ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿಗೆ ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಭಾಜನ
- * ವಿಎಸ್‌ಕೆ ಮಾಧ್ಯಮ ಪ್ರಶಸ್ತಿಗಳ ಪ್ರಕಟ
ಬೆಂಗಳೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವಿಭಾಗದ ವತಿಯಿಂದ ನೀಡುವ ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪ್ರಕಟಗೊಂಡಿದ್ದು, 2026ನೇ ಸಾಲಿನ ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿಗೆ ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಭಾಜನರಾಗಿದ್ದಾರೆ.
ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ, ಎಂ.ವಿ. ಕಾಮತ್ ಪತ್ರಿಕೋದ್ಯಮ ಪ್ರಶಸ್ತಿಗೆ ಇಂಡಿಯಾ ಟುಡೇ ದಕ್ಷಿಣ ಭಾರತ ಆವೃತ್ತಿ ಸಂಪಾದಕ ನಾಗಾರ್ಜುನ ದ್ವಾರಕನಾಥ್, ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿಗೆ ಟಿವಿ-9 ಕನ್ನಡ ಮುಖ್ಯ ನಿರ್ಮಾಪಕ ರಂಗನಾಥ್ ಭಾರಧ್ವಜ್, ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಗೆ ಅಂಕಣಕಾರ ಡಾ. ಅರಕಲಗೂಡು ಸೂರ್ಯಪ್ರಕಾಶ್ ಹಾಗೂ ವಿ.ಎಸ್.ಕೆ. ಡಿಜಿಟಲ್ ಮಾಧ್ಯಮ ಪ್ರಶಸ್ತಿಗೆ ಆರ್‌ಜೆ, ಯೂಟ್ಯೂಬರ್ ರಶ್ಮಿ ಆರ್. ರಾವ್ (ರ‌್ಯಾಪಿಡ್ ರಶ್ಮಿ) ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ12ರ ಬೆಳಗ್ಗೆ 10.30ಕ್ಕೆ ಬಸವನಗುಡಿಯ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ್, ವಿಶ್ವ ಸಂವಾದ ಕೇಂದ್ರ ನಿರ್ವಾಹಕ ವಿಶ್ವಸ್ಥ ಡಾ. ಎಂ.ಕೆ. ಶ್ರೀಧರನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.