ಸೇಡಂ ಕ್ಷೇತ್ರದ ಯಲ್ಲಮ್ಮಗೇಟ್& ಗಡಿಕೇಶ್ವಾರ ಗ್ರಾಮ ಮಧ್ಯದ ರಸ್ತೆ ಸಂಪೂರ್ಣ ಹಾಳಾಗಿರುವುದು.
- ಯಲ್ಲಮ್ಮಗೇಟ್-ಗಡಿಕೇಶ್ವಾರ ರೋಡ್ ಸಂಪೂರ್ಣ ಹಾಳು
- ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಮಸ್ಯೆ
ಸೇಡಂ: ಕಿತ್ತು ಹೋಗಿರುವ ಡಾಂಬರ್.. ಎಲ್ಲೆಂದರಲ್ಲಿ ಕಾಣಿಸಿಕೊಂಡಿರುವ ತಗ್ಗು-ಗುಂಡಿಗಳು.. ಏಳುತ್ತಾ-ಬೀಳುತ್ತಾ ವಾಹನ ಚಲಾಯಿಸುವ ಸವಾರರು.. ಇದು ಯಲ್ಲಮ್ಮ ಗೇಟ್ನಿಂದ ಗಡಿಕೇಶ್ವಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯಾಗಿದೆ.
ಸುಮಾರು 14 ಕಿಮೀ. ರಸ್ತೆ ಇದಾಗಿದ್ದು, ಭೂತಪುರ, ರಾಯ್ಕೋಡ್ ಹಾಗೂ ಕಲ್ಲೂರ (ಕೆ) ಸೇರಿ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ ಪ್ರಯಾಸ ಪಡುತ್ತಾ ತಿರುಗಾಡಬೇಕಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷರು ಹಾಗೂ ಸಾರ್ವಜನಿಕರು ನಿತ್ಯವೂ ಜೀವ ಕೈಯಲ್ಲಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಬಹುತೇಕ ಡಾಂಬರ್ ಕಿತ್ತುಹೋಗಿದ್ದು, ಎಲ್ಲೆಡೆ ಬೃಹತ್ ತಗ್ಗುಗಳು ಬಿದ್ದಿವೆ. ದೊಡ್ಡ ವಾಹನಗಳು ಹೇಗಾದರೂ ಸಂಚರಿಸಬಹುದು. ಆದರೆ ಆಟೋ, ಬೈಕ್ಗಳ ಸಂಚಾರ ಕಷ್ಟಕರವಾಗಿದೆ. ನಿತ್ಯವೂ ಯಾರಾದರೊಬ್ಬರೂ ಬೈಕ್ನಿಂದ ಬಿದ್ದು ಗಾಯಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ರಸ್ತೆಯ ದುಸ್ಥಿತಿಯಿಂದ ರೈತರು ಕೃಷಿ ಸಾಮಗ್ರಿ ಸಾಗಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಗರ್ಭಿಣಿಯರು, ಮಹಿಳೆಯರು ಹಾಗೂ ವಯೋವೃದ್ಧರು ತುರ್ತು ಆರೋಗ್ಯ ಸೇವೆ ಪಡೆಯಲು ಸಂಕಷ್ಟ ಎದುರಿಸುತ್ತಿದ್ದಾರೆ.
ಇದೀಗ ಮಳೆಗಾಲವಾಗಿದ್ದು, ನೀರು ಸಂಗ್ರಹವಾಗಿ ರಸ್ತೆ ಯಾವುದು ? ಗುಂಡಿಗಳು ಯಾವುವು ಎಂಬುದು ತಿಳಿಯದಂತಾಗಿದೆ. ಸಂಪೂರ್ಣ ಹಾಳಾಗಿರುವ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳಿಯ ಆರೋಪವಾಗಿದೆ.
ಈಗಾಗಲೇ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಸಂಪೂರ್ಣ ಅಪಾಯ ಆಹ್ವಾನಿಸುತ್ತಿರುವ ಯಲ್ಲಮ್ಮಗೇಟ್-ಗಡಿಕೇಶ್ವರ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂಬುದು ಸ್ಥಳಿಯರ ಒಕ್ಕೊರಲ ಒತ್ತಾಯವಾಗಿದೆ.
"
ಯಲ್ಲಮ್ಮಗೇಟ್- ಗಡಿಕೇಶ್ವಾರ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಿ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ರಣೆಗೆ ಮುಂದಿನ ದಿನಗಳಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ.
— > ವೀರೇಂದ್ರ ಪಾಟೀಲ್ ರಾಯ್ಕೋಡ್, ಜಿಲ್ಲಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