ಗ್ಯಾಸ್ ಗೀಸರ್ ಸೋರಿಕೆ: ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿ ಬಾತ್‌ರೂಮ್‌ನಲ್ಲೇ ದುರ್ಮರಣ! Gas Geyser Leak
- ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದ ಮೈಸೂರಿನ ಯುವತಿಯೊಬ್ಬಳು ದುರಂತ ಸಾವು
- ಹೋಂಸ್ಟೇನಲ್ಲಿ ಸಂಭವಿಸಿದ ಗ್ಯಾಸ್ ಗೀಸರ್ ಸೋರಿಕೆಯಿಂದ ಬಾತ್‌ರೂಮ್‌ನಲ್ಲೇ ಉಸಿರುಗಟ್ಟಿ ದುರ್ಮರಣ
- ಭಾನುವಾರ ಬೆಳಗ್ಗೆ ಮಡಿಕೇರಿಯ ಸೋಮವಾರಪೇಟೆ ಬಳಿ ಸಂಭವಿಸಿದ ಭೀಕರ ಘಟನೆ
- ಮಗಳನ್ನು ಕಳೆದುಕೊಂಡ ದುಃಖದಲ್ಲಿ ಮುಗಿಲು ಮುಟ್ಟಿದ ಪಾಲಕರ ಆಕ್ರಂದನ
ಮಡಿಕೇರಿ: ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದ ಮೈಸೂರಿನ ಯುವತಿಯೊಬ್ಬಳು ಹೋಂಸ್ಟೇನಲ್ಲಿ ಸಂಭವಿಸಿದ ಗ್ಯಾಸ್ ಗೀಸರ್ ಸೋರಿಕೆ ( Gas Geyser Leak ) ಯಿಂದಾಗಿ ಬಾತ್‌ರೂಮ್‌ನಲ್ಲೇ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿರುವ ಅತ್ಯಂತ ದುರದೃಷ್ಟಕರ ಘಟನೆ ಭಾನುವಾರ ಬೆಳಗ್ಗೆ ಸೋಮವಾರಪೇಟೆ ಬಳಿ ಸಂಭವಿಸಿದೆ. ಪ್ರವಾಸದ ಖುಷಿಯಲ್ಲಿದ್ದ ಯುವತಿ ತಂಗಿದ್ದ ಜಾಗದಲ್ಲೇ ಹೆಣವಾಗಿರುವುದು ಆಕೆಯ ಕುಟುಂಬಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಮೃತ ದುರ್ದೈವಿಯನ್ನು ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಗಳಾದ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನೂತ (27) ಎಂದು ಗುರುತಿಸಲಾಗಿದೆ. ವಿನೂತ ಅವರು ಕೊಡಗಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಸಲುವಾಗಿ ಪ್ರವಾಸಕ್ಕೆ ಬಂದಿದ್ದು, ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ವ್ಯಾಪ್ತಿಯಲ್ಲಿರುವ ಹೋಂಸ್ಟೇ ಒಂದರಲ್ಲಿ ಕೊಠಡಿ ಪಡೆದು ತಂಗಿದ್ದರು ಎನ್ನಲಾಗಿದೆ.
ಭಾನುವಾರ ಬೆಳಗ್ಗೆ ಎಂದಿನಂತೆ ವಿನೂತ ಅವರು ಸ್ನಾನ ಮಾಡುವ ಸಲುವಾಗಿ ಕೊಠಡಿಯ ಬಾತ್‌ರೂಮಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಬಾತ್‌ರೂಮ್‌ನಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ಏಕಾಏಕಿ ಅನಿಲ ಸೋರಿಕೆಯಾಗಿದೆ (Gas Leakage). ಪರಿಣಾಮವಾಗಿ ಇಡೀ ಬಾತ್‌ರೂಮ್‌ನಲ್ಲಿ ಅನಿಲ ಆವರಿಸಿಕೊಂಡಿದ್ದು, ಉಸಿರಾಡಲು ಗಾಳಿ ಸಿಗದೆ ವಿನೂತ ಅವರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರಂತಕ್ಕೆ ಬಾತ್‌ರೂಮ್‌ನಲ್ಲಿ ಸೂಕ್ತ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ವಿನೂತ ಅವರು ಸ್ನಾನಕ್ಕೆ ತೆರಳಿದ್ದ ಬಾತ್ ರೂಮಿನಲ್ಲಿ ಯಾವುದೇ ಕಿಟಕಿಗಳು ಅಥವಾ ವೆಂಟಿಲೇಷನ್ ಇರಲಿಲ್ಲ ಎಂದು ಹೇಳಲಾಗಿದ್ದು, ಗ್ಯಾಸ್ ಸೋರಿಕೆಯಾದ ತಕ್ಷಣ ವಿಷಗಾಳಿ ಹೊರಹೋಗಲು ದಾರಿಯಿಲ್ಲದೆ ಯುವತಿ ಉಸಿರುಗಟ್ಟಿ ಸಾವಿಗೀಡಾದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.