ನಾಗಲಿಂಗೇಶ್ವರ ಕಾಲನಿ ಮುಖ್ಯರಸ್ತೆಯ ಕಿರು ಸೇತುವೆ ದುರಸ್ತಿಗೆ ಒತ್ತಾಯಿಸಿ ವಾರ್ಡ್​ 1ರ ನಿವಾಸಿಗಳು ಯಡ್ರಾಮಿ ಪಟ್ಟಣ ಪಂಚಾಯಿತಿ ಕಚೇರಿ ಗೇಟ್​ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಅಪ್ಪುಗೌಡ ಪಾಟೀಲ್​, ಚನ್ನವಿರ ತಾಳಿಕೋಟಿ, ಸತೀಶ ಗುರಶೆಟ್ಟಿ, ನಿಂಗರಾಜ ಜಾಲಿಬೆಂಚಿ, ಜಗದೀಶ ಲಗಳಿ ಇತರರಿದ್ದರು. 
ರಾಜ್ಯ

ಸೇತುವೆ ದುರಸ್ತಿಗಾಗಿ ಪಪಂ ಕಚೇರಿಗೆ ಬೀಗ

ಪ್ರಮುಖ ಮುಖ್ಯಾಂಶಗಳು

  • ಯಡ್ರಾಮಿಯಲ್ಲಿ ವಾರ್ಡ್​ 1ರ ನಿವಾಸಿಗಳಿಂದ ಪ್ರತಿಭಟನೆ
  • ಮುಖ್ಯಾಧಿಕಾರಿ ಭರವಸೆ ಹೋರಾಟ ವಾಪಸ್​
ಯಡ್ರಾಮಿ: ಒಡೆದು ಹೋಗಿ ಅಪಾಯದ ಹಂತ ತಲುಪಿರುವ ನಾಗಲಿಂಗೇಶ್ವರ ಕಾಲನಿಯ ಪ್ರಮುಖ ರಸ್ತೆಯಲ್ಲಿರುವ ಕಿರು ಸೇತುವೆ ದುರಸ್ತಿ ಮಾಡುವಂತೆ ಒತ್ತಾಯಿಸಿ ವಾರ್ಡ್​ 1ರ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಸೋಮವಾರ ಹೋರಾಟ ಮಾಡಿದರು.
ಪರಿಶಿಷ್ಟ ಜಾತಿ, ಬಿಸಿಎಂ ವಸತಿ ನಿಲಯ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ವಾರ್ಡ್​ ನಿವಾಸಿಗಳು ಸೇರಿ ಸಾಕಷ್ಟು ಜನರು ನಿತ್ಯ ಸೇತುವೆ ಮಾರ್ಗದಲ್ಲಿ ಒಡಾಡುತ್ತಾರೆ. ಅಲ್ಲದೆ ವೀರಶೈವ ಲಿಂಗಾಯತ ರುದ್ರಭೂಮಿ, ಖಬರಸ್ತಾನ್​ಗೆ ತೆರಳುವರಿಗೆ ಇದೆ ರಸ್ತೆ ಆಸರೆಯಾಗಿದೆ. ಹೀಗಿದ್ದರೂ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.
ಕಳೆದ ಎರಡು ವರ್ಷದ ಹಿಂದೆಯೇ ಕಿರು ಸೇತುವೆ ಒಡಿದು ಹೋಗಿತ್ತು. ಅದನ್ನು ಮರು ನಿರ್ಮಾಣ ಮಾಡುವ ಬದಲು ಅದಕ್ಕೆ ಮಣ್ಣು ತುಂಬಿ ಸುಮ್ಮನಾಗಿದ್ದರು. ಇದೀಗ ಕಳೆದ ಆರು ತಿಂಗಳ ಹಿಂದೆ ಮತ್ತದೆ ಕಿರು ಸೇತುವೆ ಒಡೆದಿದ್ದು, ಸೇತುವೆ ಪಕ್ಕದಲ್ಲಿ ಮಣ್ಣು ಹಾಕಿ ತಾತ್ಕಾಲಿಕ ರಸ್ತೆ ಮಾಡಿದ್ದಾರೆ. ಆದರೆ ಮಳೆ ಬಂದಾಗ ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಲವು ಬೈಕ್​ ಸವಾರರು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಅಧಿಕಾರಿಗಳು ರ್ನಿಲಕ್ಷ ವಹಿಸದೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಕಚೇರಿ ತೆರೆಯಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಬಳಿಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಮ ಭಜಂತ್ರಿ ಅವರು ಪ್ರತಿಭಟನಾಕಾರರಿಗೆ ಕರೆ ಮಾತನಾಡಿ, ಎರಡು ದಿನಗಳ ಕಾಲಾವಕಾಶ ನೀಡಿ, ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಪ್ರಮುಖರಾದ ಅಪ್ಪುಗೌಡ ಪಾಟೀಲ್​, ಚನ್ನವಿರ ತಾಳಿಕೋಟಿ, ಜಗದೀಶ ಲಗಳಿ, ಸತೀಶ ಗುರಶೆಟ್ಟಿ, ನಿಂಗರಾಜ ಜಾಲಿಬೆಂಚಿ, ಮುದುಕಪ್ಪ ಗುಂಡಾನವರ, ರಿಯಾಜ್​, ಬಸವರಾಜ, ಮಶಾಕ್​, ಆನಂದ ಇತರರಿದ್ದರು.