- ಎಫ್ಐಆರ್ ರದ್ದುಕೋರಿ ಅರ್ಜಿ
- ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ಬೆಂಗಳೂರು: ಜಮೀನು ವ್ಯಾಜ್ಯವೊಂದರಲ್ಲಿ ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಅತಿಕ್ರಮಣ ಪ್ರವೇಶ ಮಾಡಿ, ದೌರ್ಜನ್ಯ ನಡೆಸಿದ ಆರೋಪದ ಮೇಲೆ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಟಿ.ಎನ್. ಸೀತಾರಾಮ್ ಮತ್ತು ಅವರ ಸಹೋದರಿ ಕೆ.ಎಸ್. ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹಸನಘಟ್ಟ ಗ್ರಾಮದಲ್ಲಿ ಸುಮಾರು 5 ಎಕರೆ ಜಮೀನಿಗೆ ಸಂಬಂಧಿಸಿ ಈ ಎಫ್ಐಆರ್ ದಾಖಲಾಗಿದೆ. ದೂರುದಾರರ ಪ್ರಕಾರ, ಸೀತಾರಾಮ್ ಅವರು 1977ರಲ್ಲೇ ಈ ಜಮೀನನ್ನು ರಾಮಯ್ಯ ಎಂಬುವರಿಗೆ ಮಾರಾಟ ಮಾಡಿದ್ದರು. ನಂತರದ ದಿನಗಳಲ್ಲಿ ಈ ಜಮೀನು ಅಡವಿಯಪ್ಪ ಎಂಬುವರ ವಾರಸುದಾರರಾದ ಅರವಿಂದ ಕುಮಾರ್ ಮತ್ತು ಜಗದೀಶ್ ಅವರ ಸ್ವಾಧಿನಕ್ಕೆ ಬಂದಿತ್ತು. ಆದರೆ, ಈ ಜಮೀನಿನಲ್ಲಿ 1 ಎಕರೆ 26 ಗುಂಟೆ ಜಮೀನು ಇನ್ನೂ ತಮ್ಮ ಹೆಸರಿನಲ್ಲೇ ಇದೆ ಎಂದು ಪ್ರತಿಪಾದಿಸಿರುವ ಸೀತಾರಾಮ್, ಎನ್. ರಾಕೇಶ್ ಎಂಬುವರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. 2026ರ ಮೇ 1ರಂದು ರಾತ್ರಿ ವೇಳೆ ಸೀತಾರಾಮ್ ಮತ್ತು ತಂಡವು 100ಕ್ಕೂ ಹೆಚ್ಚು ಜನರೊಂದಿಗೆ ಮಾರಾಕಾಸ್ತ್ರಗಳೊಡನೆ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್ ಕೆಡವಿ, ಸಿಸಿಟಿವಿ ನಾಶಪಡಿಸಿದ್ದಾರೆ ಎಂಬುದು ದೂರಲಾಗಿದೆ.
ಗಂಭೀರ ಆರೋಪ:
ದೂರಿನಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತಂದಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಸ್ಥಳದಲ್ಲಿದ್ದ ಕೆಲಸಗಾರರನ್ನು ಕೂಡಿಹಾಕಿ, ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ದೌರ್ಜನ್ಯ ಎಸಗಲಾಗಿದೆ ಎಂದು ಎಫ್ಐಆರ್ನಲ್ಲಿ ವಿವರಿಸಲಾಗಿದೆ. ಸೀತಾರಾಮ್, ವಿಜಯಲಕ್ಷ್ಮೀ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.