ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ( ಟ್ರೀ ಪಾರ್ಕ್) ಕಾಮಗಾರಿಯನ್ನು ಮಂಗಳವಾರ ಶಾಸಕ ಸಿ. ಎಸ್.ನಾಡಗೌಡ ಪರಿಶೀಲಿಸಿದರು. ಬಸನಗೌಡ ಬಿರಾದಾರ, ಶರಣು ಸಜ್ಜನ, ವೆಂಕನಗೌಡ ಪಾಟೀಲ, ಡಾ, ವಿರೇಶ ಪಾಟೀಲ ಮತ್ತಿತರರಿದ್ದರು. 
ರಾಜ್ಯ

ಟ್ರೀ ಪಾರ್ಕ್ ನಿರ್ಮಾಣದಿಂದಾಗಿ ಪ್ರವಾಸೋದ್ಯಮ ಉತ್ತೇಜನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎಸ್. ನಾಡಗೌಡ ಅಭಿಮತ
  • ಸಾಲುಮರದ ತಿಮ್ಮಕ್ಕ ಉದ್ಯಾನವನ ಕಾಮಗಾರಿ ಪರಿಶೀಲನೆ
  • ಸೌಂದರ್ಯ ಮೌಲ್ಯ ಹೆಚ್ಚಳ
ಮುದ್ದೇಬಿಹಾಳ : ಟ್ರೀ ಪಾರ್ಕ್ ನಿರ್ಮಾಣದಿಂದಾಗಿ ಸ್ಥಳೀಯವಾಗಿ ಹಸಿರು ಆವರಣ ಹೆಚ್ಚಳವಾಗುವುದು. ಜೈವಿಕ ವೈವಿಧ್ಯತೆ ಬೆಳೆದು ಬರುವುದು, ಹಕ್ಕಿ ಮತ್ತು ಚಿಟ್ಟೆಗಳಿಗೆ ಉತ್ತಮ ವಾಸಸ್ಥಳ ಸಿಗುವುದರ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದು ಶಾಸಕ ಸಿ. ಎಸ್.ನಾಡಗೌಡ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೆಆರ್‌ಐಡಿಎಲ್ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನ( ಟ್ರೀ ಪಾರ್ಕ್) ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಯ ಜತೆಗೆ ಈ ಪ್ರದೇಶದ ಸೌಂದರ್ಯ ಮೌಲ್ಯವೂ ಹೆಚ್ಚಳವಾಗುವುದು. ವೀಕ್ಷಕರಿಗಾಗಿ ಬಟರ್‌ಪ್ಲೈ ಗಾರ್ಡನ್, ಕ್ಯಾಕ್ಟಸ್ ತೋಟ, ವಾಟರ್‌ರ್ಂಟ್ ಸ್ಟೆಪ್ಸ್, ಪ್ಲೇ ಏರಿಯಾ, ಪರ್ಗೊಲಾ, ಹ್ಯಾಂಗಿಂಗ್ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಸದ್ಯ ಮುದ್ದೇಬಿಹಾಳ ಪಟ್ಟಣ ಹಾಗೂ ತಾಲೂಕಿನ ಜನರಿಗೆ ಒಂದು ಒಳ್ಳೆಯ ಕಾಡು ಜತೆಗೆ ಸುಂದರ ಉದ್ಯಾನವನ ನಿರ್ಮಿಸಬೇಕು ಎಂಬ ಉದ್ದೇಶದಿಂದ ಟ್ರೀ ಪಾರ್ಕ್‌ಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್ ಪಥ, ಪ್ರಕೃತಿ ಹಾದಿಗಳು, ಕುಡಿಯುವ ನೀರಿನ ಸೌಲಭ್ಯಗಳು, ಮಕ್ಕಳ ಆಟದ ಪ್ರದೇಶ, ಶೌಚಾಲಯ ಸೇರಿ ಮುಂತಾದ ಮೂಲ ಸಾರ್ವಜನಿಕ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಟ್ರೀ ಪಾರ್ಕ್ ಯೋಜನೆಯು ನಗರವಾಸಿಗಳಿಗೆ ನೈಸರ್ಗಿಕ ಪರಿಸರವನ್ನು ಒದಗಿಸಲು ಮತ್ತು ಅವರಲ್ಲಿ ಪ್ರಕೃತಿಯ ಬಗ್ಗೆ ಮೆಚ್ಚುಗೆಯನ್ನು ಹೆಚ್ಚಿಸಲು ಗುರಿಯನ್ನು ಹೊಂದಿದೆ ಎಂದರು.
