ಈ ಸಂದರ್ಭದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉಪನಿರ್ದೇಶಕ ಡಾ. ಸುರೇಶ್ ರಾಥೋಡ್, ಮುಖ್ಯ ಪಶುವೈದ್ಯಾಧಿಕಾರಿ ಡಾ. ಸುಭಾಶ್ಚಂದ್ರ ಟಕ್ಕಳಕಿ ಉಪಸ್ತಿತರಿದ್ದರು
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕಲಬುರಗಿ ಹಾಗೂ ಕೇಂದ್ರಿಯ ಉಣ್ಣೆ ಅಭಿವೃದ್ಧಿ ಮಂಡಳಿ ಜೋಧಪೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಐದು ದಿನಗಳ ಉಣ್ಣೆ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಯಾಂತ್ರಿಕೃತ ಉಣ್ಣೆ ಕಟಾವು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಸುಮಾರು 50 ಜನ ಕುರಿ ಸಾಕಾಣಿಕೆದಾರರು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ತಾಂತ್ರಿಕ ಜ್ಞಾನ ಪಡೆದರು. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರ್ತೂರ ಅವರು ತರಬೇತಿದಾರರಿಗೆ ಪ್ರಮಾಣ ಪತ್ರ ಹಾಗೂ ವಲಸೆ ಕುರಿಗಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿದ ಅವರು ಶೀಘ್ರದಲ್ಲೇ ಕುರಿಗಾರರಿಗೆ ಅಗತ್ಯವಿರುವ ಜಂತು ನಾಶಕ ಔಷಧಿ ಮತ್ತು ಪರಿಕರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಕುರಿ/ಮೇಕೆ ಸಾಕಾಣಿಕೆಗಾಗಿ ಸಹಾಯಧನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.
ಪಶು ಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಸಂಜಯ್ ರೆಡ್ಡಿ ಅವರು ಮಾತನಾಡಿ ಕುರಿ ಮತ್ತು ಮೇಕೆಗಳಿಗೆ ಕಾಲಕಾಲಕ್ಕೆ ಲಸಿಕೆ ಮತ್ತು ಚಿಕಿತ್ಸೆ ನೀಡುವ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ಉಪ ನಿರ್ದೇಶಕ ಡಾ. ರವಿಂದ್ರನಾಥ ಅವರು ಮಾತನಾಡಿ ಐದು ದಿನಗಳ ಈ ತರಬೇತಿಯ ಉದ್ದೇಶ ಮತ್ತು ಅದರ ಕಾರ್ಯವಿಧಾನಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಶು ವೈದ್ಯಕೀಯ ಪರಿಕ್ಷಕರ ತರಬೇತಿ ಕೇಂದ್ರ ಉಪನಿರ್ದೇಶಕರ ಡಾ. ದಯಾನಂದ ಹಕ್ಕಾಪಕ್ಕಿ ಅವರು ಮಾತನಾಡಿ ಹೊಸದಾಗಿ ಕುರಿ/ಮೇಕೆ ಸಾಕಾಣಿಕೆ ಆರಂಭಿಸಲು ಆಸಕ್ತಿ ಇರುವ ರೈತರು ಕಛೇರಿಗೆ ಬಂದು ಅರ್ಜಿ ಸಲ್ಲಿಸಲು ಕೋರಿದರು.
ಡಾ. ಶಂಕರ ಕಣ್ಣಿ ಅವರು ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉಪನಿರ್ದೇಶಕ ಡಾ. ಸುರೇಶ್ ರಾಥೋಡ್, ಮುಖ್ಯ ಪಶುವೈದ್ಯಾಧಿಕಾರಿ ಡಾ. ಸುಭಾಶ್ಚಂದ್ರ ಟಕ್ಕಳಕಿ ಉಪಸ್ತಿತರಿದ್ದರು.