ಮುಕ್ಕಾಲು ರಾಜ್ಯದಲ್ಲಿ ಬರಭೀಕರ 
ರಾಜ್ಯ

ಮುಕ್ಕಾಲು ರಾಜ್ಯದಲ್ಲಿ ಬರಭೀಕರ! ಜುಲೈ ಮುಗಿಯುತ್ತಿದ್ದರೂ ಇನ್ನೂ ಕರುಣೆ ತೋರದ ವರುಣ

ಬೆಂಗಳೂರು: ಜೂನ್ ಕಳೆದು ಜುಲೈ ಮುಗಿಯುತ್ತಾ ಬಂದಿದ್ದರೂ ವರುಣದೇವ ಇನ್ನೂ ರಾಜ್ಯದ ಮೇಲೆ ಕರುಣೆ ತೋರಿಲ್ಲ. ಕೆಲ ಜಿಲ್ಲೆಗಳಲ್ಲಿ ಕೊಂಚ ಮಟ್ಟಿಗೆ ಮಳೆಯಾಗಿದೆ ಎನ್ನುವುದನ್ನು ಬಿಟ್ಟರೆ ಬಹುತೇಕ ಜಿಲ್ಲೆಗಳು ಬಾಯಾರಿ ಮಳೆಗಾಗಿ ಬಾಯ್ತೆರೆದಿವೆ. ಬರ ನಿರ್ವಹಣೆಗೆ ಸಜ್ಜಾಗಿರುವ ಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ನೆರವು ಕೋರುವುದಕ್ಕೆ ಪೂರ್ವಭಾವಿಯಾಗಿ ಸೋಮವಾರ ದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ? ಬರಪರಿಸ್ಥಿತಿ ಎಲ್ಲೆಲ್ಲಿ ಗಂಭೀರವಾಗಿದೆ ಎಂಬ ಮಾಹಿತಿ ಬೆನ್ನತ್ತಿ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್ ವರದಿ ಇಲ್ಲಿದೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾದ್ಯಂತ ಈವರೆಗೆ ಶೇ.80 ಬಿತ್ತನೆ ಆಗಿಲ್ಲ. ಬಿತ್ತನೆಯಾಗಿದ್ದ ಕೆಲವೆಡೆ ಪೈರು ಮೇಲೆದ್ದಿಲ್ಲ. ಜಿಲ್ಲಾ ಕೇಂದ್ರದಲ್ಲೇ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. 92 ಗ್ರಾಪಂ ವ್ಯಾಪ್ತಿಯ 216 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ಅಂದಾಜಿಸಲಾಗಿತ್ತು. ತೀವ್ರ ಸಮಸ್ಯೆ ಎದುರಾದ 49 ಜನವಸತಿ ಪ್ರದೇಶಗಳಲ್ಲಿ ಟ್ಯಾಂಕರ್, ಕೊಳವೆಬಾವಿಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯನಗರ: ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ವಣವಾಗಿದೆ. 143 ಮಿ.ಮೀ. ಮಳೆಯಾಗಬೇಕಿದ್ದ ಪೈಕಿ 54 ಮಿ.ಮೀ. ಮಳೆಯಾಗಿದೆ. ಕೇವಲ ಶೇ.35 ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ಕೃಷಿ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಜನ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಲಂಬಾಣಿ ತಾಂಡಾಗಳ ಪರಿಸ್ಥಿತಿ ಗಂಭೀರವಾಗಿದ್ದು, ಶೇ.75 ಕುಟುಂಬಗಳು ಈಗಾಗಲೇ ಊರು ತೊರೆದಿವೆ.

