾರವನ್ನು ಪಿಇಬಿಗೆ ವಹಿಸಲು ಸರ್ಕಾರ ನಿರ್ಧಾರ ಮಾಡಿದೆ.
ಪೊಲೀಸ್ ಅಧಿಕಾರಿಗಳು ಕರ್ತವ್ಯ ಲೋಪ, ನಿರ್ಲಕ್ಷ್ಯ ಅಥವಾ ಕರ್ತವ್ಯದಲ್ಲಿ ದುರ್ನಡತೆ ಎಸಗಿದಾಗ ಅವರನ್ನು ವರ್ಗಾಯಿಸಲು ಪಿಇಬಿಗೆ ಅಧಿಕಾರ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವಲ್ಲಿ ವಿಳಂಬವಾಗುತ್ತದೆ. ಆದರಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ಕ್ಕೆ (ಕರ್ನಾಟಕ ಕಾಯ್ದೆ 4, 1964) ಮತ್ತಷ್ಟು ತಿದ್ದುಪಡಿ ತರುವುದು ಅಗತ್ಯವಾಗಿದೆ. ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಿ ಒಪ್ಪಿಗೆ ಪಡೆಯಲು ಗೃಹ ಇಲಾಖೆ ತಯಾರಿ ನಡೆಸಿದೆ.

ಪೊಲೀಸ್ ಸ್ಥಾಪನಾ ಮಂಡಳಿ

ಡಿಜಿ-ಐಜಿಪಿ ಅಧ್ಯಕ್ಷತೆಯಲ್ಲಿ ಪೊಲೀಸ್ ಆಡಳಿತ ವಿಭಾಗದ ಎಡಿಜಿಪಿ, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳು ಒಳಗೊಂಡ ಮಂಡಳಿ ರಚನೆಯಾಗಿದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆ ವೇಳೆ ಈ ಮಂಡಳಿ ಅನುಮತಿ ಕಡ್ಡಾಯವಾಗಿರುತ್ತದೆ. ಇಲ್ಲಿಯೂ ಸಚಿವರು ಮತ್ತು ಶಾಸಕರ ಪತ್ರ ಇಲ್ಲದೆ ಯಾವುದೇ ವರ್ಗಾವಣೆ ನಡೆಯುತ್ತಿಲ್ಲ ಎಂಬ ಆರೋಪಗಳು ಸಹ ತಳ್ಳಿ ಹಾಕುವಂತಿಲ್ಲ.