Three injured in series of accidents 
ರಾಜ್ಯ

ಸರಣಿ ಅಪಘಾತದಲ್ಲಿ ಮೂವರಿಗೆ ಗಾಯ

ಚಿಂತಾಮಣಿ: ಚಿಂತಾಮಣಿ&ಶ್ರೀನಿವಾಸಪುರ ರಾಷ್ಟ್ರೀಯ ಹೆದ್ದಾರಿಯ ಭೂರಗಮಾಕಲಹಳ್ಳಿ ಗೇಟ್​ ಬಳಿ ಶುಕ್ರವಾರ ಬೆಳಗಿನ ಜಾವ ಮೂರು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ಕಸಬಾ ಹೋಬಳಿ ಅನೂರಿನ ನರಸಿಂಹಪ್ಪ(35), ವೆಂಕಟೇಶ್​ (35)ಹಾಗೂ ಶ್ರೀನಿವಾಸಪುರ ತಾಲೂಕಿನ ಕೊಲ್ಲೂರು ಗ್ರಾಮದ ಶಶಾಂಕ(30) ಗಾಯಗೊಂಡವರು. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಸವಾರರ ತಲೆ ಹಾಗೂ ಕೈಕಾಲುಗಳಿಗೆ ಪೆಟ್ಟು ಬಿದ್ದಿದೆ.
ಅನೂರು ನರಸಿಂಹಪ್ಪ ಮತ್ತು ವೆಂಕಟೇಶ್​ ಕೊತ್ತಂಬರಿ ಮೂಟೆಗಳನ್ನು ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕಟ್ಟಿಕೊಂಡು ಚಿಂತಾಮಣಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಿದ್ದರೆ, ಶಶಾಂಕ ಚಿಂತಾಮಣಿಯಿಂದ ಶ್ರೀನಿವಾಸಪುರದ ಕಡೆ ತೆರಳುತ್ತಿದ್ದರು. ಅಪಘಾತದ ಶಬ್ದದಿಂದ ಎಚ್ಚರಗೊಂಡ ಸ್ಥಳಿಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದು ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.