ಬಳ್ಳಾರಿ: ಜನವರಿಯಿಂದ ಜುಲೈವರೆಗೆ ಶೇ.18 ಮಳೆ ಕೊರತೆ ದಾಖಲಾಗಿದ್ದು, ಜುಲೈ ತಿಂಗಳಲ್ಲೇ ಶೇ.72 ಮಳೆ ಅಭಾವ ಉಂಟಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 1,59,546 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದರೂ, ಈವರೆಗೆ ಕೇವಲ 61,400 ಹೆಕ್ಟೇರ್ (ಶೇ.38.48) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕುರುಗೋಡು ತಾಲೂಕಿನಲ್ಲಿ ಅತಿ ಕಡಿಮೆ ಶೇ.5.32 ಹಾಗೂ ಸಂಡೂರು ತಾಲೂಕಿನಲ್ಲಿ ಶೇ.68.33 ಬಿತ್ತನೆ ದಾಖಲಾಗಿದೆ. ಭತ್ತದ ನಾಟಿಗೆ ತೀವ್ರ ಹಿನ್ನಡೆಯಾಗಿದೆ.

ರಾಜ್ಯದಲ್ಲಿನ ಮಳೆ ಪ್ರಮಾಣ (ಅವಧಿ ಜು.1ರಿಂದ ಜು.26)

  • ಸಾಧಾರಣ ಮಳೆ
  • ಮಳೆ ಕೊರತೆ (15 ಜಿಲ್ಲೆ)
  • ಹೆಚ್ಚು ಮಳೆ ಕೊರತೆ (11 ಜಿಲ್ಲೆ)

ಕರ್ನಾಟಕದ ಬರಚಿತ್ರಣ

  • ಇಡೀ ರಾಜ್ಯವನ್ನು ಕಾಡುತ್ತಿದೆ ಮಳೆಯ ಕೊರತೆ
  • ಬೆರಳೆಣಿಕೆ ಜಿಲ್ಲೆಗಳಲ್ಲಷ್ಟೇ ವಾಡಿಕೆ ಮಳೆಯಾಗಿದೆ
  • ಕೆಲವು ಕಡೆ ಮಾತ್ರ ಬಿತ್ತನೆ, ಉಳಿದೆಡೆ ಹಿಂದೇಟು
  • ಬಿತ್ತನೆಯಾಗಿದ್ದ ಕಡೆ ಪೈರು ಒಣಗಿ ಹೋಗುತ್ತಿದೆ
  • ಪ್ರಮುಖ ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆ
  • ಕುಡಿಯುವ ಉದ್ದೇಶಕ್ಕಷ್ಟೇ ಡ್ಯಾಂ ನೀರು ಮೀಸಲು
  • ಕೆಲವು ಪ್ರದೇಶಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ
  • ಬೋರ್​​ವೆಲ್​ಗಳನ್ನು ಬಳಸಿಕೊಂಡು ಪೂರೈಕೆ
  • ಜಾನುವಾರುಗಳಿಗೂ ಕಾಡುತ್ತಿದೆ ನೀರಿನ ಸಮಸ್ಯೆ
  • ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಿದ ಬರಗಾಲ
  • ಕರಾವಳಿ, ದಕ್ಷಿಣ ಒಳನಾಡಿಗೂ ಬರದ ಆತಂಕ
  • ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆ

