ಅಡವಿಬಾವಿ ಚಿಕ್ಕತಾಂಡಾದ ದುರ್ಗಾದೇವಿ ದೇವಸ್ಥಾನ ಬಳಿ ಹಾಳಾಗಿರುವ ಶುದ್ಧ ಕುಡಿವ ನೀರಿನ ಘಟಕ.
- ದುರಸ್ತಿ ಬದಲು ಮತ್ತೊಂದರ ನಿರ್ಮಾಣಕ್ಕೆ ಅಡಿಪಾಯ
- ಅಡವಿಬಾವಿ ಚಿಕ್ಕತಾಂಡಾಕ್ಕೆ ತಪ್ಪದ ನೀರಿನ ಬವಣೆ
ಕನಕಗಿರಿ: ಗುಡ್ಡಗಾಡು ಪ್ರದೇಶದಿಂದ ಆವೃತವಾದ ತಾಲೂಕಿನ ಕೊನೆಯ ಜನವಸತಿ ಪ್ರದೇಶ ಅಡವಿಬಾವಿ ಚಿಕ್ಕತಾಂಡಾದಲ್ಲಿರುವ ಮೂರು ಶುದ್ಧ ಕುಡಿವ ನೀರಿನ ಘಟಕಗಳು ಅನುಪಯುಕ್ತವಾಗಿವೆ. ನಿರ್ವಹಣೆ ಕೊರತೆಯಿಂದ ಜನ ಬಳಕೆಯಿಂದ ದೂರ ಉಳಿದಿವೆ. ಇದೀಗ ಮತ್ತೊಂದು ಘಟಕ ನಿರ್ಮಾಣಕ್ಕೆ ಮುಂದಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗೌರಿಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಚಿಕ್ಕತಾಂಡಾದಲ್ಲಿ 750ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಲ್ಲಿ ನಾನಾ ಅನುದಾನದಲ್ಲಿ ಈ ಹಿಂದೆ ಸಿದ್ಧಗೊಂಡ ಮೂರು ಶುದ್ಧ ಕುಡಿವ ನೀರಿನ ಘಟಕಗಳಿದ್ದರೂ ಉಪಯೋಗವಿಲ್ಲದಂತಾಗಿವೆ.
ಶಾಸಕರ ಅನುದಾನದಲ್ಲಿ ಸರ್ಕಾರಿ ಶಾಲೆ, ತಾಂಡಾ ಅಭಿವೃದ್ಧಿ ನಿಗಮದಿಂದ ದುರ್ಗಾದೇವಿ ದೇವಸ್ಥಾನ ಹಾಗೂ ಪುನಿತ್‌ರಾಜ್ ಕುಮಾರ ವೃತ್ತದ ಬಳಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಲಕ್ಷಾಂತರ ರೂ.ಗಳ ಅನುದಾನ ವ್ಯಯಿಸಿ ಘಟಕಗಳನ್ನು ಸ್ಥಾಪಿಸಲಾಗಿದೆ.
ಯಂತ್ರಗಳು ಹಾಳಾಗಿದ್ದು, ಕೆಲವು ನಾಪತ್ತೆಯಾಗಿವೆ. ಘಟಕಗಳು ಸ್ತಬ್ಧಗೊಂಡು ಹಲವು ವರ್ಷಗಳೇ ಕಳೆದಿವೆ. ನೀರಿಗಾಗಿ ಗ್ರಾಮಸ್ಥರು ಐದಾರು ಕಿ.ಮೀ. ಕ್ರಮಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಲ್ಕನೇ ಘಟಕಕ್ಕೆ ಸಿದ್ಧತೆ: ಅಡವಿಬಾವಿ ಚಿಕ್ಕತಾಂಡಾ ಜನರ ಅನುಕೂಲಕ್ಕೆ ಇರುವ ಮೂರು ಘಟಕಗಳನ್ನು ದುರಸ್ತಿಗೊಳಿಸಿ ನೀರು ಪೂರೈಸಬೇಕಿತ್ತು. ಆದರೆ, 4ನೇ ಘಟಕ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಲ್ಲಿ ಅನುದಾನ ಮಂಜೂರಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಘಟಕ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಗ್ರಾಮಸ್ಥರ ಒತ್ತಾಯದ ಬಳಿಕ ಹಲವು ದಿನಗಳಿಂದ ಹಾಳಾಗಿದ್ದ ಪುನಿತ್ ವೃತ್ತ ಬಳಿಯ ಆರ್‌ಒ ಪ್ಲಾಂಟ್‌ಗೆ 1.5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯಕ್ಕೆ ಮುಂದಾಗಲಾಗಿದೆ.
ಕೆಟ್ಟಿರುವ ಆರ್‌ಒ ಪ್ಲಾಂಟ್‌ಗಳಲ್ಲಿ ಒಂದರ ದುರಸ್ತಿ ನಡೆದಿದ್ದು, ಮತ್ತೊಂದನ್ನು ಸರಿಪಡಿಸಲಾಗುವುದು. ಅಲ್ಲದೇ, ಹೊಸದಾಗಿ ಮಂಜೂರಾಗಿರುವ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗುವುದು.
— ನಾಗರಾಜ ಎಇಇ ಗ್ರಾಕುನೀ ಯೋಜನೆ