ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಅರಣ್ಯ ಸಿಬ್ಬಂದಿ ಹುಲಿ ಗಣತಿ ಕಾರ್ಯ ಕೈಗೊಂಡಿದ್ದಾರೆ.
ಗುಂಡ್ಲುಪೇಟೆ: ಈ ಬಾರಿ ಅರಣ್ಯ ಇಲಾಖೆ ಬಂಡೀಪುರದಲ್ಲಿ ಹುಲಿ ಗಣತಿ ಆರಂಭಿಸಿದೆ.
ಸೋಮವಾರದಿಂದ 8 ದಿನಗಳ ಕಾಲ ನಡೆಯುವ ರಾಷ್ಟ್ರೀಯ ಹುಲಿ ಗಣತಿಗಾಗಿ ಅರಣ್ಯ ಇಲಾಖೆ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ. ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕರ್ನಾಟಕದ ಎಲ್ಲ 5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪ್ರತ್ಯೇಕವಾಗಿ ಮತ್ತು ರಾಜ್ಯದ ಎಲ್ಲ 13 ಅರಣ್ಯ ವೃತ್ತಗಳ ಕ್ಷೇತ್ರ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಈ ಬಾರಿ ಹುಲಿಗಣತಿಯನ್ನು ನಿಖರವಾಗಿ ನಿರ್ವಹಿಸುವ ಸಲುವಾಗಿ 2025ರ ಸೆಪ್ಟೆಂಬರ್ 24 ರಿಂದ 26 ರವರೆಗೆ ಮುದುಮಲೈ-ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕರ್ನಾಟಕದ ಸುಮಾರು 61 ಮುಂಚೂಣಿ ಸಿಬ್ಬಂದಿ ಮತ್ತು ಅರಣ್ಯ ಅಧಿಕಾರಿಗಳು ಈ ಭಾಗವಹಿಸಿ ಗಣತಿಯನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ತರಬೇತಿ ಪಡೆದಿದ್ದಾರೆ.
ಮೊದಲ ಹಂತದ ಗಣತಿ: ಮೊದಲ ಹಂತದಲ್ಲಿ ಬಂಡೀಪುರ, ಕುಂದಕೆರೆ, ಗೋಪಾಲಸ್ವಾಮಿಬೆಟ್ಟ ಹಾಗೂ ಗುಂಡ್ಲುಪೇಟೆ ಬಫರ್ ವಲಯಗಳಲ್ಲಿ ಗಣತಿ ಕಾರ್ಯ ಕೈಗೊಳ್ಳಲಾಗಿದೆ. ಇದು ಪೂರ್ಣಗೊಂಡ ನಂತರ ಇತರ ವಲಯಗಳಲ್ಲಿ ಗಣತಿ ನಡೆಸಲಾಗುತ್ತದೆ. ಮೊದಲ ದಿನ ಕಚೇರಿಯಲ್ಲಿ ತಮ್ಮ ಗಣತಿಗೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಿಬ್ಬಂದಿ ಎರಡು, ಮೂರು ಹಾಗೂ ನಾಲ್ಕನೇ ದಿನಗಳು ಕಾಡಿಗೆ ತೆರಳುವರು. ಪ್ರತಿ ಬೀಟ್‌ನಲ್ಲಿ 5 ಕಿಮೀ ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಕಣ್ಣಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಂಡುಬರುವ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಚಿರತೆ, ಕಾಡುನಾಯಿ, ನರಿ, ತೋಳಗಳು ಮತ್ತು ಬೃಹತ್ ಸಸ್ಯಹಾರಿಗಳಾದ ಆನೆ ಮತ್ತು ಕಾಟಿಗಳ ಕುರುಹುಗಳ ಸಮೀಕ್ಷೆ ನಡೆಸುವರು. ಆನೆ, ಹುಲಿಗಳ ಲದ್ದಿ, ಹೆಜ್ಜೆಗುರುತುಗಳನ್ನು ಪತ್ತೆಹಚ್ಚಿ ಡೇಟಾ ಶೀಟ್‌ನಲ್ಲಿ ದಾಖಲಿಸುವರು.
ಮುಂದಿನ ಎರಡು ದಿನಗಳ ಕಾಲ ಟ್ರ್ಯಾಂಜಾಕ್ಟ್ ಲೈನ್‌ನಲ್ಲಿ ಸಾಗುವ ಸಿಬ್ಬಂದಿ ಎಂಸಟ್ಯೆಾಪ್ ಇಕೋಲಾಜಿಕಲ್ ಆಪ್ ಬಳಸಿ ಗಣತಿ ನಡೆಸುವರು. ಪ್ರತ್ಯಕ್ಷವಾಗಿ ಕಂಡುಬರುವ ಕೃಷ್ಣ ಮೃಗ ಮತ್ತು ಕಾಡುಹಂದಿ ಮುಂತಾದ ಸಸ್ಯಹಾರಿ ಪ್ರಾಣಿಗಳ ಸಂಖ್ಯೆಯನ್ನು ಅಂದಾಜು ಮಾಡಲು ಸಾಧ್ಯವಾಗುತ್ತದೆ. ಅಂತಿಮ ದಿನ ಗಣತಿಕಾರ್ಯ ಪೂರ್ಣಗೊಂಡ ನಂತರ ಕಂಪ್ಯೂಟರ್‌ಗೆ ದತ್ತಾಂಶಗಳನ್ನು ಅಪ್ ಲೋಡ್ ಮಾಡುವರು.
