ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಗ್ರಾಮದಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ತುಮಕೂರು ಮಾದರಿಯ ಬೋನು ಅಳವಡಿಸಿದ್ದಾರೆ. 
ರಾಜ್ಯ

ವಡೆಯನಪುರ ಗ್ರಾಮದಲ್ಲಿ ಹುಲಿರಾಯ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲೂಕಿನ ವಡೆಯನಪುರ ಗ್ರಾಮದ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿರುವುದು ಈ ಭಾಗದ ಜನರಲ್ಲಿ ಭೀತಿಯುಂಟುಮಾಡಿದೆ.
ಭಾನುವಾರ ಸಂಜೆ ಗ್ರಾಮದ ವಿಶ್ವಾಸ್ ಎಂಬುವರ ಜಮೀನಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹುಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಎದುರೇ ಹುಲಿ ರಸ್ತೆದಾಟಿ ಹೋಯಿತು. ಈ ಹಿನ್ನೆಲೆಯಲ್ಲಿ ಬಫರ್ ವಲಯದ ಅರಣ್ಯ ಸಿಬ್ಬಂದಿ ಹುಲಿಯ ಚಲನವಲನ ಪತ್ತೆಗೆ ಕ್ಯಾಮೆರಾ ಅಳವಡಿಸಿದರು. ಪದೇ ಪದೇ ಕಾಣಿಸುತ್ತಿರುವ ಹುಲಿ ಸೆರೆಗೆ ತುಮಕೂರು ಮಾದರಿಯ ಬೋನು ಅಳವಡಿಸಿದರು. ಅದರೆ ಹುಲಿಯನ್ನು ಆಕರ್ಷಿಸಲು ಬೋನಿನೊಳಗೆ ಯಾವುದೇ ಜೀವಿಯನ್ನು ಕೂಡಿ ಹಾಕದಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.
ಕಳೆದ ವರ್ಷ ಬೊಮ್ಮಲಾಪುರ ಗ್ರಾಮದಲ್ಲಿ ಇದೇ ಸಂದರ್ಭದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ನಿರ್ಲಕ್ಷೃ ವಹಿಸಿದ್ದರಿಂದ ರೊಚ್ಚಿಗೆದ್ದ ರೈತರು ಅರಣ್ಯ ಸಿಬ್ಬಂದಿಯನ್ನು ಬೋನಿನೊಳಗೆ ಕೂಡಿಹಾಕಿ ಪ್ರತಿಭಟನೆ ನಡೆಸಿದ್ದ ಘಟನೆ ನಡೆದಿತ್ತು. ಆದರೂ ಇನ್ನೂ ಎಚ್ಚತ್ತುಕೊಳ್ಳದ ಅರಣ್ಯ ಇಲಾಖೆ ಕಳೆದ ಕೆಲವು ತಿಂಗಳಿನಿಂದ ಗ್ರಾಮದ ಸುತ್ತಮುತ್ತಲೂ ಹುಲಿ ಕಾಣಿಸಿಕೊಳ್ಳುತ್ತಿದ್ದರೂ ಅದನ್ನು ಸೆರೆಹಿಡಿಯಲು ಗಂಭೀರ ಪ್ರಯತ್ನ ನಡೆಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಕೂಡಲೇ ಹುಲಿ ಸೆರೆಹಿಡಿದು ಕಾಡಿಗೆ ಬಿಡುವಂತೆ ಒತ್ತಾಯಿಸಿದ್ದಾರೆ.