ಚಿತ್ತಾಪುರ ತಾಲೂಕಿನ ಮೊಗಲಾದಿಂದ ಮಳಖೇಡದ ರಾಜಶ್ರೀ ಸಿಮೆಂಟ್​ ಕಂಪನಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯ ದುಸ್ಥಿತಿ. 
ರಾಜ್ಯ

ಮಣ್ಣಿನ ರಸ್ತೆಯಲ್ಲಿ ಸಂಚಾರ ಹೈರಾಣ

ಪ್ರಮುಖ ಮುಖ್ಯಾಂಶಗಳು

  • ಮೊಗಲಾ-ಮಳಖೇಡ ರಸ್ತೆಗೆ ಕೂಡಿಬಾರದ ಕಾಲ
  • ನಿತ್ಯವೂ ತಗ್ಗು-ದಿನ್ನೆಗಳ ರೋಡಿನಲ್ಲಿ ಓಡಾಟ
ಚಿತ್ತಾಪುರ: ತಗ್ಗು-ದಿನ್ನೆಗಳು, ವಿಪರೀತ ಧೂಳು, ಮಳೆಗಾಲದಲ್ಲಂತೂ ಸಂಪೂರ್ಣ ಕೆಸರುಮಯ ರೋಡ್​.. ಇದು ಮೊಗಲಾದಿಂದ ಮಳಖೇಡದ ರಾಜಶ್ರೀ ಸಿಮೆಂಟ್​ ಕಂಪನಿಗೆ ಸಂಪರ್ಕಿಸುವ ಕಚ್ಚಾ ರಸ್ತೆಯ ಸ್ಥಿತಿಯಾಗಿದೆ.
ಮೊಗಲಾ ಗ್ರಾಮದಿಂದ ಕೇವಲ 3 ಕಿಮೀ. ದೂರದಲ್ಲಿರುವ ಮಳಖೇಡದ ರಾಜಶ್ರೀ ಸಿಮೆಂಟ್​ ಕಂಪನಿಗೆ ಸಮರ್ಪಕ ರಸ್ತೆ ಇಲ್ಲದೇ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಸೇಡಂನ ಉದ್ಯಮಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ರಸ್ತೆಗಾಗಿಯೇ 30 ಫೀಟ್​ ಸ್ಥಳ ಮೀಸಲಿಡಲಾಗಿದೆ. ಕಳೆದ 20 ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಜನರ ಒತ್ತಡ ಮೇರೆಗೆ ಆಗಾಗ್ಗೆ ಅಧಿಕಾರಿಗಳು ಒಂದಿಷ್ಟು ಮಣ್ಣು ಹಾಕಿ ದುರಸ್ತಿ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.
ತಗ್ಗು-ದಿನ್ನೆಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರ. ಹಗಲಿನಲ್ಲಿ ಹೇಗಾದರೂ ಬಿದ್ದು, ಎದ್ದು ಸಂಚಾರ ಮಾಡಬಹುದು, ಆದರೆ ರಾತ್ರಿ ಹೊತ್ತಲ್ಲಿ ಸಂಚಾರ ದುಸ್ತರವಾಗಿದೆ. ಮಳೆಗಾಲದಲ್ಲಂತೂ ವಾಹನಗಳು ಹೋಗುವಂತಿಲ್ಲ. ಈ ರಸ್ತೆಯಿಂದ ರಾಜಶ್ರೀ ಸಿಮೆಂಟ್​ ಕಂಪನಿಗೆ ಹೋಗಲು ನೌಕರರಿಗೆ ಅನುಕೂಲವಾಗುತ್ತದೆ. ಅಲ್ಲದೆ ಜಮೀನುಗಳಿಗೆ ಹೋಗಲು ರೈತರಿಗೆ ನೆರವಾಗುತ್ತದೆ. ಇದೆಲ್ಲದ್ದಕ್ಕಿಂತಲೂ ಚಿತ್ತಾಪುರದಿಂದ ಮಳಖೇಡ ಹಾಗೂ ಸೇಡಂಗೆ ಸಂಚರಿಸಲು ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ.
ಮೊಗಲಾದಿಂದ ಮಳಖೇಡಕ್ಕೆ ರಸ್ತೆ ನಿರ್ಮಾಣ ಆಗದಿರುವುದರಿಂದ ಸದ್ಯ ಪ್ರಯಾಣಿಕರು, ನೌಕರರು 27 ಕಿಮೀ. ಸಂಚರಿಸಿ ಮಳಖೇಡ ತಲುಪುತ್ತಿದ್ದಾರೆ. ಮೊಗಲಾದಿಂದ ರಾಜಶ್ರೀ ಸಿಮೆಂಟ್​ ಕಂಪನಿ ಗೇಟ್​ವರೆಗಿನ 3 ಕಿಮೀ. ರಸ್ತೆ ಚಿತ್ತಾಪುರ ಹಾಗೂ ಸೇಡಂ ವಿಧಾನಸಭೆ ಕ್ಷೇತ್ರಕ್ಕೆ ಸೇರಿದೆ. ಗ್ರಾಮಸ್ಥರು ಈಗಾಗಲೇ ಸಚಿವರಾದ ಪ್ರಿಯಾಂಕ್​ ಖರ್ಗೆ ಹಾಗೂ ಡಾ.ಶರಣಪ್ರಕಾಶ ಪಾಟೀಲ್​ ಅವರಿಗೂ ಮನವಿ ಸಲ್ಲಿಸಿದ್ದು, ಈವರೆಗೂ ಪ್ರಯೋಜನವಾಗಿಲ್ಲ. ಅಲ್ಲದೆ ಕಂಪನಿಯೂ ಜನರ ಮನವಿಗೆ ಕ್ಯಾರೆ ಎನ್ನುತ್ತಿಲ್ಲ.
ಈಗಲಾದರೂ ಸಂಬಂಧಪಟ್ಟವರು ಗಮನಿಸಿ 3 ಕಿಮೀ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.