153 ತಾಲೂಕುಗಳಲ್ಲಿ ಬರ

ಜೂ.1ರಿಂದ ಜು.26ವರೆಗೆ ವಾಡಿಕೆಯಂತೆ ರಾಜ್ಯಾದ್ಯಂತ 427 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 279 ಮಿ.ಮೀ ಮಳೆಯಷ್ಟೇ ಆಗಿದ್ದು, ಶೇ.35 ಮಳೆ ಅಭಾವ ಕಾಡಿದೆ. ಈ ಅವಧಿಯಲ್ಲಿ 27 ಜಿಲ್ಲೆಗಳ 153 ತಾಲೂಕು ಮತ್ತು 523 ಹೋಬಳಿಗಳಲ್ಲಿ ಮಳೆ ಕುಂಠಿತವಾಗಿದೆ. 57 ತಾಲೂಕುಗಳಲ್ಲಿ ವಾಡಿಕೆಯಷ್ಟೇ ಮಳೆಯಾದರೆ, 14 ತಾಲೂಕುಗಳಲ್ಲಿ ತುಸು ಅಧಿಕವಾಗಿ ಸುರಿದಿದೆ. ರಾಜ್ಯಾದ್ಯಂತ ಜೂನ್ನಲ್ಲಿ ವಾಡಿಕೆಯಂತೆ 199 ಮಿ.ಮೀ. ಮಳೆಯಾಗುವ ಬದಲು 116 ಮಿಮೀ ಸುರಿದಿದ್ದು, ಶೇ.42 ಕೊರತೆಯಾಗಿತ್ತು. ಈ ವೇಳೆ 120 ತಾಲೂಕುಗಳಲ್ಲಿ ಮಳೆ ಅಭಾವವಾಗಿದೆ.

ಕೊಪ್ಪಳ: ಜೂನ್, ಜುಲೈನಲ್ಲಿ ಶೇ.90 ಮಳೆ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ 3.52 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 1.60 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಚಿಗುರಿರುವ ಬೆಳೆಗಳು ಒಣಗುತ್ತಿವೆ. 10 ಗ್ರಾಪಂಗಳಿಗೆ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ.

ಧಾರವಾಡ: ಶೇ.19 ಮಳೆ ಕೊರತೆ- ಜಿಲ್ಲೆಯಾದ್ಯಂತ 2.82 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 2.63 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ನವಲಗುಂದ, ಅಣ್ಣಿಗೇರಿ, ಕುಂದಗೋಳ ತಾಲೂಕುಗಳಲ್ಲಿ ಬಿತ್ತನೆ ವಿಳಂಬವಾಗಿದೆ.

ಕಲಬುರಗಿ: ವಾಡಿಕೆಯಂತೆ 167 ಮಿಮೀ ಮಳೆ ಆಗಬೇಕಿತ್ತಾದರೂ, 67 ಮಿಮೀ ಮಳೆ ಮಾತ್ರ ಆಗಿದೆ. ಜಿಲ್ಲೆಯ ಕೆಲವೆಡೆ ಬಿತ್ತನೆಯಾಗಿದ್ದ ಹೆಸರು, ಉದ್ದು, ಸೋಯಾಬೀನ್, ಹತ್ತಿ ಸಂಪೂರ್ಣ ನೆಲಕಚ್ಚಿದೆ. ಮಳೆಯಾದರೆ ಮಾತ್ರ ಪರ್ಯಾಯ ವಾಗಿ ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತಬಹುದು. ಕುಡಿಯುವ ನೀರಿನ ಗಂಭೀರ ಸಮಸ್ಯೆ ತಲೆದೋರಿದೆ.

