ಯಾದಗಿರಿಯ ಕೆಮಿಕಲ್ ಕಂಪನಿಯಲ್ಲಿ ಗ್ಯಾಸ್ ಲಿಕೇಜ್ ಆಗಿ ಮೂವರು ಕಾರ್ಮಿಕರ ದುರಂತ ಸಾವು: ಇಬ್ಬರ ಸ್ಥಿತಿ ಗಂಭೀರ! Gas Leak
- ಯಾದಗಿರಿ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿಯಲ್ಲಿ ಗ್ಯಾಸ್ ಲೀಕ್
- ಉಸಿರುಗಟ್ಟಿ ಸ್ಥಳದಲ್ಲೇ ಮೂವರು ಕಾರ್ಮಿಕರು ದುರ್ಮರಣ
- ಇಬ್ಬರ ಸ್ಥಿತಿ ಗಂಭೀರವಾಗಿ ರಾಯಚೂರು ಆಸ್ಪತ್ರೆಗೆ ದಾಖಲು
- ಸುರಕ್ಷತೆಯಿಲ್ಲದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ
- ನ್ಯಾಯ ಒದಗಿಸುವಂತೆ ಒತ್ತಾಯಿಸಿ ಕಾರ್ಮಿಕರಿಂದ ಪ್ರತಿಭಟನೆ
ಯಾದಗಿರಿ/ರಾಯಚೂರು : ಗ್ಯಾಸ್ ಲೀಕೇಜ್ನಿಂದ ( Gas Leak ) ಮೂವರು ಕಾರ್ಮಿಕರು ಸಾವಿಗೀಡಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಬುಧವಾರ ಬೆಳಗ್ಗೆ ಯಾದಗಿರಿ ಜಿಲ್ಲೆಯ ಕಡೆಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಕಂಪನಿಯೊಂದರಲ್ಲಿ ನಡೆದಿದೆ.
ತೆಲಂಗಾಣದ ಕಾಟ್ಲಾ ಗಣೇಶ್ (23), ಮಧ್ಯಪ್ರದೇಶದ ವಿಕ್ರಮ್ ಸಿಂಗ್ ಗೊಂಡ (25) ಹಾಗೂ ಸಂಜಯ್ ಸಿಂಗ್ ಗೊಂಡ (25) ಮೃತ ಕಾರ್ಮಿಕರು. ಆಂಧ್ರಪ್ರದೇಶದ ಮಂಚಾಲ ಹೇಮಂತ್, ಮಂಚಾಲ ಶಿವಕುಮಾರ್ ಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹೈದರಾಬಾದ್ ಮೂಲದ ಸೀಲ್ ಲ್ಯಾಬೋರೇಟರಿ ಕಂಪನಿಯಲ್ಲಿ ಕೆಮಿಕಲ್ ಸ್ಕ್ರಬರ್ ಗ್ಯಾಸ್ ಲಿಕೇಜ್ ಆಗಿದ್ದು, ಅಪಾಯಕಾರಿ ಕೆಮಿಕಲ್‌ನ ಕೆಟ್ಟ ವಾಸನೆಯಿಂದ ಉಸಿರುಗಟ್ಟಿ ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.
ಕೆಮಿಸ್ಟ್, ಸೂಪರ್ವೈಸರ್ ಹಾಗೂ ಕಾರ್ಮಿಕರು ಅಪಾಯಕ್ಕೀಡಾಗಿದ್ದು ಸುರಕ್ಷತೆಯಿಲ್ಲದೆ ಸಿಬ್ಬಂದಿ, ಕಾರ್ಮಿಕರು ಕೆಲಸ ಮಾಡುತ್ತಿದ್ದ ಹಿನ್ನೆಲೆ ಅವಘಡ ನಡೆದಿದೆ ಅಂತ ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂವರು ಕಾರ್ಮಿಕರ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಫ್ಯಾಕ್ಟರಿ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಮೃತ ದೇಹಗಳನ್ನ ರಿಮ್ಸ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ, (ಏಜೆನ್ಸೀಸ್).