ಅಮಾವಾಸ್ಯೆ ಪ್ರಯುಕ್ತ ಸೋಮವಾರ ತಾಲೂಕಿನ ಶ್ರೀ ಕ್ಷೇತ್ರ ಕುರುಬನಕಟ್ಟೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 
ರಾಜ್ಯ

ಶ್ರೀ ಕ್ಷೇತ್ರ ಕುರುಬನಕಟ್ಟೆಗೆ ಭಕ್ತರ ದಂಡು

ಕೊಳ್ಳೇಗಾಲ: ಅಮಾವಾಸ್ಯೆ ಪ್ರಯುಕ್ತ ಸೋಮವಾರ ತಾಲೂಕಿನ ಶ್ರೀ ಕ್ಷೇತ್ರ ಕುರುಬನಕಟ್ಟೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶ್ರೀ ಕ್ಷೇತ್ರ ಕುರುಬನಕಟ್ಟೆಯ ಧರ್ಮಾಧಿಕಾರಿ ಶ್ರೀ ಬಿ.ಎಲ್. ವರುಣಲಿಂಗರಾಜೇ ಅರಸ್ ಅವರ ನೇತೃತ್ವದಲ್ಲಿ ಬೆಳಗ್ಗೆ ಚೆನ್ನಯ್ಯ ಮತ್ತು ಲಿಂಗಯ್ಯನವರ ಕಂಡಾಯಗಳ ಹೊಂಬಾಳೆ ಉತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಈ ವೇಳೆ ಕೊಂಬು, ಕಹಳೆ, ತಮಟೆ ಹಾಗೂ ನೀಲಗಾರರ ಜಾಗಟೆ ಶಬ್ದ ಮೊಳಗಿತು. ಬಳಿಕ ಸರತಿ ಸಾಲಿನಲ್ಲಿ ಭಕ್ತರು ಗದ್ದುಗೆಯ ದರ್ಶನವನ್ನು ಶ್ರದ್ಧಾಭಕ್ತಿಯಿಂದ ದರ್ಶನ ಮಾಡಿದರು. ಧೂಪದ ಹೊಂಡದಲ್ಲಿ ಕರ್ಪೂರ, ಧೂಪ ಹಚ್ಚಿ ಭಕ್ತಿ ಮೆರೆದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆ ದೇವಾಲಯ ಆವರಣದಲ್ಲಿರುವ ಕಾಯಿ ಹೊಡೆಸುವ ಸರತಿ ಸಾಲು ದೇವಾಲಯ ಹೊರಭಾಗದವರೆಗೂ ವಿಸ್ತರಣೆಗೊಂಡಿತ್ತು. ಗಂಟೆಗಟ್ಟಲೇ ಕಾದು ತಡೆ ಪೂಜೆ ಸಲ್ಲಿಸಿದರು. ಚಾಮರಾಜನಗರ ಸೇರಿದಂತೆ ಇನ್ನಿತರ ಜಿಲ್ಲೆಗಳ ಗ್ರಾಮಗಳಿಂದ ಸಾವಿರಾರು ಭಕ್ತರು ಬೈಕ್, ಕಾರು, ವ್ಯಾನ್, ಬಸ್, ಆಟೋಗಳಲ್ಲಿ ಆಗಮಿಸಿದ್ದರಿಂದ ವಾಹನ ದಟ್ಟಣೆಯು ಹೆಚ್ಚಾಗಿತ್ತು.
ತಪ್ಪಿಸಿಕೊಂಡಿದ್ದ ಬಾಲಕಿ:
ಅಮಾವಾಸ್ಯೆ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಜನರು ದೇವಾಲಯಕ್ಕೆ ಆಗಮಿಸಿದ್ದರು. ಬೆಳಗ್ಗೆ 11 ಗಂಟೆಯಲ್ಲಿ ತೆರಕಣಾಂಬಿ ಹುಂಡಿ ನಿವಾಸಿ ಬಾಲಕಿ ಅರ್ಚನಾ ತಪ್ಪಿಸಿಕೊಂಡು ಗೃಹ ರಕ್ಷಕ ಹುಚ್ಚಪ್ಪ ಎಂಬುವರಿಗೆ ಸಿಕ್ಕಿದ್ದಳು. ಬಾಲಕಿಯನ್ನು ಸಮಾಧಾನಪಡಿಸಿದ ಹುಚ್ಚಪ್ಪ ಅವರು ಮಧಾಹ್ನ 3 ಗಂಟೆಗೆ ಬಾಲಕಿ ತಾಯಿ ಮಹದೇವಮ್ಮ ಎಂಬುವರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಬಾಲಕಿಯನ್ನು ಒಪ್ಪಿಸಿದರು.