ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ರಸ್ತೆಗಿಳಿದ ಗಜರಾಜ ವಾಹನಗಳವರ ಎದೆಯಲ್ಲಿ ಭೀತಿಯುಟ್ಟಿಸಿದ್ದಾನೆ. 
ರಾಜ್ಯ

ರಸ್ತೆಗಿಳಿದ ಆನೆ ಕಂಡು ಪ್ರವಾಸಿಗರು ಆತಂಕ

ಗುಂಡ್ಲುಪೇಟೆ: ಬಂಡೀಪುರ ಊಟಿ ರಸ್ತೆಯಲ್ಲಿ ರಸ್ತೆಗಿಳಿದ ಗಜರಾಜ ಸ್ವಲ್ಪ ಹೊತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಘಟನೆ ನಡೆದಿದೆ.

ಬುಧವಾರ ಮಧ್ಯಾಹ್ನ ವಾಹನಗಳ ಸಂಚಾರ ಕಡಿಮೆಯಿದ್ದ ಸಂದರ್ಭದಲ್ಲಿ ರಸ್ತೆಗಿಳಿದ ಗಜರಾಜನನ್ನು ಕಂಡ ಪ್ರವಾಸಿಗರು ಆತಂಕಕ್ಕೊಳಗಾದರು. ಕೂಡಲೇ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಿ ಆನೆ ದಾಟಿಹೋಗಲು ಅವಕಾಶ ಮಾಡಿಕೊಟ್ಟರು. ಇದರಿಂದ ಸ್ವಲ್ಪ ಹೊತ್ತು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು. ಆದರೆ ಜಗರಾಜ ಮಾತ್ರ ಕಾಡಿನತ್ತ ಹೆಜ್ಜೆ ಹಾಕದೆ ಕಾರೊಂದರ ಬಳಿ ಹೋಗುತ್ತಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿಗಟ್ಟಿದರು. ಕೆಲವು ದಿನಗಳ ಹಿಂದೆ ಆನೆಗಳ ಹಿಂಡು ರಸ್ತೆಯ ನಡುವಿನಲ್ಲಿ ನಡೆದುಬಂದ ಕಾರಣ ಅವುಗಳಿಗೆ ದಾರಿ ಕೊಡಲು ವಾನಹಗಳನ್ನು ಹಿಂದಕ್ಕೆ ತಿರುಗಿಸಿದ ಘಟನೆ ಮರೆಯುವ ಮೊದಲೇ ಒಂಟಿ ಸಲಗ ರಸ್ತೆಗಿಳಿದಿದ್ದಾನೆ.

ಕಳೆದ ಎರಡು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಎದುರಾಗುತ್ತಿದ್ದ ಆನೆಯೊಂದು ತರಕಾರಿ ಹಣ್ಣಿನ ಟೆಂಪೋಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿತ್ತು. ಹೆದ್ದಾರಿಯಲ್ಲಿ ಅಳವಡಿಸಿರುವ ಹಂಪ್ಸ್ ಸಮೀಪ ಈ ವಾಹನಗಳು ತಮ್ಮ ವೇಗ ಕಡಿಮೆ ಮಾಡುತ್ತಿದ್ದಂತೆ ಸೊಂಡಿಲು ಹಾಕಿ ಹಣ್ಣು ತರಕಾರಿ ಚೀಲಗಳನ್ನು ಹೊರಗೆಳೆದು ತಿನ್ನುತ್ತಿದ್ದ ಆನೆ ಸ್ವಲ್ಪಕಾಲ ತರಕಾರಿ ಲಾರಿಗಳು ಹಾಗೂ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು.
ಹೆದ್ದಾರಿಯಲ್ಲಿ ಹೆಚ್ಚಿನ ಗಸ್ತು ನಡೆಸುವ ಮೂಲಕ ಅರಣ್ಯ ಸಿಬ್ಬಂದಿ ಆನೆಯನ್ನು ರಸ್ತೆಗೆ ಬರದಂತೆ ತಡೆಗಟ್ಟುತ್ತಿದ್ದರು. ನಂತರ ಆನೆಯ ಕಾಟ ತಪ್ಪಿದ್ದರೂ ಇತ್ತೀಚೆಗೆ ಆನೆಯೊಂದು ರಸ್ತೆಗೆ ಬರುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವು ತಂದಿದೆ.