ಗೊಳಸಂಗಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ಕೂಡಗಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು. 
ರಾಜ್ಯ

ಕಾರು ಅಪಘಾತದಲ್ಲಿ ಮೂವರ ದುರ್ಮರಣ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕೂಡಗಿ ಕ್ರಾಸ್ ಬಳಿ ಡಿವೈಡರ್‌ಗೆ ಡಿಕ್ಕಿ
  • ಮೃತರಾದವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು
  • ಓರ್ವನ ಸ್ಥಿತಿ ಗಂಭೀರ
ಗೊಳಸಂಗಿ (ವಿಜಯಪುರ): ಶಿರಡಿ ಸಾಯಿಬಾಬಾ ದರ್ಶನಕ್ಕೆಂದು ಹುಂಡೈ ಕ್ರೇಟಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-50ರ ಕೂಡಗಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಂಬಿಬಿಎಸ್ ವಿದ್ಯಾರ್ಥಿ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದು, ಓರ್ವ ಸಾವು-ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ಘಟನೆ ಶುಕ್ರವಾರ ಬೆಳಗ್ಗೆ 7-45ರ ಸುಮಾರಿಗೆ ನಡೆದಿದೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ತುಕ್ಕಲದಿನ್ನಿ ಕ್ಯಾಂಪ್ ಗ್ರಾಮದ ಆರ್. ಸತ್ಯವೇಣಿ (36),ಮತ್ತವರ ಮಕ್ಕಳಾದ ಆರ್. ಹರಿವೆಂಕಟರಾಮ್ (20), ಆರ್. ಜಸ್ವಂತ (18) ಸಾವನ್ನಪ್ಪಿದ ದುರ್ದೈವಿಗಳು.
ಕೊಪ್ಪಳ ಜಿಲ್ಲೆಯ ಕಾರಟಗಿಯಿಂದ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವರ ದರ್ಶನಕ್ಕೆಂದು ಆರ್. ರಾಘವೇಂದ್ರ ವೆಂಕಟರಾವ್ (41) ಎಂಬ ವ್ಯಾಪಾರಿ ತಮ್ಮ ಪತ್ನಿ ಆರ್. ಸತ್ಯವೇಣಿ, ಪುತ್ರರಾದ ಆರ್. ಹರಿವೆಂಕಟರಾಮ್, ಆರ್. ಜಸ್ವಂತ್ ಅವರ ಜತೆಗೆ ಶುಕ್ರವಾರ ಬೆಳಗಿನ ಜಾವ ಹೊರಟಿದ್ದರು.ಅಪಘಾತದಲ್ಲಿ ಆರ್. ಸತ್ಯವೇಣಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೇ. ಪುತ್ರ ಆರ್. ಜಸ್ವಂತ (18) ಅವರನ್ನು ವಿಜಯಪುರದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರು ಚಲಾಯಿಸುತ್ತಿದ್ದ ಇನ್ನೋರ್ವ ಪುತ್ರ, ಎಂಬಿಬಿಎಸ್ ವಿದ್ಯಾರ್ಥಿ ಆರ್. ವೆಂಕಟರಾಮ್ (20) ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಿಕಾರಿಯಾಗದೇ ನಿಧನರಾಗಿದ್ದಾರೆ. ಆರ್. ರಾಘವೇಂದ್ರ ವೆಂಕಟರಾವ್ (41) ತಲೆ, ಕೈ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿದ್ದು ಸಾವು-ಬದುಕಿನೊಂದಿಗೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಸೆಣಸಾಡುತ್ತಿದ್ದಾರೆ.
ಮನಗೂಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಗನೆ ಶಿರಡಿ ತಲುಪಬೇಕೆಂದು ವೇಗವಾಗಿ ಕಾರು ಚಲಾವಣೆ ಮಾಡಿದ್ದೇ ಈ ದುರ್ಘಟನೆಗೆ ಕಾರಣವೆಂದು ಅಪಘಾತದಲ್ಲಿ ಬದುಕುಳಿದ ಆರ್. ರಾಘವೇಂದ್ರ ವೆಂಕಟರಾವ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.