Suicide 
ರಾಜ್ಯ

Suicide: ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಅಪ್ಪ, ಅಮ್ಮ, ಮಗಳು ವಿಷ ಸೇವಿಸಿ ಆತ್ಮಹತ್ಯೆ!

ಟಿ.ನರಸೀಪುರ: ಮೈಸೂರಿನ ಟಿ. ನರಸೀಪುರ ತಾಲೂಕಿನ ಹಳೇಕೆಂಪಯ್ಯನಹುಂಡಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಶಿವಣ್ಣ (50), ಅವರ ಪತ್ನಿ ನಾಗರತ್ನ (45) ಹಾಗೂ ಪುತ್ರಿ ರಕ್ಷಿತಾ (21) ಮೃತಪಟ್ಟವರು. ಮಾನಸಿಕ ಕಿರುಕುಳದಿಂದ ಬೇಸತ್ತು ಈ ಕೃತ್ಯ ಎಸಗಿರುವುದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಡೆತ್ ನೋಟ್‌ನಲ್ಲಿ ವ್ಯಕ್ತಿಯ ಹೆಸರು

ಮೃತರು ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಗ್ರಾಮದ ಉಲ್ಲಾಸ್ ಗೌಡ ಎಂಬುವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ತಮ್ಮ ಸಾವಿಗೆ ಅವರೇ ಕಾರಣ ಎಂದು ನೋಟ್‌ನಲ್ಲಿ ಬರೆದಿರುವುದಾಗಿ ಮೂಲಗಳು ತಿಳಿಸಿವೆ.

ಯುವತಿಗೆ ಕಿರುಕುಳ ಆರೋಪ

ರಕ್ಷಿತಾ ಅವರಿಗೆ ಮದುವೆ ನಿಶ್ಚಯವಾಗಿತ್ತು. ಈ ವೇಳೆ ಅವರು ಹಿಂದೆ ಕಳುಹಿಸಿದ್ದ ಕೆಲವು ಸಂದೇಶಗಳು ಹಾಗೂ ಫೋಟೋಗಳನ್ನು ಇಟ್ಟುಕೊಂಡು ಉಲ್ಲಾಸ್ ಗೌಡ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.ಅಷ್ಟೇ ಅಲ್ಲದೆ, ಆ ಸಂದೇಶಗಳು ಮತ್ತು ಫೋಟೋಗಳನ್ನು ರಕ್ಷಿತಾ ಅವರಿಗೆ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಕಳುಹಿಸಲಾಗಿತ್ತು ಎನ್ನಲಾಗಿದೆ. ಈ ಬೆಳವಣಿಗೆಯಿಂದ ಕುಟುಂಬ ತೀವ್ರವಾಗಿ ನೊಂದಿತ್ತು ಎಂದು ಹೇಳಲಾಗಿದೆ.

ಪೊಲೀಸರು ತನಿಖೆ

ಈ ಘಟನೆಗೆ ಸಂಬಂಧಿಸಿದಂತೆ ಟಿ. ನರಸೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್ ನೋಟ್ ಸೇರಿದಂತೆ ಇತರೆ ಸಾಕ್ಷ್ಯಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ಕಾರಣವಾದ ಅಂಶಗಳು ಹಾಗೂ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ,(ಏಜೆನ್ಸೀಸ್​​).