ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಕೆ)ದ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಬಸ್ಸಿಗಾಗಿ ವಿದ್ಯಾರ್ಥಿಗಳು ಮಳೆಯಲ್ಲಿಯೇ ಕೆಲ ಕಾಲ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.
- ಹಳ್ಳಿಖೇಡ(ಕೆ)ದಲ್ಲಿ ಬಸ್ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಹುಮನಾಬಾದ್: ಸಂಜೆ ವೇಳೆಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಹಳ್ಳಿಖೇಡ್(ಕೆ) ಗ್ರಾಮದ ಶಾಲೆಗಳಿಗೆ ಆಗಮಿಸುವ ಮುಸ್ತಾಪುರ ಹಾಗೂ ವಾಡಿ ಗ್ರಾಮಗಳ ವಿದ್ಯಾರ್ಥಿಗಳು ಬುಧವಾರ ಸಂಜೆ ಮಳೆ ನಡುವೆಯೇ ಕೆಲ ಸಮಯ ಸಂಚಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಶಾಲೆ ಮುಗಿದ ಬಳಿಕ ಸಂಜೆ 4.30ರಿಂದ 7ರವರೆಗೆ ಬಸ್ ಬಾರದೆ ವಿದ್ಯಾರ್ಥಿಗಳು ಮಳೆಯಲ್ಲೇ ರಸ್ತೆ ಬದಿಯಲ್ಲಿ ಕಾಯುವಂತಾಯಿತು. ಸಾರಿಗೆ ಇಲಾಖೆಯ ರ್ನಿಲಕ್ಷ$್ಯ ಖಂಡಿಸಿ ವಿದ್ಯಾರ್ಥಿಗಳು ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಾತನಾಡಿ, ಶಾಲೆಗಳು ಆರಂಭವಾದ ದಿನದಿಂದಲೂ ಪ್ರತಿನಿತ್ಯ ಇದೇ ಸಮಸ್ಯೆ ಎದುರಾಗುತ್ತಿದೆ. ಸಂಜೆ ಸಮಯಕ್ಕೆ ಬಸ್ ಸಿಗದ ಕಾರಣ ರಾತ್ರಿ 8 ಗಂಟೆಯಾದರೂ ಮನೆ ತಲುಪಲು ಸಾಧ್ಯವಾಗುತ್ತಿಲ್ಲ. ಮಳೆ, ಕತ್ತಲೆ ಹಾಗೂ ಸುರಕ್ಷತಾ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಕೂಡಲೇ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಸ್ಥಳಿಯರು ಹಾಗೂ ಪಾಲಕರು ವಿದ್ಯಾರ್ಥಿಗಳ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.
ಈ ಮಧ್ಯೆ ವಾಹನದಲ್ಲಿ ಹೋಗುತ್ತಿದ್ದ ಕಲಬುರಗಿಯ ಪೊಲೀಸ್ ಅಧಿಕಾರಿಯೊಬ್ಬರು ಮಕ್ಕಳೊಂದಿಗೆ ಮಾತನಾಡಿ, ನಿಮ್ಮ ಸಮಸ್ಯೆ ಬಗ್ಗೆ ಸಂಬಂಧಿತರ ಗಮನಕ್ಕೆ ತರುತ್ತೇನೆ ಈಗ ಸಮಯವಾಗಿದ್ದು ಮಳೆಯಾಗುತ್ತಿದೆ ಎಂದು ಹೇಳಿದ್ದರಿಂದ ವಿದ್ಯಾರ್ಥಿಗಳು ಸಂಚಾರ ತಡೆ ಕೈಬಿಟ್ಟಿದ್ದಾರೆ ಎಂದು ಗ್ರಾಮಸ್ಥರಿಂದ ತಿಳಿದುಬಂದಿದೆ.