ರಾಜ್ಯ ಹೆದ್ದಾರಿ 41ರ ಲೋಣಿ ಕ್ರಾಸ್ ಬಳಿ ಸಾರಿಗೆ ಸಂಸ್ಥೆ ಬಸ್ ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವುದು. 
ರಾಜ್ಯ

ರಸ್ತೆ ಅಪಘಾತದಲ್ಲಿ ಮೂವರು ಸಾವು

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಬಸ್-ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ
  • 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಚಡಚಣ: ರಾಜ್ಯ ಹೆದ್ದಾರಿ 41ರ ಲೋಣಿ ಕ್ರಾಸ್ ಬಳಿ ಸಾರಿಗೆ ಸಂಸ್ಥೆ ಬಸ್ ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಓರ್ವ ದಂಪತಿ ಸೇರಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಕ್ಯಾಂಟರ್ ವಾಹನದಲ್ಲಿದ್ದ ಹಾವಿನಾಳ ಗ್ರಾಮದ ಅಶೋಕ ಮಹಾದೇವ ಉಟಗಿ ಆತನ ಪತ್ನಿ ರಾಧಾಬಾಯಿ ಅಶೋಕ ಉಟಗಿ ಹಾಗೂ ಸಾರಿಗೆ ಬಸ್ ಚಾಲಕ ನಿಡಗುಂದಿ ಗ್ರಾಮದ ಹಣಮಂತ ಚಲವಾದಿ ಮೃತಪಟ್ಟವರೆಂದು ಗುರುತಿಸಲಾಗಿದೆ.
ಚಡಚಣದಿಂದ ಬಾದಾಮಿ ಕಡೆಗೆ ಸುಮಾರು 30 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಝಳಕಿ ಕಡೆಯಿಂದ ಚಡಚಣಕ್ಕೆ ಸಿಮೆಂಟ್ ಹೊತ್ತ ಬರುತ್ತಿದ್ದ ಕ್ಯಾಂಟರಿನ ಟಾಯರ್ ಏಕಾಏಕಿ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. 
ಡಿಕ್ಕಿ ರಭಸಕ್ಕೆ ಬಸ್ಸಿನಲ್ಲಿದ್ದ 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ 17ಪ್ರಯಾಣಿಕರಿಗೆ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. 
ಘಟನಾ ಸ್ಥಳಕ್ಕೆ ಚಡಚಣ ಪಿಎಸ್‌ಐ ಸೋಮೇಶ ಗೆಜ್ಜಿ ಹಾಗೂ ಸಿಬ್ಬಂದಿ ಧಾವಿಸಿ, ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.