ಗಣತಿ ಇತಿಹಾಸ ಅಂಕಿ-ಅಂಶಗಳು: ರಾಷ್ಟ್ರ ಮಟ್ಟದಲ್ಲಿ ಹುಲಿಗಳ ಸ್ಥಿತಿಗತಿ ಮೌಲ್ಯಮಾಪನದ ಅಂಗವಾಗಿ 2006, 2010, 2014, 2018 ಮತ್ತು 2022 ರಲ್ಲಿ ಪ್ರತಿ ನಾಲ್ಕು ವರ್ಷಗಳ ಅಂತರದಲ್ಲಿ ಹುಲಿಗಣತಿ ನಡೆಸಲಾಗಿತ್ತು. ಈ ಅಖಿಲ ಭಾರತ ಹುಲಿಗಣತಿ ವರದಿಯ ಪ್ರಕಾರ, ಭಾರತದಲ್ಲಿ 2006ರಲ್ಲಿ 1411, 2010ರಲ್ಲಿ 1706, 2014ರಲ್ಲಿ 2226 ಹಾಗೂ 2018 ರಲ್ಲಿ 2967 ಹುಲಿಗಳಿರುವುದು ಬಹಿರಂಗವಾಗಿತ್ತು.
2022ರ ಗಣತಿಯ ಪ್ರಕಾರ ಭಾರತವು 3682 ಹುಲಿಗಳನ್ನು ಹೊಂದಿದ್ದು, ಇದು ವಿಶ್ವದ ಒಟ್ಟು ಹುಲಿಗಳ ಸಂಖ್ಯೆಯ ಶೇ. 70 ರಷ್ಟಿದೆ. ಕರ್ನಾಟಕದಲ್ಲಿ 2006 ರಲ್ಲಿ 290, 2010 ರಲ್ಲಿ 300, 2014 ರಲ್ಲಿ 406, 2018ರಲ್ಲಿ 524ಕ್ಕೆ ಏರಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ಆದರೆ 2018ರಲ್ಲಿ 324 ಹುಲಿಗ ಸಂಖ್ಯೆಯೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು. ಪ್ರಸ್ತುತ ಕರ್ನಾಟಕವು 563 ಹುಲಿಗಳನ್ನು ಹೊಂದಿದ್ದು, ಮಧ್ಯಪ್ರದೇಶದ ನಂತರ ಎರಡನೇ ಸ್ಥಾನ ಪಡೆದುಕೊಂಡಿದೆ.
ಈ ಬಾರಿ ಹುಲಿಗಣತಿಯನ್ನು ನಿಖರವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಸ್‌ಟಿಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಅರಣ್ಯ ಸಿಬ್ಬಂದಿ ಗಣತಿ ಕಾರ್ಯ ನಡೆಸಲಿದ್ದಾರೆ.
* ಎಸ್.ಪ್ರಭಾಕರನ್, ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ
ಕ್ಯಾಮರಾ ಟ್ರ್ಯಾಪ್: ಈಗಾಗಲೇ ಅರಣ್ಯ ಇಲಾಖೆ 50 ಸಿಬ್ಬಂದಿ ನೆರವಿನಿಂದ ನ.25ರಿಂದ ಜ.2ರವರೆಗೆ ಮೊದಲನೇ ಹಂತದ ಕ್ಯಾಮರಾ ಟ್ರ್ಯಾಪ್ ಮೂಲಕ ಗಣತಿ ಮಾಡಿದ್ದು, 2ನೇ ಹಂತದಲ್ಲಿ ಜ.8ರಿಂದ ಫೆ.7ರವರೆಗೆ ಓಂಕಾರ್, ಮೂಲೆಹೊಳೆ, ಎ.ಎಂ.ಗುಡಿ ಮತ್ತು ಮದ್ದೂರು ವಲಯಗಳಲ್ಲಿ, 3ನೇ ಹಂತದಲ್ಲಿ ಫೆ.10 ರಿಂದ ಮಾ.7ರವರೆಗೆ ನುಗು, ಹೆಡಿಯಾಲ, ಮೊಳೆಯೂರು, ಎನ್.ಬೇಗೂರು ಹಾಗೂ ಗುಂಡ್ರೆ ವಲಯಗಳಲ್ಲಿ ಕೈಗೊಳ್ಳಲಿದೆ.
400 ಸಿಬ್ಬಂದಿ, 550 ಕ್ಯಾಮರಾ, 90 ಮೊಬೈಲ್, 70 ರೇಂಜ್ ಫೈಂಡರ್ ಹಾಗೂ 50 ಕಾಂಪಾಸ್ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ನಂತರ ಎಲ್ಲ ಚಿತ್ರಗಳ ದತ್ತಾಂಶಗಳನ್ನು ಕರ್ನಾಟಕ ವನ್ಯಜೀವಿ ತಾಂತ್ರಿಕ ಕೋಶಕ್ಕೆ ಕಳುಹಿಸಲಿದೆ ಎಂದು ಅರಣ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.