ಬೆಳಗಾವಿ: ವಾಡಿಕೆಗಿಂತ ಶೇ.20 ಮಳೆ ಕೊರತೆಯಿಂದಾಗಿ ಜಲಾಶಯ, ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಿದೆ. ಜಾನುವಾರುಗಳ ಕುಡಿಯುವ ನೀರಿಗೆ ಆಶ್ರಯವಾಗಿರುವ 550ಕ್ಕೂ ಅಧಿಕ ಕೆರೆಗಳಲ್ಲಿ ಶೇ.30 ನೀರಿದೆ. 7.52 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 6.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು, ಶೇಂಗಾ, ಉದ್ದು, ಸೋಯಾಬೀನ್, ಭತ್ತ, ಮೆಕ್ಕೆಜೋಳ ಬಿತ್ತನೆಯಾಗಿದೆ. ಶೇ.20 ಕೃಷಿ ಬೆಳೆಗಳು ಒಣಗುತ್ತಿವೆ. ಹವಾಮಾನ ವೈಪರೀತ್ಯದಿಂದ ಬೆಳೆಗಳು ರೋಗಕ್ಕೆ ತುತ್ತಾಗಿವೆ. ಹಿಡಕಲ್ ಜಲಾಶಯದಲ್ಲಿ 20 ಟಿಎಂಸಿ ನೀರಿದೆ. ನವಿಲುತೀರ್ಥ ಜಲಾಶಯದಲ್ಲಿ ಹಿಂದಿನ ವರ್ಷ 36 ಟಿಎಂಸಿ ನೀರಿತ್ತು. ಈಗ 16 ಟಿಎಂಸಿ ಇದೆ. ಹೀಗಾಗಿ ಕುಡಿಯುವ ನೀರು ಹೊರತುಪಡಿಸಿ ಕೈಗಾರಿಕೆ, ಕೃಷಿ ಬೆಳೆಗಳಿಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಕಾಲುವೆ ನೀರಾವರಿ ಅವಲಂಬಿತ ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಾವೇರಿ ಜಿಲ್ಲೆಗಳು: ಏ.1ರಿಂದ ಜು.26ರವರೆಗೆ ಶೇ.18.5 ಮಳೆ ಕುಂಠಿತವಾಗಿದೆ. ಮಂಡ್ಯ, ಬೆಂಗಳೂರು, ಮೈಸೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಡಿಯುವ ನೀರೊದಗಿಸುವ ಕೆಆರ್ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ 17.132 ಟಿಎಂಸಿ ನೀರಿನ ಸಂಗ್ರಹವಿದೆ. ಕೃಷಿಗೆ ನೀರಿಲ್ಲ ಎಂಬುದನ್ನು ಕಾವೇರಿ ನೀರಾವರಿ ನಿಗಮ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ 12 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಇಷ್ಟರಲ್ಲಿಯೇ ನಾಲ್ಕು ಜಿಲ್ಲೆಯ ಜನರಿಗೆ ಕುಡಿಯುವ ನೀರೊದಗಿಸಬೇಕಾದ ಸವಾಲು ಇದೆ. ಕೇವಲ ಶೇ.10.6 ಮಾತ್ರ ಬಿತ್ತನೆಯಾಗಿದೆ.

ಚಾಮರಾಜನಗರ: ಕುಡಿವ ನೀರಿಗೆ ಸಂಕಷ್ಟ- ಜಿಲ್ಲೆಯಲ್ಲಿ ಜನ, ಜಾನುವಾರು ಬಸವಳಿಯುತ್ತಿವೆ. ಶೀಘ್ರದಲ್ಲೇ 59 ಗ್ರಾಪಂಗಳ 128 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಜಿಲ್ಲೆಯ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕೃಷಿ ಬೆಳೆಗಳಿಗೆ ಬೇಕಾದಷ್ಟು ನೀರು ದೊರೆಯುತ್ತಿಲ್ಲ.

ತುಮಕೂರು: ಜಿಲ್ಲೆಯಲ್ಲಿ ಶೇ.60 ಮಳೆ ಕೊರತೆಯಾಗಿದೆ. 69 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 109 ಗ್ರಾಮಗಳಲ್ಲಿ ಶೀಘ್ರದಲ್ಲೇ ನೀರಿನ ಸಮಸ್ಯೆ ಆಗಲಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೆಚ್ಚು ಮಳೆ ಕೊರತೆ ಕಂಡು ಬಂದಿದೆ. 13 ಗ್ರಾಮಗಳಲ್ಲಿ ಹಾಗೂ 12 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 1.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಪೈಕಿ ಇಲ್ಲಿಯವರೆಗೂ ಕೇವಲ 4020 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಬೆಂಗಳೂರು ದಕ್ಷಿಣ(ರಾಮನಗರ): ಜಿಲ್ಲೆಯಲ್ಲಿ ಶೇ. 68, ಕೋಲಾರದಲ್ಲಿ ಶೇ.81 ಮಳೆ ಕೊರತೆಯಾಗಿದೆ.

