ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಸದ್ದು ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಬಿಸಿ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ತಟ್ಟಿದೆ. ಶುಕ್ರವಾರ (ಅ.16) ನಗರದ ಹೃದಯಭಾಗವಾದ ಟೌನ್ ಹಾಲ್ ಮುಂಭಾಗ CJP ಹಮ್ಮಿಕೊಂಡಿದ್ದ ‘ತಿರಂಗಾ ಮಾರ್ಚ್’ಗೆ ಬೆಂಗಳೂರು ಪೊಲೀಸರು ಕೊನೆ ಕ್ಷಣದಲ್ಲಿ ಬ್ರೇಕ್ ಹಾಕಿದ್ದಾರೆ.
ಹೈಕೋರ್ಟ್ ನಿಯಮಗಳ ಉಲ್ಲಂಘನೆ ಮತ್ತು ಸಂಚಾರ ದಟ್ಟಣೆಯ ಕಾರಣ ನೀಡಿ ಪೊಲೀಸರು ರ್ಯಾಲಿಗೆ ಅನುಮತಿ ನಿರಾಕರಿಸಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
CJP ಜೊತೆಗೆ ಜಾಗೃತ ಕರ್ನಾಟಕ ಹಾಗೂ ಮೈ ವೋಟ್, ಮೈ ರೈಟ್ ಸಂಘಟನೆಗಳು ಕೈಜೋಡಿಸಿ ಈ ಮೆರವಣಿಗೆಯನ್ನು ಆಯೋಜಿಸಿದ್ದವು. ಶುಕ್ರವಾರ ಸಂಜೆ 4 ಗಂಟೆಗೆ ಟೌನ್ ಹಾಲ್ನಿಂದ ಆರಂಭವಾಗಬೇಕಿದ್ದ ರ್ಯಾಲಿ, ಕೆಂಪೇಗೌಡ ರಸ್ತೆಯಲ್ಲಿರುವ ಮೈಸೂರು ಬ್ಯಾಂಕ್ ವೃತ್ತದ ‘ಕ್ವಿಟ್ ಇಂಡಿಯಾ ಸ್ಮಾರಕ’ದವರೆಗೆ ಸಾಗಬೇಕಿತ್ತು. ಸುಮಾರು 200 ರಿಂದ 300 ಕಾರ್ಯಕರ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಪೊಲೀಸರ ಎಂಟ್ರಿಯಿಂದ ರೆಡಿ ಮಾಡಿಕೊಂಡಿದ್ದ ಪ್ಲಾನ್ ಫ್ಲಾಪ್ ಆಗಿದೆ.
ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮೆರವಣಿಗೆ ನಡೆಸಿದರೆ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಜತೆಗೆ ಹೈಕೋರ್ಟ್ ಆದೇಶದ ಪ್ರಕಾರ, ನಗರದಲ್ಲಿ ಯಾವುದೇ ಪ್ರತಿಭಟನೆ ಅಥವಾ ರ್ಯಾಲಿ ನಡೆಸಬೇಕಾದರೂ ಅದಕ್ಕೆ 'ಫ್ರೀಡಂ ಪಾರ್ಕ್' ಮಾತ್ರ ಅಧಿಕೃತ ಜಾಗವಾಗಿದ್ದು, ಅದನ್ನು ಹೊರತು ಪಡಿಸಿ ಬೇರೆಲ್ಲೂ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ ಮಾಡುವಂತಿಲ್ಲ. ಈ ನಿಯಮ ಮುರಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಕಾರಣ ನೀಡಿ ಪೊಲೀಸರು ಅನುಮತಿ ತಿರಸ್ಕರಿಸಿದ್ದಾರೆ.
ಟೌನ್ ಹಾಲ್ನಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘಟಕರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಆದರೆ ನಿಯಮದ ಪ್ರಕಾರ ಫ್ರೀಡಂ ಪಾರ್ಕ್ ಬಿಟ್ಟು ಬೇರೆಲ್ಲೂ ಅನುಮತಿ ನೀಡಲು ಸಾಧ್ಯವಿಲ್ಲ. ಶಾಂತಿ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದೇವೆ, ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಭಟನಾಕಾರರು ಸರ್ಕಾರಕ್ಕೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಫ್ರೀಡಂ ಪಾರ್ಕ್ ಎಂಬ ಪ್ರತ್ಯೇಕ ಜಾಗವಿದೆ. ಟೌನ್ ಹಾಲ್ ಸಾರ್ವಜನಿಕರು ಓಡಾಡುವ ಜಾಗವೇ ಹೊರತು ಪ್ರತಿಭಟನಾ ತಾಣವಲ್ಲ, ಎಂದು ತಿಳಿಸಿದ್ದಾರೆ.
ಇತ್ತ ಪೊಲೀಸರ ನಡೆಗೆ ಆಯೋಜಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. CJP ಕರ್ನಾಟಕ ಸಂಯೋಜಕ ರಾಹುಲ್ ಜಾಗೃತ್ ಮಾತನಾಡಿ, ನಾವು ಈ ಮೊದಲೇ ಪೊಲೀಸರಿಗೆ ಪತ್ರ ನೀಡಿ ಮಾಹಿತಿ ಕೊಟ್ಟಿದ್ದೆವು. ನಮ್ಮದು ಸಂಪೂರ್ಣ ಶಾಂತಿಯುತ ಮೆರವಣಿಗೆಯಾಗಿತ್ತು. ಆದರೂ ನಮಗೆ ಯಾವುದೇ ಅಧಿಕೃತ ಆದೇಶ ಮುಟ್ಟಿಸಿಲ್ಲ, ಎಂದು ಆರೋಪಿಸಿದ್ದಾರೆ.
ಪೊಲೀಸರು ಅನುಮತಿ ನಿರಾಕರಿಸುತ್ತಿದ್ದಂತೆ, ಸಂಘಟಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಒಟ್ಟಿನಲ್ಲಿ ದೆಹಲಿಯ ಬೆನ್ನಲ್ಲೇ ಬೆಂಗಳೂರಿನಲ್ಲೂ ಸದ್ದು ಮಾಡಲು ಹೊರಟಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ ತಿರಂಗಾ ಮಾರ್ಚ್ಗೆ ಪೊಲೀಸರು ಆರಂಭದಲ್ಲೇ ಮೂಗುದಾರ ಹಾಕಿದ್ದಾರೆ, (ಏಜೆನ್ಸೀಸ್).