ಆತ್ಮಹತ್ಯೆಗೆ ಶರಣಾದ ನವವಿವಾಹಿತೆಯರು 
ರಾಜ್ಯ

ರಾಜ್ಯದಲ್ಲಿ ಪ್ರತ್ಯೇಕ ಕಡೆ ಮೂವರು ನವವಿವಾಹಿತೆಯರ ಆತ್ಮಹತ್ಯೆ

ಮೋಹನ್​ ಶೆಟ್ಟಿ

ಬೆಂಗಳೂರು: ರಾಜ್ಯದ ಪ್ರತ್ಯೇಕ ಕಡೆಗಳಲ್ಲಿ ಮೂವರು ನವವಿವಾಹಿತೆಯರು ಸೇರಿ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬಾಕೆ ತನ್ನ ಮಗುವನ್ನು ಕೊಂದು ತಾನೂ ನೇಣು ಬಿಗಿದುಕೊಂಡಿದ್ದಾಳೆ.

ಬೆಂಗಳೂರಿನ ಲಕ್ಷಣ ನಗರದಲ್ಲಿ ಪತಿ ಮತ್ತು ನಾದಿನಿಯ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಚಿಕ್ಕಮಗಳೂರಿನ ತರಿಕೇರೆ ಮೂಲದ ಶ್ವೇತಾ (25) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪತಿ ಮೂರ್ತಿ ಹಾಗೂ ಆತನ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ವೇತಾಳಿಗೆ ಇನ್​ಸ್ಟಾಗ್ರಾಂನಲ್ಲಿ ಕುಣಿಗಲ್ ಮೂಲದ ಮೂರ್ತಿ ಎಂಬಾತನ ಪರಿಚಯವಾಗಿತ್ತು. 

ಇದು ಪ್ರೀತಿಗೆ ತಿರುಗಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆಯೂ ಪ್ರಿಯಕರನನ್ನು ವರಿಸಿದ್ದ ಶ್ವೇತಾಳಿಗೆ ಪತಿ ಮೂರ್ತಿ ಹಾಗೂ ನಾದಿನಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರಂತೆ. ಸಾವಿಗೂ ಮುನ್ನ ‘ನನ್ನ ಸಾವಿಗೆ ನನ್ನ ಗಂಡ ಮೂರ್ತಿ ಹಾಗೂ ಅವರ ಅಕ್ಕನೇ ಕಾರಣ. ನಾನು ಸತ್ತರೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡಿ ಅಮ್ಮ’ ಎಂದು ಡೆತ್​ನೋಟ್ ಬರೆದು ತಾಯಿಗೆ ಕಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಷಸೇವಿಸಿ ಕೊನೆಯುಸಿರು

ನೆಲಮಂಗಲ ಬಸವನಹಳ್ಳಿಯಲ್ಲಿ ನವವಿವಾಹಿತೆ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಬೀರಮ್ಮನಹಳ್ಳಿಯ ತನುಜಾ (31) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತನುಜಾ ಹಾಗೂ ಯಲಹಂಕ-ಮಾಯಸಂದ್ರದ ರವೀಂದ್ರ ಪ್ರೀತಿಸಿ 6 ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ವಿವಾಹವಾಗಿದ್ದರು. ಪಾಲಕರಿಗೆ ತಿಳಿಸುವವರೆಗೆ ಪ್ರತ್ಯೇಕವಾಗಿ ವಾಸಿಸೋಣವೆಂದು ಯಲಹಂಕ ಬಳಿಯ ಸಿಂಗಾಪುರದ ಬಾಡಿಗೆ ಮನೆಯಲ್ಲಿ ತನುಜಾ ವಾಸವಿದ್ದಳು. ರವೀಂದ್ರ ಆಗಾಗ ಮನೆಗೆ ಬಂದು, ಹೋಗುತ್ತಿದ್ದ. ಭಾನುವಾರ ಪತಿ ಮನೆಗೆ ತಡವಾಗಿ ಬರುವುದಾಗಿ ತಿಳಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದಂಪತಿ ಆತ್ಮಹತ್ಯೆ

ಮನೆಯವರ ಸೂಚನೆಯಂತೆ ಸಹೋದರ ಮಾವನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಲ್ಕು ತಿಂಗಳಿಗೇ ತುಮಕೂರು ಜಿಲ್ಲೆ ಶಿರಾ ತಾಲೂಕು ಹನುಮನಹಳ್ಳಿಯಲ್ಲಿ ಶರಣ್ಯಾ(20) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶರಣ್ಯಾ ಆತ್ಮಹತ್ಯೆ ಸುದ್ದಿ ತಿಳಿದು ಮನನೊಂದ ಗಿರೀಶ್ (28) ಕೂಡ ತೋಟದಲ್ಲಿ ನೇಣುಬಿಗಿದುಕೊಂಡು ಸಾವಿಗೀಡಾಗಿದ್ದಾನೆ.