ಉತ್ತರ ಕನ್ನಡ: ಜಿಲ್ಲೆಯ 3 ತಾಲೂಕುಗಳಲ್ಲಿ ಬರಗಾಲದ ಛಾಯೆ ಇದೆ. ಹಳಿಯಾಳ ತಾಲೂಕಿನಲ್ಲಿ ಶೇ.48 , ಯಲ್ಲಾಪುರದಲ್ಲಿ ಶೇ.42 ಹಾಗೂ ಮುಂಡಗೋಡ ತಾಲೂಕಿನಲ್ಲಿ ಶೇ.36 ಮಳೆ ಕೊರತೆ ಇದೆ.

ಗದಗ: ಜಿಲ್ಲೆಯಲ್ಲಿ ಶೇ.41 ಮಳೆ ಕೊರತೆ ಇದೆ.

153 ತಾಲೂಕುಗಳಲ್ಲಿ ಬರ

ಜು.1ರಿಂದ ಜು.26ವರೆಗೆ ವಾಡಿಕೆಯಂತೆ 228 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, 163 ಮಿ.ಮೀ. ಸುರಿದಿದ್ದು, ಶೇ.29 ಕೊರತೆಯಾಗಿದೆ. ಈ ಅವಧಿಯಲ್ಲಿ 96 ತಾಲೂಕುಗಳಲ್ಲಿ ಬರ ಎದುರಾಗಿದೆ. 2 ತಿಂಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಶೇ.30, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಶೇ.42 ಮಳೆ ಮಳೆ ಅಭಾವವಾಗಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ. ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿ ದಕ್ಷಿಣ ಕರ್ನಾಟಕದಲ್ಲಿ ಶೇ.36 ಮಳೆ ಕುಂಠಿತವಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಗದಗ, ಹಾವೇರಿ, ಧಾರವಾಡದಲ್ಲಿ ಶೇ.27 ಮಳೆ ಕುಂಠಿತವಾದರೆ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ವಾಡಿಕೆಯಷ್ಟೇ ಸರಿದಿದೆ.

ಮೇವಿನ ಮಿನಿ ಕಿಟ್ ಎಲ್ಲಿ?

ಪಶುಗಳಿಗೆ ಉಚಿತವಾಗಿ ಮೇವಿನ ಮಿನಿಕಿಟ್ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಪಶು ಸಂಗೋಪನಾ ಇಲಾಖೆಯಿಂದ ಒಂದು ತಿಂಗಳ ಹಿಂದೆ ಸಲ್ಲಿಕೆಯಾಗಿದ್ದ ಮಿನಿ ಕಿಟ್ಗಳ ಬೇಡಿಕೆ ಈಗ 4-5 ಪಟ್ಟು ಹೆಚ್ಚಾಗಿದ್ದರೂ ಕಿಟ್ಗಳಿನ್ನೂ ಹಂಚಿಕೆ ಆಗಿಲ್ಲ. 2021ರ ಗಣತಿಯಂತೆ ರಾಜ್ಯದಲ್ಲಿ 93 ಲಕ್ಷ ದನ, ಎಮ್ಮೆಗಳು, 193 ಲಕ್ಷ ಕುರಿ ಮೇಕೆಗಳಿವೆ. ಲಭ್ಯವಿರುವ 174 ಲಕ್ಷ ಟನ್ ಮೇವು ಅಂದಾಜು 35 ವಾರಗಳಿಗೆ ಹಾಗೂ 9 ವಿವಿಧ ಜಿಲ್ಲೆಗಳ 27 ತಾಲೂಕುಗಳಲ್ಲಿ 25ಕ್ಕಿಂತ ಕಡಿಮೆ ವಾರಗಳಿಗಷ್ಟೇ ಸಾಕಾಗಲಿದೆ.