ತಿರುಪತಿ: ಕರ್ನಾಟಕದ ವಿವಿಧ ಭಾಗಗಳ ಹಿಂದುಳಿದ ಹಾಗೂ ಎಸ್‌ಸಿಎಸ್‌ಟಿ ಸಮುದಾಯಗಳನ್ನು ಪ್ರತಿನಿಧಿಸುವ 19 ಮಠಗಳ ಸ್ವಾಮೀಜಿಗಳು ತಿರುಮಲದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ವಿವಿಧ ಗುರುಪೀಠಗಳ ಆಧ್ಯಾತ್ಮಿಕ ನಾಯಕರನ್ನು ಒಂದೇ ಯಾತ್ರೆಯಲ್ಲಿ ಒಗ್ಗೂಡಿಸಿದ ಯಾತ್ರೆಯು ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವ ಪಡೆದುಕೊಂಡಿತು.
ಟಿಟಿಡಿ ಮಂಡಳಿ ಸದಸ್ಯ ಎಸ್.ನರೇಶ್ ಕುಮಾರ್ ಮುಂದಾಳತ್ವ ತೆಗೆದುಕೊಂಡು ಎಲ್ಲ ಮಠಾಧೀಶರಿಗೆ ಗೌರವಪೂರ್ಣ ದರ್ಶನದ ವ್ಯವಸ್ಥೆ ಕಲ್ಪಿಸುವಂತೆ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರಲ್ಲಿ ಮನವಿ ಮಾಡಿದ್ದರು. ಟಿಟಿಡಿ ನಿಯಮಾನುಸಾರ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತ ಪರಿಣಾಮ ದರ್ಶನ ಯಶಸ್ವಿಯಾಯಿತು.
ತಮ್ಮ ಮಠಗಳ ಮೂಲಕ ಶಿಕ್ಷಣ, ಸಾಮಾಜಿಕ ಸೇವೆ, ಆಧ್ಯಾತ್ಮಿಕ ಚಟುವಟಿಕೆ ಮತ್ತು ದುರ್ಬಲ ವರ್ಗಗಳ ಸಬಲೀಕರಣದಲ್ಲಿ ತೊಡಗಿಸಿಕೊಂಡಿರುವ ವಿವಿಧ ಮಠಾಧೀಶರು ಒಂದೇ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪ್ರಮುಖವಾಗಿ ಶ್ರೀಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶ್ರೀಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಶ್ರೀರೇಣುಕಾನಂದ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀಹಡಪದ ಅಪ್ಪಣ್ಣ ಸ್ವಾಮೀಜಿ, ಶ್ರೀದಯಾನಂದಪುರಿ ಸ್ವಾಮೀಜಿ, ಶ್ರೀಯಾದವಾನಂದ ಸ್ವಾಮೀಜಿ, ಶ್ರೀಶಿವಬಸವ ಸ್ವಾಮೀಜಿ, ಶ್ರೀಶಾಂತಲಿಂಗ ಸ್ವಾಮೀಜಿ, ಶ್ರೀ ಚೆನ್ನಬಸವ ಸ್ವಾಮೀಜಿ, ಶ್ರೀಮಹಾಲಿಂಗ ಸ್ವಾಮೀಜಿ, ಶ್ರೀಬಸವಪ್ರಸಾದ ಸ್ವಾಮೀಜಿ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಯಾತ್ರೆಯಲ್ಲಿ ಭಾಗವಹಿಸಿದ್ದರು.
ದರ್ಶನ ವ್ಯವಸ್ಥೆಗೆ ಸಹಕಾರ ನೀಡಿದ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು, ಇಒ ಮುಧದ್ ರವಿಚಂದ್ರ ಹಾಗೂ ಟಿಟಿಡಿ ಅಧಿಕಾರಿಗಳಿಗೆ ಎಸ್.ನರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದರು.