ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಹುಲಿ ದಿನ ಆಚರಿಸಲಾಯಿತು.  
ರಾಜ್ಯ

ವ್ಯ್ರಾಘ್ರಗಳ ರಕ್ಷಣೆಗೆ ಬನ್ನೆರುಟ್ಟದಲ್ಲಿ ಹುಲಿದಿನ / ANEKAL

ಆನೇಕಲ್ : ಹುಲಿಗಳ ಸಂರಕ್ಷಣೆ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಹುಲಿಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಹುಲಿ ದಿನವನ್ನು ಸಂದರ್ಶಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಜಾಗೃತಿ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ಪರಿಸರದ ಮಹತ್ವ, ಹುಲಿಗಳ ಗಣತಿ ವಿಧಾನಗಳು ಹಾಗೂ ಅವುಗಳನ್ನು ಪಟ್ಟೆ ಮತ್ತು ಹೆಜ್ಜೆಗುರುತುಗಳ ಆಧಾರದ ಮೇಲೆ ಗುರುತಿಸುವ ಕುರಿತು ಸಂವಾದಾತ್ಮಕ ಜಾಗೃತಿ ಅಧಿವೇಶನವನ್ನೂ ನಡೆಸಲಾಯಿತು.
ಇದೇ ವೇಳೆ ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆಗಳ ಜೀವನ ಚಕ್ರದ ಕುರಿತು ಪ್ರದರ್ಶನ ಏರ್ಪಡಿಸಿ, ಮೂರು ಜಾತಿಯ ಹುಲಿ, ಚಿಟ್ಟೆಗಳನ್ನು ಬಿಡುಗಡೆ ಮಾಡಲಾಯಿತು. ಹುಲಿ ಒರಿಗಮಿ, ಪಟ್ಟೆ ಹೊಂದಾಣಿಕೆ ಚಟುವಟಿಕೆ ಹಾಗೂ ಒಗಟು ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಮುಖದ ಮೇಲೆ ಹುಲಿ ಚಿತ್ರ ಬಿಡಿಸುವುದು, ಹುಲಿ ಹೆಜ್ಜೆಗುರುತಿನ ಠಸ್ಸೆ ಹಾಗೂ ಪೋಸ್ಟ್​ಕಾರ್ಡ್​ ನೀಡಲಾಯಿತು.
ಶಾಲಾ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಪ್ರಕೃತಿ ಕಲೆ ಹಾಗೂ ರಸಪ್ರಶ್ನೆ ಸೇರಿ ಪರಿಸರ ಸ್ನೇಹಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ವಿದ್ಯಾಸಂಸ್ಥೆಗಳಿಂದ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಹುಲಿ ಸಂರಕ್ಷಣೆಯ ಮಹತ್ವದ ಕುರಿತು ತಿಳಿದುಕೊಂಡು ಅಭಿಪ್ರಾಯ ಹಂಚಿಕೊಂಡರು.
ಪ್ರಕೃತಿ ಕಲಾ ಸ್ಪರ್ಧೆಯಲ್ಲಿ ಕೊಂಬೆಗಳು, ಬೀಜಕೋಶಗಳು, ಬಿದ್ದ ಎಲೆಗಳು, ಮರಳು ಹಾಗೂ ಕಲ್ಲುಗಳಂತಹ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹುಲಿ ಸಂರಕ್ಷಣೆಯ ಸಂದೇಶವನ್ನು ಸೃಜನಶೀಲವಾಗಿ ಮೂಡಿಸಿದರು. ಹುಲಿ ಹಾಗೂ ಹುಲಿ ಜಾತಿಯ ಚಿಟ್ಟೆಗಳ ನಡವಳಿಕೆ, ಜೀವಶಾಸ್ತ್ರ ಮತ್ತು ಸಂರಕ್ಷಣೆ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮವೂ ನಡೆಯಿತು.
ಜೀವವೈವಿಧ್ಯ ಕಾಪಾಡುವ ಸಂಕಲ್ಪ : ಜಯನಗರದ ಐಕ್ಯ ಶಾಲೆಯ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ಜರುಗಿದ ವಿಶೇಷ ಸಂಪರ್ಕ ಸಭೆಯಲ್ಲಿ ಹುಲಿಗಳ ನಡವಳಿಕೆ, ಆಹಾರ ಸರಪಳಿಯಲ್ಲಿ ಪ್ರತಿಯೊಂದು ಪ್ರಾಣಿಯ ಪಾತ್ರ, ಜೀವವೈವಿಧ್ಯ ಎದುರಿಸುತ್ತಿರುವ ವಿವಿಧ ಬೆದರಿಕೆ ಹಾಗೂ ವನ್ಯಜಿವಿ ಅಕ್ರಮ ವ್ಯಾಪಾರ ಬೆಂಬಲಿಸದಿರುವ ಮೂಲಕ ವಿದ್ಯಾರ್ಥಿಗಳು ವನ್ಯಜಿವಿ ಸಂರಕ್ಷಣೆಗೆ ನೀಡಬಹುದಾದ ಕೊಡುಗೆಗಳ ಕುರಿತು ಮಾಹಿತಿ ನೀಡಲಾಯಿತು.
ಕೊನೆಯಲ್ಲಿ ವಿದ್ಯಾರ್ಥಿಗಳು ವನ್ಯಜಿವಿ ಪ್ರತಿಜ್ಞೆ ಸ್ವೀಕರಿಸಿದರು. ಸಂವಿಧಾನದ ಆಶಯದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ವನ್ಯಜಿವಿಗಳನ್ನು ರಕ್ಷಿಸುವುದು ಹಾಗೂ ಎಲ್ಲ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುವ ಸಂಕಲ್ಪ ಮಾಡಿದರು.