ಅರಣ್ಯ ಸಿಬ್ಬಂದಿಯ ಎನ್​ಕೌಂಟರ್​ಗೆ ಮೂವರು ಕಾಡುಗಳ್ಳರು ಬಲಿ 
ರಾಜ್ಯ

ಅರಣ್ಯ ಸಿಬ್ಬಂದಿಯ ಎನ್​ಕೌಂಟರ್​ಗೆ ಮೂವರು ಕಾಡುಗಳ್ಳರು ಬಲಿ: ರೊಚ್ಚಿಗೆದ್ದ ಮೃತರ ಸಂಬಂಧಿಕರಿಂದ ಅಧಿಕಾರಿಯ ಕೊಠಡಿ ಧ್ವಂಸ

ಪ್ರಮುಖ ಮುಖ್ಯಾಂಶಗಳು

  • ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿರುವ ಅರಣ್ಯ ಇಲಾಖೆ
  • ಕಾಡುಪ್ರಾಣಿ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದ ವೇಳೆ ದಾಳಿ
  • ದಾಳಿಯ ವೇಳೆ ಅರಣ್ಯ ಇಲಾಖೆಯ ಎನ್​ಕೌಂಟರ್​ಗೆ ಮೂವರು ಬೇಟೆಗಾರರು ಬಲಿ
ಚಾಮರಾಜನಗರ: ವನ್ಯಜೀವಿ ಬೇಟೆಯಾಡಿ ಮಾಂಸವನ್ನು ಬೇರ್ಪಡಿಸುತ್ತಿದ್ದ ವೇಳೆ ದೌಡಾಯಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಫೈರಿಂಗ್​ನಲ್ಲಿ ಮೂವರು ಕಾಡುಗಳ್ಳರು ಬಲಿಯಾಗಿದ್ದಾರೆ. 
ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೂವರು ಕಳ್ಳಬೇಟೆಗಾರರು ಉಸಿರು ಚೆಲ್ಲಿದ್ದಾರೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಹೋದಾಗ ತಮ್ಮ ಮೇಲೆ ಕೃತ್ಯ ಎಸೆಗಲು ಬೇಟೆಗಾರರು ಮುಂದಾದರು. ಹೀಗಾಗಿ, ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೂ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಮೃತರನ್ನು ಹನೂರು ತಾಲೂಕಿನ ಮರಿಯ ಮಂಗಲದ ರೈತ ಆಂತೋಣಿ ಸ್ವಾಮಿ (50), ಜಗನ್ನಾಥ‌ದೊಡ್ಡಿಯ ರೈತ‌ ಜಾನ್ ರೋಸ್ ಪೀಟರ್ (42) , ಲಾಸರ್ದೊಡ್ಡಿಯ‌ ಹಿಟಾಚಿ ಆಪರೇಟರ್ ಕುಮಾರ್(33) ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಈ ಮಧ್ಯೆ, ಮೃತರ ಸಂಬಂಧಿಕರು ತೀವ್ರ ಆಕ್ರೋಶ ಹೊರಹಾಕಿದ್ದು, ಡಿಆರ್​ಎಫ್​ಒ ಅಧಿಕಾರಿಯ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.  

ಮೃತದೇಹಗಳು ಮೈಸೂರಿಗೆ ರವಾನೆ

ಶವ ಪರೀಕ್ಷೆಗಾಗಿ‌ ಮೂವರ ಮೃತದೇಹಗಳನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ಬದಲು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅರಣ್ಯ ಇಲಾಖೆಯ ಗುಂಡೇಟಿಗೆ ಮೂವರು ಕಳ್ಳಬೇಟೆಗಾರರು ಮೃತಪಟ್ಟಿದ್ದರೆ, ಮರಿಯಾ ಮಂಗಲದ ಮಹಿಮದಾಸ್(45) ಸ್ಥಳದಿಂದ ಪರಾರಿಯಾಗಿದ್ದಾ‌ನೆ ಎಂದು ತಿಳಿದುಬಂದಿದೆ. 
ಅರಣ್ಯ ಇಲಾಖೆಯ ಶೂಟೌಟ್​ನಲ್ಲಿ ಮೃತಪಟ್ಟ ಮೂವರ ಸಂಬಂಧಿಕರು ರೊಚ್ಚಿಗೆದ್ದು, ಅರಣ್ಯ ರಕ್ಷಕರ ವಸತಿ ಗೃಹದ ಬೀಗ ಹೊಡೆದು ಹಾಕಿ ಒಳಗಿದ್ದ ಪೀಠೋಪಕರಣಗಳನ್ನು ಹೊಡೆದು ಹಾಕಿದ್ದಾರೆ. ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿರುವ ಅರಣ್ಯ ಇಲಾಖೆ ಕಚೇರಿ ಮೇಲೆಯೂ ದಾಳಿ ಮಾಡಿದ್ದಾರೆ.