ಮುರುಡೇಶ್ವರ ಹಾಗೂ ವಿಜಯಪುರ ಸೇರಿ ಅನೇಕಗಳಲ್ಲಿರುವ ಬೃಹದಾಕಾರದ ಶಿವನ ಮೂರ್ತಿ ನಿರ್ಮಿಸುವ ಜತೆಗೆ ಜಂಗಲ್ ಲಾಡ್ಜ್ ಸೇರಿ ವಿವಿಧ ಪ್ರಾಣಿ ಹಾಗೂ ಪಕ್ಷಿಗಳನ್ನು ಕರೆ ತಂದು ಪ್ರಾಣಿ ಸಂಗ್ರಾಲಯ, ಪಕ್ಷಿಧಾಮ, ವಿವಿಧ ಬಗೆ ಬಗೆಯ ಹೂವು ಹಣ್ಣುಗಳ, ಜತೆಗೆ ಸೌಂದರ್ಯ, ಆಯುರ್ವೇದ ಗಿಡಗಳನ್ನು ನೆಡಲಾಗುವುದು. ಹಾಗೂ ಕೃಷ್ಣಾ ನದಿಯ ನೀರನ್ನು ಹರಿಸಿ ಕೆರೆ ನಿರ್ಮಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗುವುದು ಎಂದರು.
ಕಳೆದ ಸೆ.1ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ, ಕಾನೂನು ಸಂಸದಿಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಈ ಪಾರ್ಕಿಗೆ 3 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದ ಹಿನ್ನೆಲೆ ಸದ್ಯ ಶಾಸಕರ ನಿಧಿಯಿಂದ 25 ಲಕ್ಷ ರೂ.ಗಳನ್ನು ನೀಡುವುದರ ಜತೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನದ ಮೂಲಕ ಟ್ರೀ ಪಾರ್ಕ್‌ನ್ನು ಅಭಿವೃದ್ಧಿ ಪಡಿಸುವ ಮೂಲಕ ಅತ್ಯುತ್ತಮವಾದ ಹೈಟೆಕ್ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.
ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಬಸನಗೌಡ ಬಿರಾದಾರ, ಉದ್ಯಮಿ ಶರಣು ಸಜ್ಜನ, ವೆಂಕನಗೌಡ ಪಾಟೀಲ, ಡಾ, ವಿರೇಶ ಪಾಟೀಲ, ಸಂಗನಗೌಡ ಬಿರಾದಾರ ಬಾಪುಗೌಡ ಪಿರಾಪೂರ, ಸಂಗಮೇಶ ನಾವದಗಿ, ಮುರಳಿಕೃಷ್ಣ ಬುಡ್ಡೋಡಗಿ, ಸುರೇಶ ನಾಡಗೌಡ, ಮೈಬೂಬ ಗೊಳಸಂಗಿ, ಮಹಾಬಳೇಶ ಗಡೇದ, ವಿರುಪಾಕ್ಷಿ ಪತ್ತಾರ, ಅರಣ್ಯ ಇಲಾಖೆ ಅಧಿಕಾರಿಗಳಾದ ಗಿರೀಶ ಹಲಕುಡೆ, ಯಲಾರಗುರಪ್ಪ ಗುಬ್ಬಿ, ವಿನಾಯಕ ಬೊಂಬಾಳೆ ಮತ್ತಿತರರಿದ್ದರು.