ಚಿಕ್ಕಬಳ್ಳಾಪುರ: ತಾಲೂಕಿನ ವಿವಿಧೆಡೆ ಕಳವು, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ನಾಗೇಶ್, ಜುಬೇರ್ ಖಾನ್, ತಿಪಟೂರಿನ ಎಂ.ಪಿ.ಶಶಾಂಕ್ ಬಂಧಿತರು. ಮತ್ತೊರ್ವ ಆರೋಪಿ ಮರಿಲಿಂಗನಾಯಕನ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳಿಂದ ಒಂದು ಕಾರು, 108 ಗ್ರಾಂ ಚಿನ್ನ, 2.44 ಕೆ.ಜಿ. ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ನಗರಠಾಣೆ, ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣ ದಾಖಲಾಗಿವೆ.
ದರೋಡೆ ಪ್ರಕರಣಗಳು: ಮಾ.23ರಂದು ರಾತ್ರಿ ನಗರದ ವಾಪಸಂದ್ರದ ನಿವಾಸಿ ಶಾಮಲಮ್ಮ ವಿಹಾರಕ್ಕೆ ಹೊರಟಿದ್ದಾಗ ವಿಶ್ವಸಿಂಧು ಆಸ್ಪತ್ರೆ ಮುಂಭಾಗ ನಾಲ್ವರೂ ಆರೋಪಿಗಳು 9 ಗ್ರಾಂ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿ ಮಂಜುನಾಥ್ ಚದಲಪುರ ಕ್ರಾಸ್ನಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಹಣ ಕಸಿದುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಚಿಕ್ಕಬಳ್ಳಾಪುರ ನಗರಠಾಣೆ, ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಪ್ರಕರಣ ಭೇದಿಸಲು ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರಚಿಸಿದ್ದರು.