ಗೌಡೂರು ಗ್ರಾಮ ಪಂಚಾಯಿತಿ ಹೊರನೋಟ.
- ಹಟ್ಟಿ ಭಾಗದಲ್ಲಿ ಮೂರು ತಿಂಗಳಾದರೂ ಶುರುವಾಗದ ಖರೀದಿ ಕೇಂದ್ರ
- ಖಾಲಿ ಚೀಲ, ಲಾರಿಗಳಿಲ್ಲವೆಂದು ನೆಪ
ಹಟ್ಟಿಚಿನ್ನದಗಣಿ: ಜಿಲ್ಲಾಧಿಕಾರಿ ಆದೇಶದಂತೆ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ರೈತ ಉತ್ಪಾದಕ ಕಂಪನಿಗಳ ಮೂಲಕ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕಿತ್ತು. ಆದರೆ, ಮೂರ‌್ನಾಲ್ಕು ತಿಂಗಳು ಕಳೆದರೂ ಬಾಗಿಲು ತೆರೆಯದ ಕಾರಣ ರೈತರು ಧಾನ್ಯ ಕಾಪಾಡಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.
ಈ ಭಾಗದ ಗೌಡೂರು, ರೋಡಲಬಂಡಾ, ಗುರುಗುಂಟಾ, ಹಿರೇನಗನೂರು, ಗುಡುದನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತೊಗರಿ ಬೆಳೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಲು ಗೌಡೂರು ಗ್ರಾಮ ಪಂಚಾಯಿತಿಯಲ್ಲಿ ಆನ್‌ಲೈನ್ ಮೂಲಕ ರೈತರಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ, ಈವರೆಗೆ ಖರೀದಿ ಕೇಂದ್ರಗಳ ಆರಂಭವಾಗದ ಕಾರಣ ನೋಂದಣಿ ಮಾಡಿಸಿದ ರೈತರು ಕಚೇರಿಗಳ ಸುತ್ತ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಖಾಲಿ ಚೀಲಗಳಿಲ್ಲ, ತೂಕದ ಯಂತ್ರಗಳಿಲ್ಲ, ಲಾರಿಗಳಿಲ್ಲ ಎಂಬ ಹಾಸ್ಯಾಸ್ಪದ ಕಾರಣಗಳನ್ನು ಹೇಳುತ್ತ ಖರೀದಿ ಕೇಂದ್ರಗಳ ನಿರ್ವಾಹಕರು ಕೈಕಟ್ಟಿ ಕುಳಿತಿದ್ದಾರೆ. ಒಂದು ಕಡೆ ಅತಿಯಾದ ಮಳೆಯಿಂದ ಈ ವರ್ಷ ತೊಗರಿ ಇಳುವರಿ ಕುಸಿದಿದೆ. ಇನ್ನೊಂದೆಡೆ ಕಳೆದ ಮೂರು ತಿಂಗಳಿನಿಂದ ಬೆಳೆದ ತೊಗರಿ ಮನೆಯಲ್ಲಿಯೇ ಇಟ್ಟುಕೊಂಡಿದ್ದು, ಕಾಪಾಡುವುದು ಸವಾಲಾಗಿದೆ.
ಕೂಲಿ, ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಏರಿಕೆಯಿಂದ ರೈತ ಈಗಾಗಲೇ ಸಾಲದ ಬಲೆಗೆ ಸಿಲುಕಿದ್ದಾನೆ. ಇಂತಹ ಸಂದರ್ಭದಲ್ಲಿ ಬೆಂಬಲ ಬೆಲೆ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕಿದ್ದ ಸರ್ಕಾರ ಕೇವಲ ಆನ್‌ಲೈನ್ ನೋಂದಣಿಯ ನಾಟಕವಾಡಿ ಕೈತೊಳೆದುಕೊಂಡಂತಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿದಿರುವುದರಿಂದ ರೈತರು ಖಾಸಗಿ ವ್ಯಾಪಾರಿಗಳಿಗೆ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಖರೀದಿ ಕೇಂದ್ರ ಆರಂಭಿಸಿ ರೈತರಿಂದ ತೊಗರಿ ಖರೀದಿಗೆ ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.
"
ಖರೀದಿ ಕೇಂದ್ರದವರು ನಮ್ಮ ಹತ್ತಿರ ಖಾಲಿ ಚೀಲಗಳಿಲ್ಲ, ತೂಕದ ಯಂತ್ರ ಕೆಟ್ಟುಹೋಗಿದೆ ಎಂದು ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಸುಳ್ಳು ಹೇಳುತ್ತಿದ್ದಾರೆ. ತೊಗರಿ ತುಂಬಲು ಚೀಲಗಳೇ ಇಲ್ಲವೆಂದರೆ ರೈತರ ಗತಿ ಏನು? ಮನೆಯಲ್ಲಿಯೇ ಇಟ್ಟುಕೊಂಡ ತೊಗರಿ ಧಾನ್ಯ ಹುಳು ತಿಂದು ಹಾಳಾಗುತ್ತಿದೆ. ಜಿಲ್ಲಾಡಳಿತ ಕಣ್ತೆರೆದು ತೊಗರಿ ಕೇಂದ್ರವನ್ನು ಆರಂಭ ಮಾಡಬೇಕು. ಇಲ್ಲವಾದಲ್ಲಿ ಲಿಂಗಸಗೂರು ಎಸಿ ಕಚೇರಿ ಮುಂದೆ ನಾವು ಬೆಳೆದ ತೊಗರಿ ಧಾನ್ಯದ ಚೀಲಗಳನ್ನು ಇಟ್ಟು ಪ್ರತಿಭಟನೆ ನಡೆಸಲಾಗುವುದು.
— | ಮಲ್ಲಣ್ಣ ಕೋಳೂರು, ರೈತ ಸಂಘದ ತಾಲೂಕಾಧ್ಯಕ್ಷ
"
ಖಾಲಿ ಚೀಲಗಳಿಲ್ಲದ ಕಾರಣ ತೊಗರಿಯನ್ನು ರೈತರಿಂದ ಖರೀದಿಸಲಾಗುತ್ತಿಲ್ಲ. ಸರ್ಕಾರ ಚೀಲಗಳನ್ನು ನೀಡಿದರೆ ತೊಗರಿ ಕೇಂದ್ರ ಮತ್ತೆ ಆರಂಭಿಸಿ ಖರೀದಿ ಮಾಡುತ್ತೇವೆ
— ಗುರುನಗೌಡ, ಆರೂಢ ರೈತ ಉತ್ಪಾದಕ ಕಂಪನಿ(ಎಫ್‌ಪಿಒ) ಗುಡದನಾಳ